"ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯವನ್ನಲ್ಲ"; ಅಪ್ರಾಪ್ತ ಬಾಲಕಿಯ ಶಿರಚ್ಛೇದ ಮಾಡಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್..!

ಅಪರಾಧಿಯು ಬಾಲಕಿಯ ತಲೆ ಕಡಿಯುವ ಮೂಲಕ ಆಕೆಯ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದ್ದಾನೆ, ಆದರೆ, ನ್ಯಾಯದ ಧ್ವನಿಯನ್ನು ಹತ್ತಿಕ್ಕಲು ಅವನಿಂದ ಸಾಧ್ಯವಿಲ್ಲ.
court (file pic)
ನ್ಯಾಯಾಲಯ (ಸಂಗ್ರಹ ಚಿತ್ರ)online desk
Updated on: 

ಮಡಿಕೇರಿ: ಎರಡು ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಅಪರಾಧಿ ಎಂ.ಪಿ. ಓಂಕಾರಪ್ಪ (ಅಲಿಯಾಸ್ ಪ್ರಕಾಶ್/ಪಾಪು) ಎಂಬಾತನಿಗೆ ಮರಣದಂಡನೆ ಹಾಗೂ 80 ಸಾವಿರ ರೂಪಾಯಿ ದಂಡ ವಿಧಿಸಿ ಮಡಿಕೇರಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಶನಿವಾರ (ನ. 21) ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಧೀಶರಾದ ಜಿ. ಸುರೇಂದ್ರ ಅವರು, ಅಪರಾಧಿಯ ವಿರುದ್ಧದ ಕೊಲೆ ಹಾಗೂ ಲೈಂಗಿಕ ದೌರ್ಜನ್ಯ ಆರೋಪಗಳು ಸಾಬೀತಾಗಿರುವುದನ್ನು ಎತ್ತಿಹಿಡಿದರು.

ತೀರ್ಪು ನೀಡುವ ವೇಳೆ, ಅಪರಾಧಿಯು ಬಾಲಕಿಯ ತಲೆ ಕಡಿಯುವ ಮೂಲಕ ಆಕೆಯ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದ್ದಾನೆ, ಆದರೆ, ನ್ಯಾಯದ ಧ್ವನಿಯನ್ನು ಹತ್ತಿಕ್ಕಲು ಅವನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಯು.ಎಸ್. ಮೀನಾ ಎಂಬ 16 ವರ್ಷದ ಬಾಲಕಿಯನ್ನು 2024ರ ಮೇ 9ರಂದು ಹತ್ಯೆ ಮಾಡಲಾಗಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮೀನಾ ಮತ್ತು ಆಕೆಯ ಕುಟುಂಬದವರು ಸಂಭ್ರಮಾಚರಣೆ ನಡೆಸಿದ ಕೆಲವೇ ಸಮಯದ ಬಳಿಕ ಈ ದುರ್ಘಟನೆ ನಡೆದಿತ್ತು.

court (file pic)
ನಾಲ್ಕೇ ತಿಂಗಳಲ್ಲಿ 22 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಧೀಶ; ಆತಂಕದಿಂದ 100 ಕೊಲೆ ಪ್ರಕರಣ ಬೇರೆ ಪೀಠಕ್ಕೆ ಶಿಫ್ಟ್!

ಹಮ್ಮಿಯಾಲ ಗ್ರಾಮದ ನಿವಾಸಿಯಾಗಿದ್ದ ಓಂಕಾರಪ್ಪ, ಮೀನಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಆಕೆಯ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದ. ಮೇ 9ರ ಸಂಜೆ ಇಬ್ಬರ ನಿಶ್ಚಿತಾರ್ಥವನ್ನೂ ನಡೆಸಲಾಗಿತ್ತು.

ಬಾಲಕಿಯ ನಿಶ್ಚಿತಾರ್ಥದ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಕೆಗೆ 18 ವರ್ಷ ತುಂಬುವವರೆಗೆ ಮದುವೆ ಮಾಡಬಾರದು ಎಂದು ಓಂಕಾರಪ್ಪ ಮತ್ತು ಮೀನಾಳ ಪೋಷಕರಿಗೆ ಸೂಚನೆ ನೀಡಿದ್ದರು.

ಅಧಿಕಾರಿಗಳ ಮಧ್ಯಪ್ರವೇಶದಿಂದ ಆಕ್ರೋಶಗೊಂಡ ಓಂಕಾರಪ್ಪ, ಮೀನಾ ಮತ್ತು ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಮೀನಾ ಮತ್ತು ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಲು ಮನೆಯಿಂದ ಹೊರಟಾಗ ಅವರನ್ನು ಹಿಂಬಾಲಿಸಿದ ಆತ, ಮಚ್ಚಿನಿಂದ ದಾಳಿ ನಡೆಸಿದ್ದ.

ಈ ವೇಳೆ ಮೀನಾಳ ಶಿರಚ್ಛೇದ ಮಾಡಿ, ಆಕೆಯ ತಲೆಯೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ದಾಳಿಯಲ್ಲಿ ಮೀನಾಳ ತಾಯಿಗೂ ಗಂಭೀರ ಗಾಯಗಳಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X