ಸರ್ಕಾರದ ಯೋಜನೆಗಳ ಲೆಕ್ಕಾಚಾರ ಈಗ ಜನರ ಬೆರಳತುದಿಯಲ್ಲಿ: 'CM Dashboard' ಪೋರ್ಟಲ್‌ಗೆ ಡಿ.ಕೆ. ಶಿವಕುಮಾರ್ ಚಾಲನೆ

ಸರ್ಕಾರದ ಪ್ರಮುಖ ಕಾರ್ಯಕ್ರಮಗಳು, ಅವುಗಳ ಗುರಿಗಳು ಹಾಗೂ ಪ್ರಗತಿಯ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಸಾರ್ವಜನಿಕ ದ್ವಿಭಾಷಾ ಅಂತರ್ಜಾಲ ವೇದಿಕೆ ಇದಾಗಿದೆ.
CM Dashboard
ಸಿಎಂ ಡ್ಯಾಶ್‌ಬೋರ್ಡ್
Updated on: 

ಬೆಂಗಳೂರು: ರಾಜ್ಯ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ವಿವಿಧ ಇಲಾಖೆಗಳ ಕಾರ್ಯಕ್ಷಮತೆಯ ಮಾಹಿತಿಯನ್ನು ನೇರವಾಗಿ ಸಾರ್ವಜನಿಕರ ಮುಂದಿಡುವ ಮಹತ್ವಾಕಾಂಕ್ಷೆಯ ದ್ವಿಭಾಷಾ ಸಿಎಂ ಡ್ಯಾಶ್‌ಬೋರ್ಡ್ (CM Dashboard) ಪೋರ್ಟಲ್‌ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಚಾಲನೆ ನೀಡಿದರು.

ವಿಧಾನಸೌಧದ ಮೂರನೇ ಮಹಡಿಯಲ್ಲಿ ನವೀಕರಿಸಲಾದ 'ಸಂಗಮ' ಸಭಾಂಗಣವನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿಗಳು ಸಿಎಂ ಡ್ಯಾಶ್‌ಬೋರ್ಡ್ ಅನ್ನು ಲೋಕಾರ್ಪಣೆಗೊಳಿಸಿದರು,

ಸರ್ಕಾರದ ಪ್ರಮುಖ ಕಾರ್ಯಕ್ರಮಗಳು, ಅವುಗಳ ಗುರಿಗಳು ಹಾಗೂ ಪ್ರಗತಿಯ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಸಾರ್ವಜನಿಕ ದ್ವಿಭಾಷಾ ಅಂತರ್ಜಾಲ ವೇದಿಕೆ ಇದಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಮುಖ್ಯಮಂತ್ರಿಗಳಿಗೆ ನೆರವಾಗುವ ಈ ವ್ಯವಸ್ಥೆಯನ್ನು ರಾಜ್ಯದ ಪ್ರತಿಯೊಬ್ಬ ನಾಗರಿಕರೂ ಬಳಸಬಹುದಾಗಿದೆ.

ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಸರ್ಕಾರದ ಮೊದಲ 100 ದಿನಗಳ 10 ವಲಯಗಳಲ್ಲಿನ 51 ಪ್ರಮುಖ ಗುರಿಗಳ ಪ್ರಗತಿಯನ್ನು ಈ ಡ್ಯಾಶ್‌ಬೋರ್ಡ್‌ನಲ್ಲಿ ದಾಖಲಿಸಲಾಗುತ್ತದೆ. ಕೃಷಿ ಮತ್ತು ರೈತರು, ಉದ್ಯೋಗ ಹಾಗೂ ಯುವ ಸಬಲೀಕರಣ, ಶಾಲಾ ಶಿಕ್ಷಣ, ಕೈಗಾರಿಕೆ ಮತ್ತು ಉತ್ಪಾದನೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ನಾವೀನ್ಯತೆ, ಆರೋಗ್ಯ, ವಾಯುಮಾಲಿನ್ಯ ನಿಯಂತ್ರಣ, ಬೆಂಗಳೂರಿನಾಚೆಗಿನ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ನಾಗರಿಕ ಸೇವೆಗಳು ಹಾಗೂ 2026ರ ಜೂನ್ 3ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಧಾರಗಳು ಈ ವ್ಯಾಪ್ತಿಯಲ್ಲಿ ಸೇರಿವೆ ಎಂದು ತಿಳಿಸಲಾಗಿದೆ.

