ಬೌದ್ಧ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ- ಸಿಎಂ ಡಿಕೆ ಶಿವಕುಮಾರ್!

ಮುಂದಿನ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
cm dkshivakumar
ಸಿಎಂ ಡಿಕೆ ಶಿವಕುಮಾರ್
Updated on: 

ಚಾಮರಾಜನಗರ: ಬೌದ್ಧ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ಬುದ್ಧ, ಬಸವ, ಅಂಬೇಡ್ಕರ್ ತತ್ವಗಳೇ ಸರ್ಕಾರಕ್ಕೆ ಮಾರ್ಗದರ್ಶನ. ಮುಂದಿನ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಆಯೋಜಿಸಲಾಗುವುದು. ಬೆಳಗಾವಿಯಲ್ಲಿಯೂ ಈ ಸಮ್ಮೇಳನ ನಡೆಸುವ ಬಗ್ಗೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ವರ್ಷಕ್ಕೆ ಎರಡು ಸಮ್ಮೇಳನಗಳನ್ನು ನಡೆಸುವುದಕ್ಕೆ ಅಭ್ಯಂತರವಿಲ್ಲ. ಪ್ರತಿಯೊಬ್ಬರ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವುದು ಮುಖ್ಯ ಎಂದರು.

ನಮಗೆ ಜಾತಿ ಕೇಳುವ ಸಮಾಜ ಬೇಕಿಲ್ಲ. ಜ್ಞಾನ ಕೇಳುವ ಸಮಾಜ ಬೇಕಾಗಿದೆ. ಬುದ್ಧ ಜ್ಞಾನದ ಸಂಕೇತ, ಅಂಬೇಡ್ಕರ್ ಸಾಮಾಜಿಕ ನ್ಯಾಯದ ಸಂಕೇತ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಎಂಬ ಮೂರು ಜ್ಯೋತಿಗಳು ಬೆಳಗಿದರೆ ಮಾತ್ರ ಭಾರತ ಬೆಳಗಲು ಸಾಧ್ಯ. ನನಗೆ ಜಾತಿ ಮೇಲೆ ನಂಬಿಕೆಯಿಲ್ಲ. ನೀತಿ ಮೇಲೆ ಮಾತ್ರ ನಂಬಿಕೆಯಿದೆ. ಅಧಿಕಾರ ಜನರ ಸೇವೆಗೋಸ್ಕರ ಇರಬೇಕೇ ಹೊರತು ಒಬ್ಬರಿಗಾಗಿ ಅಲ್ಲ ಎಂದು ಬುದ್ಧ ಗುರು ಹೇಳಿದ್ದಾರೆ. ನಮ್ಮ ಸರ್ಕಾರ ಕೂಡ ಇದೇ ಹಾದಿಯಲ್ಲಿ ನಡೆಯುತ್ತಿದೆ. ಪ್ರಜಾಸೇವೆ ಇಲಾಖೆ ಮೂಲಕ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ತಲುಪಿಸುತ್ತಿದೆ ಎಂದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳು ಸಮಾಜದ ಪರಿವರ್ತನೆಗೆ ಶಕ್ತಿಯಾಗಿವೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನ ಬದುಕಿಗೆ ಸಂವಿಧಾನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ ಮುಖ್ಯ. ಅಂಬೇಡ್ಕರ್ ಅವರು ತಮ್ಮ ಜೀವನದ ಅಂತ್ಯದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು ಜಗತ್ತಿನ ಗಮನ ಸೆಳೆದ ಮಹತ್ವದ ಘಟನೆ. ಅವರ ಚಿಂತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿದೀಪ ಎಂದು ಹೇಳಿದರು.

ಬುದ್ಧನನ್ನು ಅರಿಯುವುದು ಜ್ಞಾನವನ್ನು ಅರಿತಂತೆ. ಬುದ್ಧನ ಚಿಂತನೆಯನ್ನು ಅರ್ಥಮಾಡಿಕೊಳ್ಳುವುದು ಬದುಕಿನ ಮೌಲ್ಯಗಳನ್ನು ಅರಿತಂತೆ. ಪ್ರತಿಯೊಬ್ಬರ ಬದುಕಿನಲ್ಲೂ ಜ್ಞಾನದ ದೀಪ ಬೆಳಗಬೇಕು. ಸಮಾಜದ ಆತ್ಮ ಪ್ರಜಾಪ್ರಭುತ್ವವಾಗಿದ್ದರೆ, ಸಾಮಾಜಿಕ ನ್ಯಾಯವೇ ಪ್ರಗತಿಯ ಅಡಿಪಾಯ. ಇದೇ ನಮ್ಮ ಸರ್ಕಾರದ ಮೂಲ ಉದ್ದೇಶ ಮತ್ತು ಮಂತ್ರ ಎಂದು ಹೇಳಿದರು.

