ದಸರಾ ಜಂಬೂ ಸವಾರಿ: ಧನಂಜಯನ ಹೆಗಲಿಗೆ ಚಿನ್ನದ ಅಂಬಾರಿಯ ಮಹಾ ಜವಾಬ್ದಾರಿ..?

ಕಳೆದ ವರ್ಷದವರೆಗೆ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ಇದೀಗ 60 ವರ್ಷ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಲಾಗಿದೆ.
Dasara elephants walking as part of jamboo savari rehearsal in Mysuru.
ದಸರಾ ಆನೆ.
Updated on: 

ಮೈಸೂರು: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲ ಕಳೆದ ಕೆಲ ದಿನಗಳಿಂದ ದಸರಾ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇದೀಗ ಅಂಬಾರಿ ಹೊರುವ ಜವಾಬ್ದಾರಿಗೆ ಆಯ್ಕೆಯಾಗಿರುವ ನಾಲ್ಕು ಆನೆಗಳ ಪೈಕಿ ಧನಂಜಯ ಮುಂಚೂಣಿಯಲ್ಲಿದ್ದಾನೆ.

ಉಳಿದಂತೆ ಮಹೇಂದ್ರ, ಏಕಲವ್ಯ ಮತ್ತು ಸುಗ್ರೀವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅಂಬಾರಿ ಆನೆ ಹೆಸರನ್ನು ಇನ್ನೆರಡು-ಮೂರು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದವರೆಗೆ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ಇದೀಗ 60 ವರ್ಷ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಲಾಗಿದೆ.

ಅರಣ್ಯ ಇಲಾಖೆ ಧನಂಜಯ, ಮಹೇಂದ್ರ, ಪ್ರಶಾಂತ, ಏಕಲವ್ಯ ಮತ್ತು ಸುಗ್ರೀವ ಆನೆಗಳಿಗೆ ಅಂಬಾರಿ ಕರ್ತವ್ಯಕ್ಕಾಗಿ ತರಬೇತಿ ನೀಡುತ್ತಿದೆ.

ಜಂಬೂ ಸವಾರಿಯ ವೇಳೆ ಜನಸಂದಣಿ, ಜೋರಾದ ಶಬ್ದ, ನಿರಂತರ ಚಲನೆ ಹಾಗೂ ಒಟ್ಟಾರೆ ವಾತಾವರಣವನ್ನು ಆನೆಗಳು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Dasara elephants walking as part of jamboo savari rehearsal in Mysuru.
ಮೈಸೂರು ದಸರಾ ಚಲನಚಿತ್ರೋತ್ಸವ ರದ್ದು: ಕಂಬಳಕ್ಕೆ ಕೋಟಿ ಅನುದಾನ ಕೊಟ್ಟಿದ್ದೇ ಕಾರಣವಾ? ಸಂಸದ ಯದುವೀರ್ ಒಡೆಯರ್ ಅಸಮಾಧಾನ

ಆನೆಗಳ ದೈಹಿಕ ಸಾಮರ್ಥ್ಯ, ಸ್ಥಿರತೆ, ನಡಿಗೆ, ಸ್ವಭಾವ, ಸಹನಶಕ್ತಿ ಹಾಗೂ ತರಬೇತಿ ವೇಳೆ ನೀಡುವ ಪ್ರದರ್ಶನ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತಿದೆ. ಮರದ ಅಂಬಾರಿ ಹಾಗೂ ಮರಳು ಚೀಲಗಳನ್ನು ಹೊರುವ ತರಬೇತಿಯನ್ನೂ ಆನೆಗಳಿಗೆ ನೀಡಲಾಗುತ್ತಿದೆ.

ಧನಂಜಯ ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ. ಆದರೆ, ಆತನಲ್ಲಿ ಮದದ ಲಕ್ಷಣಗಳು ಕಾಣಿಸಿಕೊಂಡಿದ್ದು, ಮೆರವಣಿಗೆ ವೇಳೆ ಇದರಿಂದ ಕಿರಿಕಿರಿ ಅಥವಾ ಆಕ್ರಮಣಕಾರಿ ವರ್ತನೆ ತೋರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಂಬಾರಿ ಹೊರುವ ಜವಾಬ್ದಾರಿಗೆ ಧನಂಜಯ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ಆರಂಭದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದ್ದರು. ಬಳಿಕ “ಬಹುತೇಕ ಧನಂಜಯ” ಎಂದು ಪ್ರತಿಕ್ರಿಯಿಸಿದ್ದರು. ಸಚಿವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ದಸರಾ ಅಭಿಮಾನಿಗಳ ನಡುವೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದೇ ವೇಳೆ ಮಹೇಂದ್ರ ಆನೆಯ ಆಯ್ಕೆ ಬಗ್ಗೆಯೂ ಪ್ರಶ್ನೆಗಳು ನಡೆಯುತ್ತಿವೆ. ಮಳೆಯ ಕಾರಣದಿಂದ ಮಹೇಂದ್ರನಿಗೆ ಮರದ ಅಂಬಾರಿ ಹೊರುವ ತರಬೇತಿಯನ್ನು ಮಧ್ಯದಲ್ಲೇ ಸ್ಥಗಿತಗೊಳಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com