

ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದ ವಿಳಂಬದ ಬಗ್ಗೆ ಸಚಿವ ಸಂತೋಷ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯಗಳು ಬರಗಾಲಕ್ಕೆ ತುತ್ತಾದಾಗ ನೆರವು ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕೇಂದ್ರದಿಂದ ಹಣಕಾಸಿನ ನೆರವು ಸಿಕ್ಕಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಕೇಂದ್ರದಿಂದ ಹಣ ಬಂದಿಲ್ಲ. ಬಿಜೆಪಿ ಸರ್ಕಾರವಿದ್ದಾಗಲೇ ಬರ ಬರಿಹಾರ ಬಂದಿಲ್ಲ ಎಂದರೆ ಈಗಲೂ ಬರುವುದಿಲ್ಲ ಎಂದೇ ನಾವು ಭಾವಿಸುತ್ತಿದ್ದೇವೆ ಎಂದರು.
ನಾವು ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರವು ತಮ್ಮ ಹಕ್ಕು ಮಂಡಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿ ಬರ ಪರಿಹಾರ ಹಣವನ್ನು ಪಡೆದಿತ್ತು. ಆಗಲೇ ಕೇಂದ್ರಕ್ಕೆ ನಾಚಿಕೆಯಾಗಬೇಕಿತ್ತು. ಅದೇನು ಅವರ ದುಡ್ಡಲ್ಲ, ಅದು ನಮ್ಮದೇ ದುಡ್ಡು ಎಂದು ತಿಳಿಸಿದರು.
ಸದ್ಯ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ವಿಷಯದ ಕುರಿತು ಮಾತುಕತೆ ನಡೆಸುತ್ತಿದ್ದು, ಸಕಾರಾತ್ಮಕ ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ತಮ್ಮ ತಾಯಿ ಸೋನಿಯಾ ಬಗ್ಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಹುಚ್ಚು ಚರ್ಚೆಗಳು ಅರ್ಥಹೀನ. ತಮ್ಮ ತಂದೆ ಮತ್ತು ತಾಯಿ ಯಾವ ರೀತಿಯಲ್ಲಿ ಅನ್ಯೋನ್ಯವಾಗಿದ್ದರು ಎಂಬುದನ್ನು ರಾಹುಲ್ ತಿಳಿಸಿದ್ದಾರೆ. ಆದರೆ, ಇವರು ಬೇರೆಯದೇ ರೀತಿಯಲ್ಲಿ ಹೇಳುತ್ತಿದ್ದಾರೆ. ಮೋದಿಯವರು ಮದುವೆಯಾಗಿದ್ದರೂ ಹೆಂಡತಿಯನ್ನು ಬಿಟ್ಟಿದ್ದಾರಲ್ಲ ಅದರ ಬಗ್ಗೆ ಏನು ಹೇಳೋಣ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಹೇಳಿದ್ದನ್ನು ಚರ್ಚೆ ಮಾಡಬೇಕು ಎಂದಾದರೆ ಮೋದಿಯವರ ವಿಚಾರವನ್ನು ಬಿಜೆಪಿಗರು ಚರ್ಚಿಸಬೇಕು. ಈ ರೀತಿಯ ಚರ್ಚೆಗಳೆಲ್ಲ ನಡೆಯುವುದು ವ್ಯರ್ಥ. ಈ ಬಗ್ಗೆ ನಾನು ಹೆಚ್ಚೇನು ಹೇಳಲು ಬಯಸುವುದಿಲ್ಲ ಎಂದರು.