ಧರ್ಮ ಯಾರೊಬ್ಬರ ಮನೆಯ ಸ್ವತ್ತಲ್ಲ. ಹಿಂದೂ ಧರ್ಮ ಯಾರೊಬ್ಬರ ಸ್ವತ್ತಲ್ಲ. ಧರ್ಮಗಳು ಬೇರೆ ಬೇರೆಯಾಗಿರಬಹುದು. ಆದರೆ ಅವುಗಳ ಮೂಲ ತತ್ವಗಳಲ್ಲಿ ಮಾನವೀಯತೆ ಮತ್ತು ಭಕ್ತಿಯ ಮೌಲ್ಯಗಳಿಗೆ ಮಹತ್ವವಿದೆ. ಪ್ರತಿಯೊಬ್ಬರೂ ತಮ್ಮ ಧರ್ಮ ಮತ್ತು ಆಚರಣೆಗಳನ್ನು ಅನುಸರಿಸುತ್ತಾ ಪರಸ್ಪರ ಗೌರವದಿಂದ ಬದುಕಬೇಕು ಎಂದು ಸಲಹೆ ನೀಡಿದರು.

ಮೀಸಲಾತಿ ಎಂದರೆ ಕೇವಲ ಅವಕಾಶವಲ್ಲ. ಅವಕಾಶಗಳಿಂದ ದೂರ ಉಳಿದವರಿಗೆ ಮುಂದೆ ಬರಲು ದಾರಿ ಮಾಡಿಕೊಡುವ ವ್ಯವಸ್ಥೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೂಲಕವೇ ಸಮಾಜದ ಪ್ರಗತಿ ಸಾಧ್ಯ. ಬಡವರು, ಶೋಷಿತರು ಹಾಗೂ ಅವಕಾಶ ವಂಚಿತ ಸಮುದಾಯಗಳ ಬದುಕಿನಲ್ಲಿ ಬದಲಾವಣೆ ತರುವುದೇ ಸರ್ಕಾರದ ಆಶಯ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳ ಆಧಾರದ ಮೇಲೆ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

image-fallback
25ರಿಂದ ಅಂತಾರಾಷ್ಟ್ರೀಯ ಬೌದ್ಧ ಧಮ್ಮ ಸಮ್ಮೇಳನ

ಬುದ್ಧನ ಚಿಂತನೆಗೆ ಯಾವುದೇ ಗಡಿಯಿಲ್ಲ. ಅವರ ಶಾಂತಿ ಮತ್ತು ಅಹಿಂಸೆಯ ಸಂದೇಶ ಭಾರತಕ್ಕೆ ಮಾತ್ರ ಸೀಮಿತವಾಗದೆ ಏಷ್ಯಾದ ಅನೇಕ ದೇಶಗಳಲ್ಲಿ ಪ್ರಭಾವ ಬೀರಿದೆ. ಕಳೆದ ವರ್ಷ ಬಿಹಾರದ ಗಯಾಕ್ಕೆ ಭೇಟಿ ನೀಡಿ, ಬುದ್ಧನಿಗೆ ಜ್ಞಾನೋದಯವಾದ ಪವಿತ್ರ ಭೂಮಿಯನ್ನು ವೀಕ್ಷಿಸಿ ನಮಸ್ಕರಿಸಿದ್ದೆ. ಯಾವ ಹೃದಯದಲ್ಲಿ ಕರುಣೆ ನೆಲೆಸಿದೆಯೋ, ಅಲ್ಲಿಯೇ ಬುದ್ಧನ ಚಿಂತನೆ ಜೀವಂತವಾಗಿರುತ್ತದೆ. ಮಾನವೀಯತೆ, ಪ್ರೀತಿ ಮತ್ತು ಕರುಣೆಯಿಂದ ಮಾತ್ರ ಜನರ ಹೃದಯಗಳನ್ನು ಗೆಲ್ಲಲು ಸಾಧ್ಯ ಎಂಬುದು ಬುದ್ಧನ ಮಾರ್ಗದರ್ಶನವಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com