

ಬೆಂಗಳೂರು: ಡಿಸೆಂಬರ್ 4ರಿಂದ 13ರವರೆಗೆ ನಡೆಯಲಿರುವ ‘ಬೆಂಗಳೂರು ಜಾತ್ರೆ’ಯ ಅಂಗವಾಗಿ ನಗರದ ಸಾರ್ವಜನಿಕ ಸ್ಥಳಗಳನ್ನು ಸುಧಾರಿಸುವ ಉದ್ದೇಶದಿಂದ ‘ಬೆಂಗಳೂರು ವಿನ್ಯಾಸ: ಮುಕ್ತ ಆಹ್ವಾನ’ ಉಪಕ್ರಮ ಆರಂಭಿಸಲಾಗಿದೆ.
ಇದರಡಿ ವಿನ್ಯಾಸಕಾರರು, ವಾಸ್ತುಶಿಲ್ಪಿಗಳು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಗರದ ದೈನಂದಿನ ಬಳಕೆಯ ಸ್ಥಳಗಳನ್ನು ಅಭಿವೃದ್ಧಿಪಡಿಸಲು ತಮ್ಮ ವಿನ್ಯಾಸ ಮತ್ತು ಸಲಹೆಗಳನ್ನು ಸಲ್ಲಿಸಬಹುದು.
ರಸ್ತೆ ದೀಪಗಳು, ಬಸ್ ನಿಲ್ದಾಣಗಳು, ಸಾರ್ವಜನಿಕ ಆಸನಗಳು, ರಸ್ತೆ ವಿಭಜಕಗಳು, ಕಸದ ತೊಟ್ಟಿಗಳು, ನಾಗರಿಕ ಮಾಹಿತಿ ಫಲಕಗಳು, ಅಂಗಡಿಗಳ ಮುಂಭಾಗ ಹಾಗೂ ನೆರೆಹೊರೆ ಪ್ರದೇಶಗಳ ವಿಶಿಷ್ಟ ಗುರುತನ್ನು ಸುಧಾರಿಸುವಂತಹ ಪ್ರಾಯೋಗಿಕ, ಕಡಿಮೆ ವೆಚ್ಚದ ಮತ್ತು ಎಲ್ಲರಿಗೂ ಅನುಕೂಲವಾಗುವ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.
ಇದಲ್ಲದೆ, ನಗರದ ಯಾವುದಾದರೂ 500 ಮೀಟರ್ ಉದ್ದದ ರಸ್ತೆ ಅಥವಾ ಪ್ರದೇಶವನ್ನು ಆಯ್ಕೆ ಮಾಡಿಕೊಂಡು, ಪಾದಚಾರಿ ಸಂಚಾರ, ರಸ್ತೆ ದಾಟುವ ವ್ಯವಸ್ಥೆ, ಹಸಿರು ಪ್ರದೇಶ, ಬೆಳಕಿನ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿ ವಿನ್ಯಾಸವನ್ನೂ ಸಲ್ಲಿಸಬಹುದು.
ನಗರದ ಅಗತ್ಯಗಳಿಗೆ ನಾಗರಿಕರ ಸೃಜನಶೀಲತೆಯನ್ನು ಬೆಸೆಯುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ನಗರವನ್ನು ಅದರ ಬೃಹತ್ ಮೂಲಸೌಕರ್ಯಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಜನರು ಪ್ರತಿದಿನ ಬಳಸುವ ಸಣ್ಣಪುಟ್ಟ ಸಾರ್ವಜನಿಕ ಸ್ಥಳಗಳೂ ನಗರದ ಅನುಭವವನ್ನು ರೂಪಿಸುತ್ತವೆ. ಬೆಂಗಳೂರನ್ನು ಹೆಚ್ಚು ಸುಲಭವಾಗಿ ಬಳಸಬಹುದಾದ, ಸ್ವಾಗತಾರ್ಹ ಹಾಗೂ ವಾಸಯೋಗ್ಯ ನಗರವನ್ನಾಗಿ ಮಾಡುವ ಆಲೋಚನೆಗಳನ್ನು ನಾಗರಿಕರು ಮುಂದಿಡಬೇಕೆಂಬುದು ನಮ್ಮ ಆಶಯ ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ಐದು ನಗರ ಪಾಲಿಕೆಗಳಿಗೆ ಪ್ರತ್ಯೇಕ ಗುರುತು ರೂಪಿಸುವ ಮತ್ತೊಂದು ಸವಾಲನ್ನೂ ನೀಡಲಾಗಿದೆ. ಸ್ಥಳೀಯ ಪ್ರದೇಶಗಳ ವೈಶಿಷ್ಟ್ಯವನ್ನು ಪ್ರತಿಬಿಂಬಿಸುವುದರ ಜೊತೆಗೆ ಇಡೀ ಬೆಂಗಳೂರಿನ ಸಾಮಾನ್ಯ ಗುರುತನ್ನು ಉಳಿಸಿಕೊಳ್ಳುವ ವಿನ್ಯಾಸಗಳನ್ನು ಸಲ್ಲಿಸಬಹುದು.