CM Dashboard
ಮೋದಿ 20 ಗಂಟೆ ಕೆಲಸ ಮಾಡಿದ್ರೆ, ಡಿಕೆಶಿ ಅದಕ್ಕಿಂತ ಹೆಚ್ಚು ತಾಸು ಕೆಲಸ ಮಾಡ್ತಾರೆ; ಮತ್ತೆ ಸಿಎಂ ಆಗಬೇಕು: ಜಿ.ಟಿ ದೇವೇಗೌಡ

ಪ್ರತಿಯೊಂದು ಗುರಿಗೂ ಪ್ರತ್ಯೇಕ ಪುಟವನ್ನು ಒದಗಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಇಲಾಖೆ, ಭೌತಿಕ ಮತ್ತು ಆರ್ಥಿಕ ಗುರಿಗಳು, ಅನುಮೋದನೆ ಹಾಗೂ ಯೋಜನೆ ಆರಂಭಿಸಿದ ದಿನಾಂಕ, ತ್ರೈಮಾಸಿಕವಾರು ಪ್ರಗತಿ, ಗುರಿ ಸಾಧನೆಯ ವಿವರಗಳು, ಜಿಲ್ಲಾವಾರು ಅಂಕಿಅಂಶಗಳು ಮತ್ತು ಸರ್ಕಾರದ ಆದೇಶಗಳು ಹಾಗೂ ಮಾರ್ಗಸೂಚಿಗಳ ಮಾಹಿತಿಯನ್ನು ವೀಕ್ಷಿಸಬಹುದು.

ಜನರಿಗೆ ನೀಡಿದ ಪ್ರತಿಯೊಂದು ಭರವಸೆ ಹಾಗೂ ಖರ್ಚು ಮಾಡಿದ ಪ್ರತಿಯೊಂದು ರೂಪಾಯಿಯ ಲೆಕ್ಕವೂ ಅವರಿಗೆ ಕಾಣುವಂತಿರಬೇಕು. ಸ್ಪಷ್ಟ ಗುರಿಗಳ ಆಧಾರದಲ್ಲಿ ಪ್ರತಿಯೊಂದು ಯೋಜನೆಯ ಪ್ರಗತಿಯನ್ನು ನಾನು ಪರಿಶೀಲಿಸುತ್ತೇನೆ. ನಾನು ನೋಡುವ ಅಂಕಿಅಂಶಗಳನ್ನೇ ನಾಗರಿಕರೂ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ಇಲಾಖೆಗಳ ಅಧಿಕೃತ ವ್ಯವಸ್ಥೆಗಳಿಂದಲೇ ಈ ಡ್ಯಾಶ್‌ಬೋರ್ಡ್‌ಗೆ ಮಾಹಿತಿ ಸಂಗ್ರಹವಾಗಲಿದ್ದು, ಪ್ರತಿದಿನವೂ ನವೀಕರಿಸಲಾಗುತ್ತದೆ. ಇಲಾಖೆಗಳು ಸಿಎಂ ಡೇಟಾ ಪೋರ್ಟಲ್ ಮೂಲಕ ಯೋಜನೆಗಳ ಪ್ರಗತಿಯ ವಿವರಗಳನ್ನು ಅಪ್‌ಡೇಟ್ ಮಾಡಲಿವೆ. ಮೊಬೈಲ್ ಫೋನ್ ಮತ್ತು ಕಂಪ್ಯೂಟರ್‌ಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X