

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ್ದ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಅವರಿಗೆ ತೀವ್ರ ನಿರಾಸೆಯಾಗಿದೆ.
ನಟ ದರ್ಶನ್ ಅವರನ್ನು ಭೇಟಿ ಮಾಡಲು ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿನ ಆವರಣಕ್ಕೆ ಆಗಮಿಸಿದ್ದರು. ನಿಯಮಾವಳಿಗಳ ಪ್ರಕಾರ ನಟಿಯ ಭೇಟಿ ವಿಚಾರವನ್ನು ಜೈಲು ಅಧಿಕಾರಿಗಳು ದರ್ಶನ್ ಅವರ ಗಮನಕ್ಕೆ ತಂದಿದ್ದಾರೆ. ಆದರೆ, ಹೊರಗಿನಿಂದ ಯಾರೇ ಬಂದರೂ ತಾನು ಭೇಟಿಯಾಗುವುದಿಲ್ಲ ಎಂದು ದರ್ಶನ್ ನೇರವಾಗಿ ಹೇಳಿದ್ದಾರೆ.
ಆದರೂ ರಚಿತಾ ರಾಮ್ ಅವರು ದರ್ಶನ್ ತಮ್ಮ ಭೇಟಿಗೆ ಬರಬಹುದು ಎಂದು ಸುಮಾರ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದರು. ಆದರೆ ದರ್ಶನ್ ಸೆಲ್ ನಿಂದ ಹೊರಗೆ ಬರದ ಹಿನ್ನೆಲೆಯಲ್ಲಿ ಜೈಲಿನಿಂದ ಹಿಂತಿರುಗಿದ್ದಾರೆ.
ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ, ಮಗ, ತಾಯಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರನ್ನು ಬಿಟ್ಟು ಹೊರಗಿನ ಬೇರೆ ಯಾವುದೇ ಆಪ್ತರು ಅಥವಾ ಚಿತ್ರರಂಗದ ಸಹೋದ್ಯೋಗಿಗಳನ್ನು ಭೇಟಿಯಾಗಲು ಒಪ್ಪುತ್ತಿಲ್ಲ ಎಂದು ಜೈಲಿನ ಮೂಲಗಳು ತಿಳಿಸಿವೆ.
ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸಿದ ನಂತರ ದರ್ಶನ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಕಾನೂನು ಸಂಕಷ್ಟ ಹಾಗೂ ಮಾಫಿ ಸಾಕ್ಷಿಯ ಭೀತಿಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಅವರು ಯಾರನ್ನೂ ಭೇಟಿಯಾಗುವ ಮನಸ್ಥಿತಿಯಲ್ಲಿಲ್ಲ ಎನ್ನಲಾಗಿದೆ.