‘ಕುಮಾರಸ್ವಾಮಿ ಏನು ಐಟಿ ಆಫೀಸರಾ?’: 1,400 ಕೋಟಿ ರೂ. ಆಸ್ತಿ ಕುರಿತ ಆರೋಪಕ್ಕೆ ಸಿಎಂ ಡಿಕೆಶಿ ತಿರುಗೇಟು

ತಮ್ಮ ಕುಟುಂಬದ ಆಸ್ತಿಗಳ ಪ್ರಸ್ತುತ ಮೌಲ್ಯ ಸುಮಾರು 1,400 ಕೋಟಿ ಇರುವುದನ್ನು ಒಪ್ಪಿಕೊಂಡರಾದರೂ, ಅವುಗಳನ್ನು ಕಾನೂನುಬದ್ಧವಾಗಿ ಸಂಪಾದಿಸಲಾಗಿದೆ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಘೋಷಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
H D Kumaraswamy and D K Shivakumar
ಹೆಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್
Updated on: 

ತಮ್ಮ 1,400 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಕುರಿತ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದು, ತಮ್ಮ ಕುಟುಂಬದ ಆಸ್ತಿಗಳನ್ನು ಕಾನೂನುಬದ್ಧವಾಗಿಯೇ ಸಂಪಾದಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಈ ವಿಚಾರವಾಗಿ ಚರ್ಚೆಗೆ ಬರುವಂತೆ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.

ತಮ್ಮ ಕುಟುಂಬದ ಆಸ್ತಿಗಳ ಪ್ರಸ್ತುತ ಮೌಲ್ಯ ಸುಮಾರು 1,400 ಕೋಟಿ ಇರುವುದನ್ನು ಒಪ್ಪಿಕೊಂಡರಾದರೂ, ಅವುಗಳನ್ನು ಕಾನೂನುಬದ್ಧವಾಗಿ ಸಂಪಾದಿಸಲಾಗಿದೆ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಘೋಷಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಕುಮಾರಸ್ವಾಮಿ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ ಅವರು, ಜೆಡಿಎಸ್‌ ನಾಯಕರು ಈಗ ಏಕೆ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

H D Kumaraswamy and D K Shivakumar
ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ? ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತು: HDK ಆರೋಪಕ್ಕೆ CM ತಿರುಗೇಟು; Video

NICE ಯೋಜನೆ ವಿಚಾರದಲ್ಲಿ ಕುಮಾರಸ್ವಾಮಿಗೆ ಡಿಕೆಶಿ ಪ್ರಶ್ನೆ

NICE ಯೋಜನೆಯಲ್ಲಿ ಕುಮಾರಸ್ವಾಮಿ ಹಾಗೂ ಅವರ ತಂದೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪಾತ್ರವನ್ನು ಡಿ ಕೆ ಶಿವಕುಮಾರ್ ಪ್ರಸ್ತಾಪಿಸಿದರು. ಈ ವಿಚಾರದಲ್ಲಿ ಹಲವು ವರ್ಷಗಳಿಂದ ಕುಮಾರಸ್ವಾಮಿ ಏಕೆ ಮೌನವಾಗಿದ್ದರು. ದೇವೇಗೌಡ ಅವರು ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದರು ಹಾಗೂ 2007ರಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರು ಎಂದು ಹೇಳಿದರು.

BMIC, NICE ರಸ್ತೆ ಹಾಗೂ ಬಿಡದಿ ಟೌನ್‌ಶಿಪ್ ಯೋಜನೆಗಳಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಹೊಂದಿದ್ದಾರೆ ಎನ್ನಲಾದ ಆಸ್ತಿಗಳ ಬಗ್ಗೆಯೂ ಡಿ ಕೆ ಶಿವಕುಮಾರ್ ಪ್ರಶ್ನೆಗಳನ್ನು ಎತ್ತಿದರು. ಕುಮಾರಸ್ವಾಮಿ ವಿರುದ್ಧ ತಾನು ಯಾವುದೇ ಆರೋಪ ಮಾಡಲು ಬಯಸುವುದಿಲ್ಲ; ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿ ಆದಾಯ ತೆರಿಗೆ ಅಧಿಕಾರಿಯೇ?

ತಮ್ಮ 1,400 ಕೋಟಿ ಮೌಲ್ಯದ ಆಸ್ತಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ‘ಕುಮಾರಸ್ವಾಮಿ ಆದಾಯ ತೆರಿಗೆ ಅಧಿಕಾರಿಯೇ?’ ಎಂದು ಪ್ರಶ್ನಿಸಿದರು.

ತಾನು ರೈತನ ಮಗ ಹಾಗೂ ಉದ್ಯಮಿಯಾಗಿದ್ದು, ಕಾನೂನುಬದ್ಧವಾಗಿ ಆಸ್ತಿ ಹೊಂದಲು ಮತ್ತು ವ್ಯವಹಾರದ ಮೂಲಕ ಸಂಪತ್ತು ಗಳಿಸಲು ತನಗೆ ಹಕ್ಕಿದೆ ಎಂದು ಹೇಳಿದರು.

ತಮ್ಮ ಆಸ್ತಿಗಳ ಬಗ್ಗೆ ಕುಮಾರಸ್ವಾಮಿಗೆ ಅನುಮಾನಗಳಿದ್ದರೆ ಆದಾಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಲಿ. ತಮ್ಮ ಆಸ್ತಿ ಹಾಗೂ ಹಣಕಾಸಿನ ವಿವರಗಳನ್ನು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಘೋಷಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com