

ಬೆಂಗಳೂರು: ಕರ್ನಾಟಕದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯ ಕುರಿತು ವೈಯಕ್ತಿಕವಾಗಿ ಗಮನಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ಅಡಿಯಲ್ಲಿ 3,705.30 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ.
ಪ್ರಧಾನಿ ಮೋದಿಗೆ ಬರೆದಿರುವ ಪತ್ರವನ್ನು ತಮ್ಮ 'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಖರ್ಗೆ, ಕರ್ನಾಟಕವು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಗಂಭೀರವಾದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ. 58ರಷ್ಟು ಮಳೆಯ ಕೊರತೆಯಾಗಿದ್ದು ವ್ಯಾಪಕ ಬೆಳೆ ನಷ್ಟ ಮತ್ತು ಲಕ್ಷಾಂತರ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ರಾಜ್ಯದಲ್ಲಿ ಅಂದಾಜು 18,748.23 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ. ಇದಕ್ಕೆ ಪ್ರತಿಯಾಗಿ 3,705.30 ಕೋಟಿ ರೂ.ಗಳ ನೆರವನ್ನು ರಾಜ್ಯ ಸರ್ಕಾರ ಕೋರಿದೆ. ಅಲ್ಲದೆ ಖರ್ಗೆ ಅವರು ಆರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬರದಿಂದಾದ ಹಾನಿಯನ್ನು ಖುದ್ದಾಗಿ ಪರಿಶೀಲಿಸಲು ಕೇಂದ್ರ ತಂಡವನ್ನು ತಕ್ಷಣವೇ ಕಳುಹಿಸುವುದು ಮತ್ತು ರಾಜ್ಯವು ಕೋರಿದ ಸಂಪೂರ್ಣ ಮೊತ್ತವನ್ನು ಯಾವುದೇ ಅನಗತ್ಯ ಕಡಿತವಿಲ್ಲದೆ ಮಂಜೂರು ಮಾಡುವುದು ಸೇರಿವೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡಲಾಗುವ 'ಇನ್‌ಪುಟ್ ಸಬ್ಸಿಡಿ' (ಕೃಷಿ ವೆಚ್ಚದ ಸಹಾಯಧನ) ಲೆಕ್ಕಾಚಾರಕ್ಕಾಗಿ ಹಳೆಯದಾದ 2015-16ರ ಕೃಷಿ ಗಣತಿಯ ಬದಲಿಗೆ ಕರ್ನಾಟಕದ ನವೀಕೃತ 'ಭೂಮಿ' (Bhoomi) ಭೂ ದಾಖಲೆಗಳನ್ನು ಬಳಸುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದರು. ಇದರಿಂದಾಗಿ ಅರ್ಹ ರೈತರು ಪರಿಹಾರದಿಂದ ವಂಚಿತರಾಗುವುದನ್ನು ತಪ್ಪಿಸಬಹುದು. ಪ್ರಸ್ತುತ ಸ್ಥಳ ಪರಿಶೀಲನೆ (ground-truthing) ನಡೆಯುತ್ತಿರುವ 11 ಹೆಚ್ಚುವರಿ ತಾಲೂಕುಗಳು ಮತ್ತು ಅರ್ಹತೆ ಪಡೆಯುವ ಇತರ ಪ್ರದೇಶಗಳನ್ನು ಒಳಗೊಂಡಂತೆ, ಬರ ಘೋಷಣಾ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಖರ್ಗೆ ಕೋರಿದರು. ಕೇಂದ್ರದ ನೆರವು ಪಡೆಯುವ ಉದ್ದೇಶಕ್ಕಾಗಿ ಇವುಗಳನ್ನು ಒಂದೇ ನಿರಂತರ ಬರ ಘಟನೆಯ ಭಾಗವೆಂದು ಪರಿಗಣಿಸಬೇಕು ಎಂದು ಅವರು ಹೇಳಿದರು.
ಕಾವೇರಿ ಮತ್ತು ಜಲವಿದ್ಯುತ್ ಯೋಜನೆಗಳ ಜಲಾನಯನ ಪ್ರದೇಶಗಳಲ್ಲಿನ ಜಲಾಶಯಗಳ ನೀರಿನ ಮಟ್ಟವು ಐತಿಹಾಸಿಕವಾಗಿ ಕುಸಿದಿರುವುದನ್ನು ಗಮನದಲ್ಲಿಟ್ಟುಕೊಂಡು, ಕುಡಿಯುವ ನೀರಿನ ಭದ್ರತೆ ಮತ್ತು ಪರ್ಯಾಯ ವಿದ್ಯುತ್ ವೆಚ್ಚಕ್ಕಾಗಿ ಹೆಚ್ಚಿನ ಬೆಂಬಲವನ್ನು ನೀಡುವಂತೆಯೂ ಕೇಂದ್ರವನ್ನು ಕೋರಿದರು. ರಾಜ್ಯಾದ್ಯಂತ 31 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟವನ್ನು ಪರಿಗಣಿಸಿ, ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಅರ್ಹತೆಯ ಆಧಾರದ ಮೇಲೆ ಮತ್ತು ಅತ್ಯಂತ ತುರ್ತಾಗಿ ಕರ್ನಾಟಕಕ್ಕೆ ನೆರವನ್ನು ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದರು.
ಬರ ಪರಿಹಾರವು ಒಂದು ಮಾನವೀಯ ಅಗತ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ನಿಲ್ಲಬೇಕು ಎಂದು ಹೇಳಿದ ಖರ್ಗೆ, ತುರ್ತು ಹಾಗೂ ಸಹಾನುಭೂತಿಯಿಂದ ಕಾರ್ಯನಿರ್ವಹಿಸುವಂತೆ ಮತ್ತು ಸಂಕಷ್ಟದಲ್ಲಿರುವ ಲಕ್ಷಾಂತರ ನಾಗರಿಕರಿಗೆ ಅತ್ಯಗತ್ಯವಾದ ಆಹಾರ, ಮೇವು, ನೀರು ಹಾಗೂ ಜೀವನೋಪಾಯದ ಭದ್ರತೆಯನ್ನು ಒದಗಿಸುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದರು. ಇದೇ ರೀತಿಯ ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವುದಾಗಿಯೂ ಖರ್ಗೆ ತಿಳಿಸಿದರು.