

ಬೆಂಗಳೂರು: ರಾಜ್ಯ ಸರ್ಕಾರವು ಪ್ರಜಾ ಸೇವಾ ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ (ಐಪಿಜಿಆರ್ಎಸ್) ಪೋರ್ಟಲ್ನಲ್ಲಿ ದಾಖಲಾಗುವ ಎಲ್ಲ ಸಾರ್ವಜನಿಕರ ದೂರುಗಳನ್ನು ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ-2011ರ ವ್ಯಾಪ್ತಿಗೆ ತಂದಿದ್ದು, ಇದರಿಂದ ಸರ್ಕಾರದ ಎಲ್ಲ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ನಿಗದಿತ ಕಾಲಮಿತಿಯೊಳಗೆ ದೂರುಗಳನ್ನು ಪರಿಹರಿಸುವುದು ಕಡ್ಡಾಯವಾಗಲಿದೆ.
ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 1902 ಸಹಾಯವಾಣಿ, ವಾಟ್ಸ್ಆ್ಯಪ್, ಸಾಮಾಜಿಕ ಜಾಲತಾಣಗಳು, ಸರ್ಕಾರಿ ಕಚೇರಿಗಳು, ನಾಗರಿಕ ಸೇವಾ ಕೇಂದ್ರಗಳು ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಗಳ ಮೂಲಕ ಸಲ್ಲಿಸುವ ದೂರುಗಳೂ ಇನ್ಮುಂದೆ ಸಕಾಲ ವ್ಯವಸ್ಥೆಯ ವ್ಯಾಪ್ತಿಗೆ ಬರಲಿವೆ.
ಹೊಸ ವ್ಯವಸ್ಥೆಯಡಿ ದೂರುಗಳನ್ನು ವಿಲೇವಾರಿ ಮಾಡುವ ಜವಾಬ್ದಾರಿ ಹೊಂದಿರುವ ಮೊದಲ ಹಂತದ ಅಧಿಕಾರಿಗಳು (ಎಲ್-1) ದೂರು ನಿಯೋಜನೆಯಾದ 21 ದಿನಗಳೊಳಗೆ ಪರಿಹಾರ ಒದಗಿಸಬೇಕು. ತಪ್ಪು ವರ್ಗ ಅಥವಾ ಇಲಾಖೆಗೆ ದಾಖಲಾಗಿರುವ ದೂರುಗಳನ್ನು ಸರಿಯಾದ ವಿಭಾಗಕ್ಕೆ ವರ್ಗಾಯಿಸಲು ಹೆಚ್ಚುವರಿಯಾಗಿ ಏಳು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ದೂರು ದಾಖಲಾದ ದಿನದಿಂದ ಒಟ್ಟು 28 ದಿನಗಳನ್ನು ಮೀರುವಂತಿಲ್ಲ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
21 ದಿನಗಳೊಳಗೆ ಪರಿಹಾರವಾಗದ ದೂರುಗಳು ಅಥವಾ ನಾಗರಿಕರಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಪ್ರಕರಣಗಳು ಸ್ವಯಂಚಾಲಿತವಾಗಿ ಮೊದಲ ಮೇಲ್ಮನವಿ ಪ್ರಾಧಿಕಾರವಾದ ಎರಡನೇ ಹಂತದ ಅಧಿಕಾರಿಗೆ (ಎಲ್-2) ವರ್ಗಾವಣೆಯಾಗಲಿವೆ.
ಅಲ್ಲಿಯೂ ಮುಂದಿನ 21 ದಿನಗಳಲ್ಲಿ ದೂರು ಇತ್ಯರ್ಥವಾಗದಿದ್ದರೆ, ಅದನ್ನು ಮೇಲ್ಮನವಿ ಪ್ರಾಧಿಕಾರದ ಮೂರನೇ ಹಂತದ ಅಧಿಕಾರಿಗೆ (ಎಲ್-3) ವರ್ಗಾಯಿಸಲಾಗುತ್ತದೆ. ಈ ಪ್ರಾಧಿಕಾರವು ಹೆಚ್ಚುವರಿ 21 ದಿನಗಳೊಳಗೆ ದೂರನ್ನು ವಿಲೇವಾರಿ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ಸಕಾಲ ಸೇವೆಗಳ ತಿದ್ದುಪಡಿ ಕಾಯ್ದೆ-2026ರ ಪ್ರಕಾರ, ಸೇವೆಗಳನ್ನು ಒದಗಿಸುವಲ್ಲಿ ವಿಳಂಬ ಮಾಡಿದ ಅಧಿಕಾರಿಗಳಿಗೆ ಗರಿಷ್ಠ ₹1,500 ಪರಿಹಾರ ದಂಡ ವಿಧಿಸಲಾಗುತ್ತದೆ. ನಿಗದಿತ ಅವಧಿಯೊಳಗೆ ಅರ್ಜಿಯನ್ನು ವಿಲೇವಾರಿ ಮಾಡಿದ್ದರೂ ಸೇವೆಯಲ್ಲಿ ಲೋಪ ಕಂಡುಬಂದರೆ ಅಥವಾ ಅರ್ಜಿಯನ್ನು ತಪ್ಪಾಗಿ ತಿರಸ್ಕರಿಸಿದ್ದರೆ ನಾಗರಿಕರೂ ಗರಿಷ್ಠ ₹1,500 ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ.
