

ಬೆಂಗಳೂರು: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, ಸರ್ಕಾರದ ನಿರ್ಧಾರವನ್ನು ಅವಿವೇಕದ ಮತ್ತು ಅಪ್ರಬುದ್ಧ ನಡೆ ಎಂದು ಟೀಕಿಸಿದ್ದಾರೆ.
ಇದೊಂದು ಅವಿವೇಕದ, ಅಪ್ರಬುದ್ಧ, ದುರಹಂಕಾರದ ನಡೆ. ಏನು ಮಾಡಿದರೂ ನಡೆಯುತ್ತದೆ ಎಂಬ ಅಧಿಕಪ್ರಸಂಗದ ನಿಲುವು. ಸರ್ಕಾರವೇ ಮುಂದೆ ನಿಂತು ಸಮಾಜದ ಸ್ವಾಸ್ತ್ಯ ವನ್ನು ಹಾಳು ಮಾಡಲು ನಿಂತ ಹಾಗೆ ಕಾಣುತ್ತಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಾಗಿ ಖಂಡಿಸುವುದು ಮಾತ್ರವಲ್ಲ, ಈ ಕಾರ್ಯಕ್ರಮ ನಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅವುಗಳನ್ನು ಅದು ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬದ ತಲೆಹರಟೆ ನಿರ್ಧಾರ ಎಲ್ಲಿಂದ ಬಂತು? ಯಾರು ಕೇಳಿದ್ದರು? ಸ್ಪಷ್ಟವಾಗಿ ಹೇಳುವುದಾದರೆ ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು, ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದು. ಹಿಂದೆ ಉರ್ದು ವಾರ್ತೆ ಸಂಬಂಧ ನಡೆದ ಕೋಮುಗಲಭೆ ಸರ್ಕಾರ ಮರೆತಿದೆಯೇ? ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದು ಎಂದರೆ ಇದೇ ಅಲ್ಲವೇ?
ವಿಧಾನ ಸೌಧದ ಮುಂದೆ ಉರ್ದು ಹಬ್ಬ ಮಾಡಿದ ನಂತರ ಉರ್ದು ನುಡಿಯ ಮಗಳ ಸ್ಥಾನದಲ್ಲಿರುವ ಹಿಂದಿ ಹಬ್ಬ ಮಾಡುತ್ತಾರೆ, ನಂತರ ತಮಿಳು ಹಬ್ಬ, ತೆಲುಗು ಹಬ್ಬ, ಮರಾಠಿ ಹಬ್ಬ ಎಲ್ಲ ಮಾಡಿ ಕೊನೆಗೆ ಕರ್ನಾಟಕವನ್ನು ಕನ್ನಡೇತರರಿಗೆ ಮಾರಾಟ ಮಾಡಿಬಿಡುತ್ತಾರೆ. ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕೂಡಲೇ ಈ ಉರ್ದು ಹಬ್ಬದ ಹುಚ್ಚಾಟವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವೇ ಈ ಸರ್ಕಾರಕ್ಕೆ ಚಳಿ ಬಿಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇಂತಹ ವಿವಾದ ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕೋಮುಗಲಭೆಗೆ ಸಂಚು ರೂಪಿಸಿರುವವರನ್ನು ಸರ್ಕಾರ ದೂರ ಇಡಬೇಕು. ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಉರ್ದು ಹಬ್ಬ ಮಾಡಲು ಬೆಂಗಳೂರಿನಲ್ಲಿ ಬೇಕಾದಷ್ಟು ಜಾಗಗಳಿವೆ. ನಾಡಿನ ಶಕ್ತಿಸೌಧ ವಿಧಾನಸೌಧವೇ ಬೇಕಾಗಿಲ್ಲ. ರಾಜ್ಯ ಸರ್ಕಾರವೇ ಮುಂದೆ ನಿಂತು ನಾಡಿನ ನೆಮ್ಮದಿಯನ್ನು, ಸೌಹಾರ್ದವನ್ನು ಹಾಳುಗೆಡಹಲು ನಿಂತರೆ ನಾವು ಸುಮ್ಮನಿರುವುದಿಲ್ಲ. ಸರ್ಕಾರ ಏನಾದರೂ ತಾನು ಮಾಡಿದ್ದೆ ಸರಿ ಎಂದು ದುಸ್ಸಾಹಸಕ್ಕೆ ಇಳಿದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.