

ಕೊಪ್ಪಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಎದುರಿಸುತ್ತಿರುವ ಡೀಸೆಲ್ ಕೊರತೆಯು ತಾತ್ಕಾಲಿಕವಾಗಿದೆ ಮತ್ತು ಸರ್ಕಾರವು ಯಾವುದೇ ಯೋಜನೆಯನ್ನು ಸ್ಥಗಿತಗೊಳಿಸಿಲ್ಲ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಮಾತನಾಡಿದ ಅವರು, ಸರ್ಕಾರ ಕಳೆದ ಮೂರು ವರ್ಷಗಳಿಂದ ವಾರ್ಷಿಕ ₹52,000 ಕೋಟಿ ಒದಗಿಸುತ್ತಿದೆ ಹಾಗೂ ಸರ್ಕಾರದ ಆರ್ಥಿಕ ವ್ಯವಸ್ಥೆಯಲ್ಲಿ ಶಿಸ್ತು ಇದೆ ಎಂದು ಪ್ರತಿಪಾದಿಸಿದರು.
'ಸರ್ಕಾರವನ್ನು ಹೇಗೆ ನಡೆಸಬೇಕೆಂದು ನಮಗೆ ತಿಳಿದಿದೆ. ನಮಗೆ ಏನಾದರೂ ಸಮಸ್ಯೆ ಇದ್ದಿದ್ದರೆ, ನಾವು ಯಾವುದಾದರೂ 'ಗ್ಯಾರಂಟಿ' ಯೋಜನೆಯನ್ನು ನಿಲ್ಲಿಸಬಹುದಿತ್ತು. ಆದರೆ ನಾವು ಕಳೆದ ಮೂರು ವರ್ಷಗಳಿಂದ ಅದಕ್ಕಾಗಿ ₹52,000 ಕೋಟಿಗಳನ್ನು ನೀಡುತ್ತಲೇ ಬಂದಿದ್ದೇವೆ. ನಮ್ಮ ಸರ್ಕಾರದ ಆರ್ಥಿಕ ವ್ಯವಸ್ಥೆಯಲ್ಲಿ ಶಿಸ್ತು ಇದೆ' ಎಂದು ಹೇಳಿದರು.
'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 16 ಬಾರಿ ಬಜೆಟ್ ಮಂಡಿಸಿ ಆರ್ಥಿಕ ಶಿಸ್ತನ್ನು ತಂದಿದ್ದಾರೆ. ಅವರು ಎಂದಿಗೂ ಹಣಕಾಸು ಇಲಾಖೆಯಲ್ಲಿ ಶಿಸ್ತು ತಪ್ಪಲು ಬಿಟ್ಟಿಲ್ಲ' ಎಂದು ಅವರು ಹೇಳಿದರು.
'ಇತರ ರಾಜ್ಯಗಳು ಆರ್ಥಿಕ ಸಂಕಷ್ಟದಲ್ಲಿವೆ. ಆದರೆ, ನಾವು ಹಣಕಾಸು ಇಲಾಖೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದ್ದೇವೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ಸಾಲ ಪಡೆದಾದರೂ ನಾವು ಪರಿಸ್ಥಿತಿಯನ್ನು ನಿಭಾಯಿಸುತ್ತೇವೆ; ಸಾಲ ಮಾಡಿಯಾದರೂ ಸರ್ಕಾರವನ್ನು ನಡೆಸುತ್ತೇವೆ' ಎಂದು ಪರಮೇಶ್ವರ ಹೇಳಿದರು.
ಡೀಸೆಲ್ ಕೊರತೆ ಕುರಿತು ಮಾತನಾಡಿದ ಅವರು, 'ಬಸ್‌ಗಳಿಗೆ ಉಂಟಾಗಿರುವ ಡೀಸೆಲ್ ಕೊರತೆಯು ತಾತ್ಕಾಲಿಕವಾದುದು. ಸರ್ಕಾರವಾಗಿ ನಾವು ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. 1,250 ಕೋಟಿ ರೂಪಾಯಿ ದೊಡ್ಡ ಹೊರೆಯೇನಲ್ಲ' ಎಂದು ತಿಳಿಸಿದರು.
ಯಾವುದೇ ಯೋಜನೆಯನ್ನು ನಿಲ್ಲಿಸಿಲ್ಲ ಮತ್ತು ಕೆಲವು ಯೋಜನೆಗಳಲ್ಲಿ ವಿಳಂಬವಾಗಬಹುದು. ಆದರೆ, ಸರ್ಕಾರ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಮುನ್ನಡೆಯಲಿದೆ. ಹಣದ ಕೊರತೆಯೇನೂ ಇಲ್ಲ; ಒಂದು ವೇಳೆ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?' ಎಂದು ಪ್ರಶ್ನಿಸಿದರು.
ಸಚಿವರನ್ನು ಗುರಿಯಾಗಿಸಿಕೊಂಡು ನಡೆಸಬಹುದಾದ 'ಸ್ಟಿಂಗ್ ಆಪರೇಷನ್' ಪ್ರಯತ್ನಗಳ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗೆ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ, 'ಮುಖ್ಯಮಂತ್ರಿಗಳಿಗೆ ಗುಪ್ತಚರ ಮಾಹಿತಿ ಲಭ್ಯವಾದಾಗ, ಯಾರಿಗೆ ಎಚ್ಚರಿಕೆ ನೀಡಬೇಕೋ ಅವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಕೆಲವು ಸಂಸ್ಥೆಗಳು ಇಂತಹ ರಹಸ್ಯ ಕಾರ್ಯಾಚರಣೆಗಳನ್ನು (ಸ್ಟಿಂಗ್ ಆಪರೇಷನ್) ನಡೆಸುತ್ತಿವೆ ಎಂಬ ಮಾಹಿತಿ ಅವರಿಗೆ ಬಂದಿರಬಹುದು. ಆ ಕಾರಣಕ್ಕಾಗಿಯೇ ಅವರು ಸಚಿವರಿಗೆ ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ಇದು ಸರ್ಕಾರದ ವಿರುದ್ಧದ ಪಿತೂರಿಯಾಗಿರಬಹುದು. ಈ ಬಗ್ಗೆ ನಾನು ನಿಖರವಾಗಿ ಏನನ್ನೂ ಹೇಳಲಾರೆ' ಎಂದು ತಿಳಿಸಿದರು.