ಇದೇ ವೇಳೆ, ದುರುದ್ದೇಶಪೂರಿತ ದೂರುಗಳಿಂದ ಅಧಿಕಾರಿಗಳನ್ನು ರಕ್ಷಿಸುವ ನಿಟ್ಟಿನಲ್ಲೂ ಸರ್ಕಾರ ಕ್ರಮ ಕೈಗೊಂಡಿದೆ. ಉದ್ದೇಶಪೂರ್ವಕವಾಗಿ ಸುಳ್ಳು ಅಥವಾ ದುರುದ್ದೇಶಪೂರಿತ ದೂರು ದಾಖಲಿಸಿರುವುದು ಸಾಬೀತಾದರೆ ಸಂಬಂಧಪಟ್ಟ ನಾಗರಿಕರಿಗೆ ₹1,500 ದಂಡ ವಿಧಿಸಲಾಗುತ್ತದೆ. ಪುನರಾವರ್ತಿತ ತಪ್ಪುಗಳಿಗೂ ಇದೇ ದಂಡ ಅನ್ವಯವಾಗಲಿದ್ದು, ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುತ್ತದೆ.
ಸೂಕ್ತ ವಿಚಾರಣೆ ನಡೆಸಿ, ಅರ್ಹತೆಯ ಆಧಾರದ ಮೇಲೆ ದೂರನ್ನು ವಿಲೇವಾರಿ ಮಾಡಿ, ಕೈಗೊಂಡ ಕ್ರಮದ ವರದಿಯನ್ನು (ಎಟಿಆರ್) ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದ ನಂತರವಷ್ಟೇ ದೂರನ್ನು ಪರಿಹರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಯೋಜನೆಗಳ ಲೆಕ್ಕಾಚಾರ ಈಗ ಜನರ ಬೆರಳತುದಿಯಲ್ಲಿ..!
ರಾಜ್ಯ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ವಿವಿಧ ಇಲಾಖೆಗಳ ಕಾರ್ಯಕ್ಷಮತೆಯ ಮಾಹಿತಿಯನ್ನು ನೇರವಾಗಿ ಸಾರ್ವಜನಿಕರ ಮುಂದಿಡುವ ಮಹತ್ವಾಕಾಂಕ್ಷೆಯ ದ್ವಿಭಾಷಾ ಸಿಎಂ ಡ್ಯಾಶ್ಬೋರ್ಡ್ (CM Dashboard) ಪೋರ್ಟಲ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಚಾಲನೆ ನೀಡಿದರು.
ವಿಧಾನಸೌಧದ ಮೂರನೇ ಮಹಡಿಯಲ್ಲಿ ನವೀಕರಿಸಲಾದ 'ಸಂಗಮ' ಸಭಾಂಗಣವನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿಗಳು ಸಿಎಂ ಡ್ಯಾಶ್ಬೋರ್ಡ್ ಅನ್ನು ಲೋಕಾರ್ಪಣೆಗೊಳಿಸಿದರು,
ಸರ್ಕಾರದ ಪ್ರಮುಖ ಕಾರ್ಯಕ್ರಮಗಳು, ಅವುಗಳ ಗುರಿಗಳು ಹಾಗೂ ಪ್ರಗತಿಯ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಸಾರ್ವಜನಿಕ ದ್ವಿಭಾಷಾ ಅಂತರ್ಜಾಲ ವೇದಿಕೆ ಇದಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಮುಖ್ಯಮಂತ್ರಿಗಳಿಗೆ ನೆರವಾಗುವ ಈ ವ್ಯವಸ್ಥೆಯನ್ನು ರಾಜ್ಯದ ಪ್ರತಿಯೊಬ್ಬ ನಾಗರಿಕರೂ ಬಳಸಬಹುದಾಗಿದೆ.
ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಸರ್ಕಾರದ ಮೊದಲ 100 ದಿನಗಳ 10 ವಲಯಗಳಲ್ಲಿನ 51 ಪ್ರಮುಖ ಗುರಿಗಳ ಪ್ರಗತಿಯನ್ನು ಈ ಡ್ಯಾಶ್ಬೋರ್ಡ್ನಲ್ಲಿ ದಾಖಲಿಸಲಾಗುತ್ತದೆ. ಕೃಷಿ ಮತ್ತು ರೈತರು, ಉದ್ಯೋಗ ಹಾಗೂ ಯುವ ಸಬಲೀಕರಣ, ಶಾಲಾ ಶಿಕ್ಷಣ, ಕೈಗಾರಿಕೆ ಮತ್ತು ಉತ್ಪಾದನೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ನಾವೀನ್ಯತೆ, ಆರೋಗ್ಯ, ವಾಯುಮಾಲಿನ್ಯ ನಿಯಂತ್ರಣ, ಬೆಂಗಳೂರಿನಾಚೆಗಿನ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ನಾಗರಿಕ ಸೇವೆಗಳು ಹಾಗೂ 2026ರ ಜೂನ್ 3ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಧಾರಗಳು ಈ ವ್ಯಾಪ್ತಿಯಲ್ಲಿ ಸೇರಿವೆ ಎಂದು ತಿಳಿಸಲಾಗಿದೆ.
ಪ್ರತಿಯೊಂದು ಗುರಿಗೂ ಪ್ರತ್ಯೇಕ ಪುಟವನ್ನು ಒದಗಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಇಲಾಖೆ, ಭೌತಿಕ ಮತ್ತು ಆರ್ಥಿಕ ಗುರಿಗಳು, ಅನುಮೋದನೆ ಹಾಗೂ ಯೋಜನೆ ಆರಂಭಿಸಿದ ದಿನಾಂಕ, ತ್ರೈಮಾಸಿಕವಾರು ಪ್ರಗತಿ, ಗುರಿ ಸಾಧನೆಯ ವಿವರಗಳು, ಜಿಲ್ಲಾವಾರು ಅಂಕಿಅಂಶಗಳು ಮತ್ತು ಸರ್ಕಾರದ ಆದೇಶಗಳು ಹಾಗೂ ಮಾರ್ಗಸೂಚಿಗಳ ಮಾಹಿತಿಯನ್ನು ವೀಕ್ಷಿಸಬಹುದು.
ಜನರಿಗೆ ನೀಡಿದ ಪ್ರತಿಯೊಂದು ಭರವಸೆ ಹಾಗೂ ಖರ್ಚು ಮಾಡಿದ ಪ್ರತಿಯೊಂದು ರೂಪಾಯಿಯ ಲೆಕ್ಕವೂ ಅವರಿಗೆ ಕಾಣುವಂತಿರಬೇಕು. ಸ್ಪಷ್ಟ ಗುರಿಗಳ ಆಧಾರದಲ್ಲಿ ಪ್ರತಿಯೊಂದು ಯೋಜನೆಯ ಪ್ರಗತಿಯನ್ನು ನಾನು ಪರಿಶೀಲಿಸುತ್ತೇನೆ. ನಾನು ನೋಡುವ ಅಂಕಿಅಂಶಗಳನ್ನೇ ನಾಗರಿಕರೂ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ಇಲಾಖೆಗಳ ಅಧಿಕೃತ ವ್ಯವಸ್ಥೆಗಳಿಂದಲೇ ಈ ಡ್ಯಾಶ್ಬೋರ್ಡ್ಗೆ ಮಾಹಿತಿ ಸಂಗ್ರಹವಾಗಲಿದ್ದು, ಪ್ರತಿದಿನವೂ ನವೀಕರಿಸಲಾಗುತ್ತದೆ. ಇಲಾಖೆಗಳು ಸಿಎಂ ಡೇಟಾ ಪೋರ್ಟಲ್ ಮೂಲಕ ಯೋಜನೆಗಳ ಪ್ರಗತಿಯ ವಿವರಗಳನ್ನು ಅಪ್ಡೇಟ್ ಮಾಡಲಿವೆ. ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.