

ಬೆಂಗಳೂರು: ನಮ್ಮ ರಾಜಕಾರಣಿಗಳಿಗೆ ಸರ್ಕಾರಿ ಆಸ್ಪತ್ರೆ ಬೇಡ, ಆದರೆ ಸರ್ಕಾರದ ದುಡ್ಡು ಬೇಕೇಬೇಕು! ಹೌದು, ಕೋಟ್ಯಧಿಪತಿಗಳಾಗಿದ್ದರೂ ಸಹ ರಾಜ್ಯದ 69 ಶಾಸಕರು ತಮ್ಮ ದುಬಾರಿ ಆಸ್ಪತ್ರೆ ಬಿಲ್‌ಗಳನ್ನು ಸಹ ಜನಸಾಮಾನ್ಯರು ಕಟ್ಟುವ ತೆರಿಗೆ ಹಣದಿಂದಲೇ ಭರಿಸಿಕೊಳ್ಳುತ್ತಿದ್ದಾರೆ. ಅದರಂತೆ, ಇದಕ್ಕಾಗಿ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 7 ಕೋಟಿಗೂ ಅಧಿಕ ಹಣವನ್ನ ಖರ್ಚುಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ರಾಜ್ಯದ ಸಾಮಾನ್ಯ ನಾಗರಿಕರು ಅಕಾಲಿಕವಾಗಿ ಸಾವನ್ನಪ್ಪಿದರೆ ಸರ್ಕಾರದಿಂದ ಸಿಗುವ ಪರಿಹಾರ ಕೇವಲ ಐದು ಲಕ್ಷ ರೂಪಾಯಿ. ಆದರೆ ಶಾಸಕರು ಹಾಗೂ ಅವರ ಕುಟುಂಬದ ವೈದ್ಯಕೀಯ ವೆಚ್ಚಕ್ಕಾಗಿ ಸರ್ಕಾರ ತಲಾ ಒಂದು ಕೋಟಿ ರೂಪಾಯಿವರೆಗೆ ಸಾರ್ವಜನಿಕರ ತೆರಿಗೆ ಹಣವನ್ನು ಮಂಜೂರು ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಹೌದು, ಕರ್ನಾಟಕದಲ್ಲಿ ಶಾಸಕರ ವೈದ್ಯಕೀಯ ವೆಚ್ಚ ಮರುಪಾವತಿ ಕುರಿತು ಸಾಮಾಜಿಕ ಕಾರ್ಯಕರ್ತ ಎಚ್. ಎಂ. ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ವಿಧಾನಸಭೆ ಸಚಿವಾಲಯವು, "ರಾಜ್ಯದ 69 ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಕಳೆದ 3 ವರ್ಷಗಳಲ್ಲಿ (ಮೇ 20, 2023 ರಿಂದ ಸೆಪ್ಟೆಂಬರ್ 30, 2026) ಒಟ್ಟು ₹7.40 ಕೋಟಿಗೂ ಅಧಿಕ (₹7,46,67,133) ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ ಮರುಪಾವತಿಪಡೆದುಕೊಂಡಿದ್ದು, ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಶಾಸಕರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ." ಎಂದು ತಿಳಿಸಿದೆ.
ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ಟಾಪ್ ಶಾಸಕರು:
ಎಚ್. ಕೆ. ಸುರೇಶ್ (ಬೇಲೂರು ಶಾಸಕ): ಬಿಜೆಪಿ ಪಕ್ಷದ ಸುರೇಶ್ ಅವರು ಹಾಗೂ ಅವರ ಕುಟುಂಬದ ವೈದ್ಯಕೀಯ ಚಿಕಿತ್ಸೆಗಾಗಿ ಬರೋಬ್ಬರಿ ₹98,78,325 (ಸುಮಾರು 98.78 ಲಕ್ಷ ರೂ.) ಮರುಪಾವತಿ ಪಡೆಯುವ ಮೂಲಕ ಇಡೀ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಕೆ. ಹರೀಶ್ ಗೌಡ (ಚಾಮರಾಜ ಶಾಸಕ): ಕಾಂಗ್ರೆಸ್ ಪಕ್ಷದ ಹರೀಶ್ ಗೌಡ ಅವರು ತಮ್ಮ ಕುಟುಂಬದ ಚಿಕಿತ್ಸೆಗಾಗಿ ₹85,91,139 (ಸುಮಾರು 85.91 ಲಕ್ಷ ರೂ.) ಮರುಪಾವತಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಡಾ. ಎಚ್. ಡಿ. ರಂಗನಾಥ್ (ಕುಣಿಗಲ್ ಶಾಸಕ): ವೈದ್ಯರೂ ಆಗಿರುವ ಕಾಂಗ್ರೆಸ್ ಪಕ್ಷದ ರಂಗನಾಥ್ ಅವರು ತಮ್ಮ ಕುಟುಂಬದ ವೈದ್ಯಕೀಯ ವೆಚ್ಚವಾಗಿ ₹85,02,261 ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಇತರ ಪ್ರಮುಖ ನಾಯಕರ ವೈದ್ಯಕೀಯ ಬಿಲ್ ವಿವರಗಳು:
ಶಾಮನೂರು ಶಿವಶಂಕರಪ್ಪ: ಹಿರಿಯ ಶಾಸಕರಾದ ಇವರಿಗೆ ₹69.78 ಲಕ್ಷ ಮರುಪಾವತಿ ಮಾಡಲಾಗಿದೆ.
ಎಸ್. ಸುರೇಶ್ ಕುಮಾರ್: ₹22.26 ಲಕ್ಷ
ಕೆ. ಗೋಪಾಲಯ್ಯ: ₹21.05 ಲಕ್ಷ
ಎಚ್. ಡಿ. ರೇವಣ್ಣ: ₹13.02 ಲಕ್ಷ
ಬಸವರಾಜ ಬೊಮ್ಮಾಯಿ (ಮಾಜಿ ಸಿಎಂ): ₹10.45 ಲಕ್ಷ
ಆರಗ ಜ್ಞಾನೇಂದ್ರ: ₹10.21 ಲಕ್ಷ
ಲಕ್ಷ್ಮಣ ಸವದಿ: ₹4.86 ಲಕ್ಷ
ಡಾ. ಸಿ. ಎನ್. ಅಶ್ವತ್ಥ ನಾರಾಯಣ: ₹4.58 ಲಕ್ಷ
ಹಾಗಾದ್ರೆ, ಅತ್ಯಂತ ಕಡಿಮೆ ಬಿಲ್ ಯಾರದ್ದು?
ಇಡೀ ಪಟ್ಟಿಯಲ್ಲಿ ಅತ್ಯಂತ ಕಡಿಮೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಿಸಿಕೊಂಡಿರುವುದು ನಿಖಿಲ್ ಉಮೇಶ್ ಕತ್ತಿ ಮತ್ತು ಅವರ ಕುಟುಂಬದವರು. ಅದರಂತೆ, ಇವರು ಹಾಗೂ ಇವರ ಕುಟುಂಬದವರು ಕಳೆದ ಮೂರು ವರ್ಷದಲ್ಲಿ ಕೇವಲ ₹2,349 ಮರುಪಾವತಿ ಪಡೆದಿದ್ದಾರೆ.
ಮುಂದುವರೆದು, ಕರ್ನಾಟಕ ಶಾಸಕಾಂಗದ ನಿಯಮಗಳ ಪ್ರಕಾರ ಶಾಸಕರು ಮತ್ತು ಅವರ ಅವಲಂಬಿತರು ಖಾಸಗಿ ಅಥವಾ ಐಷಾರಾಮಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಸಾಮಾನ್ಯ ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಸೌಲಭ್ಯ ಸಿಗದ ಈ ಕಾಲದಲ್ಲಿ, ಜನಪ್ರತಿನಿಧಿಗಳ ಈ ದುಬಾರಿ ವೆಚ್ಚ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.