‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

ಇಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅದುವೇ ವಾಸ್ತವ. ತಮಿಳುನಾಡಿಗೂ ಇದು ಗೊತ್ತಿದೆ, ನಮಗೂ ಗೊತ್ತಿದೆ, ಜಗತ್ತಿಗೂ ತಿಳಿದಿದೆ. ಎಲ್ಲೆಲ್ಲಿ ಎಷ್ಟು ನೀರು ಲಭ್ಯವಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
CM D K Shivakumar
ಸಿಎಂ ಡಿ ಕೆ ಶಿವಕುಮಾರ್
Updated on: 

ನಮ್ಮ ರಾಜ್ಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೆ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಿದ್ಧವಿದ್ದೇವೆ. ಆದರೆ, ನಮ್ಮಲ್ಲಿ ಕುಡಿಯುವ ನೀರಿನ ಅಗತ್ಯವನ್ನೇ ಪೂರೈಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಶುಕ್ರವಾರ ಹೇಳಿದ್ದಾರೆ.

ಕರ್ನಾಟಕವು 11 ಸಾವಿರ ಮಿಲಿಯನ್ ಕ್ಯೂಬಿಕ್ (TMC) ಅಡಿ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಸಿಎಂ ಈ ಹೇಳಿಕೆ ನೀಡಿದ್ದಾರೆ.

ನಮ್ಮಲ್ಲಿ ನೀರಿದ್ದರೆ ಖಂಡಿತವಾಗಿಯೂ ತಮಿಳುನಾಡಿಗೆ ನೀರು ಕೊಡುತ್ತೇವೆ. ಕುಡಿಯಲು ನಮಗೇ ನೀರಿಲ್ಲ. ನಮ್ಮ ರಾಜ್ಯವನ್ನು ರಕ್ಷಿಸುವ ಜವಾಬ್ದಾರಿ ನನ್ನ ಮೇಲಿದೆ. ನೀರಿನ ಲಭ್ಯತೆಯ ಬಗ್ಗೆ ನಾನು ಈ ಹಿಂದೆಯೇ ನಮ್ಮ ರೈತರಿಗೆ ಎಚ್ಚರಿಕೆ ನೀಡಿದ್ದೆ ಎಂದು ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.

CM D K Shivakumar
ಕಾವೇರಿ ಕದನದಲ್ಲಿ ಮಹಾ ತಿರುವು! ಸುಪ್ರೀಂನಲ್ಲಿ ವಿಜಯ್ ಸರ್ಕಾರದ ಅರ್ಜಿ ವಜಾ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್: ತಮಿಳುನಾಡಿಗೆ ನಿತ್ಯ 2,000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು

ನೀರಿನ ಲಭ್ಯತೆಯ ವಾಸ್ತವ ಸ್ಥಿತಿಯನ್ನು ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳು ಅರಿತಿರುವುದರಿಂದಲೇ ತಮಿಳುನಾಡಿನ ಅರ್ಜಿಗಳು ವಜಾಗೊಂಡಿವೆ ಎಂದು ಅವರು ಹೇಳಿದರು.

ಇಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅದುವೇ ವಾಸ್ತವ. ತಮಿಳುನಾಡಿಗೂ ಇದು ಗೊತ್ತಿದೆ, ನಮಗೂ ಗೊತ್ತಿದೆ, ಜಗತ್ತಿಗೂ ತಿಳಿದಿದೆ. ಎಲ್ಲೆಲ್ಲಿ ಎಷ್ಟು ನೀರು ಲಭ್ಯವಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ತಮಿಳುನಾಡು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ವಜಾಗೊಳಿಸಿತು. ಹೆಚ್ಚುವರಿ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲು ಅವಕಾಶ ಕೋರಿ ತಮಿಳುನಾಡು ಸಲ್ಲಿಸಿದ್ದ ಮೂರನೇ ಅರ್ಜಿಯನ್ನೂ ವಜಾಗೊಳಿಸುವುದಾಗಿ ನ್ಯಾಯಪೀಠ ತಿಳಿಸಿತು.

CM D K Shivakumar
ಕಾವೇರಿ ಕದನದಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್! 11 ಟಿಎಂಸಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಎರಡೂ ಅರ್ಜಿ ಸುಪ್ರೀಂನಲ್ಲಿ ವಜಾ

ಬಾಗಿನ ಕೂಡ ಅರ್ಪಿಸಿಲ್ಲ

ಈ ವರ್ಷ ಕಾವೇರಿಗೆ ಸಾಂಪ್ರದಾಯಿಕವಾಗಿ ಸಲ್ಲಿಸುವ ಬಾಗಿನವನ್ನೂ ತಾವು ಅರ್ಪಿಸಿಲ್ಲ. ಅಷ್ಟೊಂದು ಕಠಿಣ ಪರಿಸ್ಥಿತಿ ಇದೆ. ಕಾವೇರಿ ಜಲ ವಿವಾದ ಮತ್ತು ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಟ್ಯಾಗೋರ್ ಸೇರಿದಂತೆ ವಿವಿಧ ರಾಜಕೀಯ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ವಿಷಯಗಳಲ್ಲಿನ ವಾಸ್ತವಾಂಶಗಳು ಹಾಗೂ ನ್ಯಾಯಾಲಯದ ಆದೇಶದ ಬಗ್ಗೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ವಿವರಿಸುವುದಾಗಿ ಹೇಳಿದರು.

ನಮ್ಮ ಕೆಲವು ಸ್ನೇಹಿತರು ಈ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ನಾನು ವಾಸ್ತವಾಂಶಗಳನ್ನು ವಿವರಿಸುತ್ತೇನೆ. ಈ ವಿಷಯದ ಬಗ್ಗೆ ನಮ್ಮ ಪಕ್ಷದ ಅಧ್ಯಕ್ಷರಿಗೂ ಮಾಹಿತಿ ನೀಡುತ್ತಿದ್ದೇನೆ ಎಂದು ಹೇಳಿದರು.

ಮೇಕೆದಾಟಿಗೆ ತಮಿಳು ನಾಡು ವಿರೋಧ

ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಮೇಕೆದಾಟು ಯೋಜನೆಯಡಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯ ನಿರ್ಮಿಸುವ ಉದ್ದೇಶವಿದೆ. ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವುದು ಮತ್ತು ವಿದ್ಯುತ್ ಉತ್ಪಾದಿಸುವುದು ಈ ಬಹು ಉದ್ದೇಶಿತ ಯೋಜನೆಯ ಉದ್ದೇಶವಾಗಿದೆ.

ಆದರೆ, ಈ ಯೋಜನೆಯಿಂದ ಕಾವೇರಿ ನೀರಿನಲ್ಲಿ ತನ್ನ ಪಾಲಿನ ಮೇಲೆ ಪರಿಣಾಮ ಬೀರಬಹುದು ಎಂದು ವಾದಿಸಿರುವ ತಮಿಳುನಾಡು ಯೋಜನೆಯನ್ನು ವಿರೋಧಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X