ಬೆಂಗಳೂರು: ಕರ್ನಾಟಕ ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಆಕ್ಷೇಪಣೆ ಸಲ್ಲಿಸಲು ಪದೇ ಪದೇ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಮತ್ತು ರಾಜ್ಯ ಹಣಕಾಸು ಇಲಾಖೆಗೆ ₹2,000 ದಂಡ ವಿಧಿಸಿದೆ. ನ್ಯಾಯಾಲಯದ ಆದೇಶಗಳಿದ್ದರೂ ಸುದೀರ್ಘ ಕಾಲದಿಂದ ಪ್ರತಿಕ್ರಿಯೆ ನೀಡದ ಸರ್ಕಾರದ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಪೀಠವು ಈ ಆದೇಶ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
ವಿವಾದವೇನು?
ಜಮಖಂಡಿ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ್ ಶಿವಯ್ಯ ಗುಡಗುಂಟಿ ಅವರು, ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ (CMIDP) ಅಡಿಯಲ್ಲಿ ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಿಗೆ ₹50 ಕೋಟಿ ಹಾಗೂ ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಕೇವಲ ₹25 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿದ್ದರು. ಹಾಗಾಗಿ, ಈ ಅರ್ಜಿಗೆ ಸಂಬಂಧಿಸಿದಂತೆ ಕೌಂಟರ್ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಅಕ್ಟೋಬರ್ 29, 2025 ರಂದೇ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದಾದ ಬಳಿಕ ಹಲವು ಬಾರಿ ವಿಚಾರಣೆ ನಡೆದರೂ ಸರ್ಕಾರ ಪ್ರತಿಕ್ರಿಯೆ ದಾಖಲಿಸಿರಲಿಲ್ಲ.
ಮುಂದುವರೆದು, ಫೆಬ್ರವರಿ 17ರಂದು ಅಂತಿಮ ಅವಕಾಶ ನೀಡಿದ್ದರೂ ಸರ್ಕಾರಿ ವಕೀಲರು, ಯಾವುದೇ ಆಕ್ಷೇಪಣೆ ಸಲ್ಲಿಸದೆ ಮತ್ತೆ ಕಾಲಾವಕಾಶ ಕೋರಿದ್ದರು. ಸುಮಾರು ಒಂದು ವರ್ಷ ಕಳೆದರೂ ಪ್ರತಿಕ್ರಿಯೆ ನೀಡದ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರ ವಿಭಾಗೀಯ ಪೀಠವು, "ಕೋರ್ಟ್ ಆದೇಶ ನೀಡಿದ್ದರೂ ಅಫಿಡವಿಟ್ ಏಕೆ ಸಲ್ಲಿಸುತ್ತಿಲ್ಲ? ಇಲ್ಲದಿದ್ದರೆ ನಾವು ಈ ಪಿಐಎಲ್‌ಗಳನ್ನು ಪುರಸ್ಕರಿಸಲು ಆರಂಭಿಸುತ್ತೇವೆ" ಎಂದು ಎಚ್ಚರಿಕೆ ನೀಡಿತು.
ಸರ್ಕಾರಕ್ಕೆ ₹2,000 ದಂಡ
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದ ಕರ್ನಾಟಕ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್, ನ್ಯಾಯವಾದಿಗಳ ಗುಮಾಸ್ತರ ಸಂಘಕ್ಕೆ ₹2,000 ದಂಡವನ್ನು ಪಾವತಿಸಿ ರಶೀದಿ ಸಲ್ಲಿಸುವಂತೆ ರಾಜ್ಯ ಹಣಕಾಸು ಇಲಾಖೆಗೆ ಆದೇಶಿಸಿದೆ. ಜೊತೆಗೆ, ಆಕ್ಷೇಪಣೆ ಸಲ್ಲಿಸಲು ಕೊನೆಯದಾಗಿ 2 ವಾರಗಳ ಕಾಲಾವಕಾಶ ನೀಡಿದೆ. ಒಂದು ವೇಳೆ ಈ ಬಾರಿಯೂ ಪ್ರತಿಕ್ರಿಯೆ ನೀಡದಿದ್ದರೆ ಅರ್ಜಿದಾರರ ಪರವಾಗಿಯೇ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇದರೊಂದಿಗೆ, "ಕೋರ್ಟ್ ನಿರ್ದೇಶನ ನೀಡಿದರೂ ಅಫಿಡವಿಟ್ ಏಕೆ ಸಲ್ಲಿಸುತ್ತಿಲ್ಲ? ಇನ್ನು ಮುಂದೆ 4 ಕ್ಕಿಂತ ಹೆಚ್ಚು ಬಾರಿ ಕಾಲಾವಕಾಶ ಪಡೆದು ವಿಳಂಬ ಮಾಡಿದರೆ, ಅದಕ್ಕೆ ಕಾರಣರಾದ ಅಧಿಕಾರಿಗಳಿಂದಲೇ ದಂಡದ ಮೊತ್ತವನ್ನು ವಸೂಲಿ ಮಾಡಲಾಗುವುದು" ಎಂದು ಕಡಕ್ ಎಚ್ಚರಿಕೆ ನೀಡಿದೆ.