

ಬೆಂಗಳೂರು: ಮೈಸೂರು ದಸರಾ ಮಹೋತ್ಸವದ ನಂದಿಧ್ವಜ ಪೂಜೆ ವೇಳೆ ದಲಿತ ಸಮುದಾಯಕ್ಕೆ ಸೇರಿದ ಸಚಿವರನ್ನು ಪೊಲೀಸರು ತಡೆದು ಅಪಮಾನಿಸಿದ್ದಾರೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಈ ಬೆನ್ನಲ್ಲೇ, "ಶಿಷ್ಟಾಚಾರ (ಪ್ರೋಟೋಕಾಲ್) ಪ್ರಿಯಾಂಕ್ ಖರ್ಗೆ ಅವರ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಈ ಘಟನೆಯ ಸಂಪೂರ್ಣ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕೆಂದು" ಜೆಡಿಎಸ್ ಮಾಜಿ ಶಾಸಕ ಅಶ್ವಿನ್ ಕುಮಾರ್ ಆಗ್ರಹಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಜಂಬೂಸವಾರಿ ದಿನ ಅಂದರೆ ನಿನ್ನೆ (ಅ.21) ಮೈಸೂರು ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಂದಿ ಧ್ವಜದ ಪೂಜೆಗೆ ತೆರಳುತ್ತಿದ್ದ ಸಚಿವರಾದ ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ಎಸ್ಪಿ ಸಿ.ಬಿ.ರಿಷ್ಯಂತ್ ತಡೆದಿದ್ದರು. ಈ ನಡವಳಿಕೆಯನ್ನು ಖಂಡಿಸಿರುವ ಟಿ ನರಸೀಪುರಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಅಶ್ವಿನ್ ಕುಮಾರ್, ಇದು ದಲಿತ ಸಚಿವರಿಗೆ ಮಾಡಿದ ಅಪಮಾನ ಎಂದು ಬೆಂಗಳೂರಿನ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಮುಂದೆ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು, "ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ನಾಯಕರನ್ನು ಗೌರವದಿಂದ ಜತೆಯಾಗಿ ಕರೆದೊಯ್ಯಲಾಗುತ್ತಿತ್ತು. ಆದರೆ ಈಗ ದಲಿತ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆಯೇ ಎಂದು ಅಶ್ವಿನ್ ಕುಮಾರ್ ಪ್ರಶ್ನಿಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ವೇದಿಕೆಗೆ ಆಗಮಿಸುವ ಸಚಿವರ ಗುರುತು ಇರಲಿಲ್ಲವೇ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ದಸರಾ ಮಹೋತ್ಸವದ ನಿರ್ವಹಣೆಗೆ ಮುಖ್ಯಮಂತ್ರಿಗಳು ಇಪ್ಪತ್ತೆರಡು ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದರು. ಹೀಗಿದ್ದರೂ ಜಂಬೂ ಸವಾರಿಯಂತಹ ಮಹತ್ವದ ಕ್ಷಣದಲ್ಲಿ ಸಚಿವರಿಗೆ ತಡೆ ಒಡ್ಡಿರುವುದು ಅವಮಾನಕರ ಸಂಗತಿ ಎಂದು ಪ್ರತಿಪಾದಿಸಿದ್ದಾರೆ. ಹಾಗಾಗಿ, ರಾಜ್ಯದಲ್ಲಿ ಶಿಷ್ಟಾಚಾರದ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವ್ಯಾಪ್ತಿಗೆ ಬರುವುದರಿಂದ, ಈ ಪ್ರೋಟೋಕಾಲ್ ವೈಫಲ್ಯದ ಸಂಪೂರ್ಣ ಹೊಣೆ ಹೊತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.