ಸಲ್ಲಿಕೆಯಾಗುವ ವಿನ್ಯಾಸಗಳು ಕೇವಲ ಆಕರ್ಷಕವಾಗಿ ಕಾಣುವುದಕ್ಕೆ ಸೀಮಿತವಾಗಿರಬಾರದು. ಅವುಗಳನ್ನು ಕಾರ್ಯರೂಪಕ್ಕೆ ತರಲು ಮತ್ತು ನಿರ್ವಹಿಸಲು ಸಾಧ್ಯವಾಗುವಂತಿರಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ವಿನ್ಯಾಸ ರೂಪಿಸುವಾಗ ವೆಚ್ಚ, ಎಲ್ಲರಿಗೂ ಲಭ್ಯವಾಗುವ ಸೌಲಭ್ಯಗಳು, ಅಸ್ತಿತ್ವದಲ್ಲಿರುವ ಮೂಲಸೌಕರ್ಯ, ಬಳಸುವ ವಸ್ತುಗಳು ಹಾಗೂ ನಿರ್ವಹಣೆಯ ಅಗತ್ಯಗಳನ್ನು ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.
ಉತ್ತಮ ವಿನ್ಯಾಸವೆಂದರೆ ಅದು ನೋಡಲು ಸುಂದರವಾಗಿರುವುದಷ್ಟೇ ಅಲ್ಲ. ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು, ನಿರ್ವಹಣೆಗೆ ಕಡಿಮೆ ವೆಚ್ಚವಾಗಬೇಕು, ಜನರ ದೈನಂದಿನ ಅನುಭವವನ್ನು ಸುಧಾರಿಸಬೇಕು ಹಾಗೂ ನಾಗರಿಕ ಸಂಸ್ಥೆಗಳು ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಬೇಕು ಎಂದು ಹೇಳಿದ್ದಾರೆ.
ಆಯ್ಕೆಯಾದ ವಿನ್ಯಾಸಗಳನ್ನು ಬೆಂಗಳೂರು ಜಾತ್ರೆಯ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಜಿಬಿಎ ರಚಿಸುವ ತೀರ್ಪುಗಾರರ ಸಮಿತಿಯು ಅತ್ಯುತ್ತಮ ಪ್ರಸ್ತಾವನೆಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಯಾದ ವಿನ್ಯಾಸಗಳನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ನಗರ ಪಾಲಿಕೆಗಳಿಗೆ ಕಳುಹಿಸಲಾಗುತ್ತದೆ. ಜೊತೆಗೆ, ತಮ್ಮ ವಿನ್ಯಾಸಗಳನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬುದರ ಕುರಿತು ಚರ್ಚಿಸಲು ಆಯ್ಕೆಯಾದ ವಿನ್ಯಾಸಕಾರರಿಗೆ ಸಚಿವರನ್ನು ಭೇಟಿಯಾಗುವ ಅವಕಾಶವೂ ನೀಡಲಾಗುತ್ತದೆ.
ವಿನ್ಯಾಸ ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿದ್ದು, ಆಸಕ್ತರು ತಮ್ಮ ಪ್ರಸ್ತಾವನೆಗಳನ್ನು support@bengalurujatre.in ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.