'ಬೆಂಗಳೂರು ಜಾತ್ರೆ'ಗೆ ಡೇಟ್‌ ಫಿಕ್ಸ್‌: 10 ದಿನಗಳ ಊರ ಹಬ್ಬಕ್ಕೆ ಉದ್ಯಾನನಗರಿ ಸಜ್ಜು; ಏನೆಲ್ಲಾ ಇರಲಿದೆ? ಇಲ್ಲಿದೆ ವಿವರ...

ಮುಂಬರುವ ಡಿಸೆಂಬರ್‌ನಲ್ಲಿ ಊರ ಹಬ್ಬ, ಬೆಂಗಳೂರು ಜಾತ್ರೆ ಆಯೋಜಿಸುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಘೋಷಿಸಿದ್ದಾರೆ.
Krishna Byre Gowda
ಕೃಷ್ಣ ಬೈರೇಗೌಡ
Updated on: 

ಬೆಂಗಳೂರು: ರಾಜ್ಯ ಸರ್ಕಾರ ಸ್ವಾತಂತ್ರ್ಯ ದಿನಾಚರಣೆ ವೇಳೆ ಫ್ರೀಡಂ ಹಬ್ಬದ ಮೂಲಕ ಸಿಲಿಕಾನ್ ಸಿಟಿ ಜನರಿಗೆ ಮನರಂಜನೆಯ ರಸದೌತಣಕ್ಕೆ ವೇದಿಕೆ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹಬ್ಬ, ಅಲ್ಲ ಈ ಭಾರಿ ಅದ್ದೂರಿ ಬೆಂಗಳೂರು ಜಾತ್ರೆಗೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ.

ಮುಂಬರುವ ಡಿಸೆಂಬರ್‌ನಲ್ಲಿ ಊರ ಹಬ್ಬ, ಬೆಂಗಳೂರು ಜಾತ್ರೆ ಆಯೋಜಿಸುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಘೋಷಿಸಿದ್ದಾರೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಕೃಷ್ಣ ಬೈರೇಗೌಡ ಅವರು, ಫ್ರೀಡಂ ಹಬ್ಬ ಈಗಾಗಲೇ ಜನರ ಮನಸು ಗೆದ್ದಿತ್ತು. ಬೆಂಗಳೂರು ಜನರಿಗಾಗಿ ಊರ ಹಬ್ಬ ಮಾಡಬೇಕು ಎಂದು ಮುಖ್ಯಮಂತ್ರಿಗಳು ಕೂಡ ಹೇಳಿದ್ದರು. ಬೆಂಗಳೂರು ಉತ್ಸವದ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 4ರಿಂದ ಡಿಸೆಂಬರ್ 13ರವರೆಗೆ `ಬೆಂಗಳೂರು ಜಾತ್ರೆʼ ಆಯೋಜನೆ ಮಾಡುತ್ತಿದ್ದೇವೆ ಎಂದರು.

ನಗರದ ಮೂಲಸೌಕರ್ಯಗಳನ್ನು ಸುಧಾರಿಸುವುದರ ಜೊತೆಗೆ, ಕರ್ನಾಟಕದ ಶ್ರೀಮಂತ ಕಲೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸಿ ಉತ್ತೇಜಿಸುವುದು ಹಾಗೂ ಯಾಂತ್ರಿಕ ಮತ್ತು ವೇಗದ ಜೀವನಶೈಲಿಯ ನಗರದಲ್ಲಿ ವಾಸಿಸುವ ಜನರ ಜೀವನವನ್ನು ಶ್ರೀಮಂತಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

"ಇದೇ ಆಶಯದೊಂದಿಗೆ, ರಾಜ್ಯ ಸರ್ಕಾರವು 'ಬೆಂಗಳೂರು ಜಾತ್ರೆ'ಯನ್ನು ಆಯೋಜಿಸಲು ನಿರ್ಧರಿಸಿದೆ," ಎಂದು ಸಚಿವರು ತಿಳಿಸಿದರು.

Krishna Byre Gowda
ಫ್ರೀಡಂ ಹಬ್ಬದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಹಳ್ಳಿ ಸೊಗಡಿನ ಊರಹಬ್ಬ; ಡಿಸೆಂಬರ್‌ನಲ್ಲಿ ಬೆಂಗಳೂರು ಜಾತ್ರೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೇಳಿಕೆಯ ಪ್ರಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮತ್ತು ಸಚಿವ ಕೃಷ್ಣ ಬೈರೇಗೌಡ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಜಾತ್ರೆಯು, ಇಡೀ ಸಮುದಾಯವೇ ಒಗ್ಗೂಡಿ ಆಚರಿಸುವ ಕರ್ನಾಟಕದ ಸಾಂಪ್ರದಾಯಿಕ 'ಊರು ಹಬ್ಬ/ಜಾತ್ರೆ'ಯಿಂದ ಸ್ಫೂರ್ತಿ ಪಡೆದಿದೆ.

ನಗರದ ವಿವಿಧ ಬಡಾವಣೆಗಳು, ಸಮುದಾಯಗಳು, ಸಾಂಸ್ಕೃತಿಕ ಸಂಸ್ಥೆಗಳು, ಶಾಲೆ-ಕಾಲೇಜುಗಳು, ವಾಣಿಜ್ಯ ಸಂಸ್ಥೆಗಳು, ಕಲಾವಿದರು ಮತ್ತು ಸರ್ಕಾರಿ ಏಜೆನ್ಸಿಗಳು ನಗರದಾದ್ಯಂತ ತಮ್ಮದೇ ಆದ ಕಾರ್ಯಕ್ರಮಗಳನ್ನು ಆಯೋಜಿಸಲು ಒಂದು ಸಾಮಾನ್ಯ ವೇದಿಕೆಯನ್ನು ಕಲ್ಪಿಸುವ ಮೂಲಕ ಆ 'ಜಾತ್ರೆಯ ಭಾವನೆ'ಯನ್ನು ಬೆಂಗಳೂರಿಗೆ ತರುವುದು ಇದರ ಉದ್ದೇಶವಾಗಿದೆ.

ಇದಕ್ಕಾಗಿ ಯಾವುದೇ ಒಂದು ನಿರ್ದಿಷ್ಟ 'ಜಾತ್ರಾ ಮೈದಾನ' ಅಥವಾ ಕೇಂದ್ರೀಯ ವೇದಿಕೆ ಇರುವುದಿಲ್ಲ. ಒಂದೇ ಸ್ಥಳಕ್ಕೆ ಸೀಮಿತವಾಗದೆ ನಗರದ ಹಲವೆಡೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಬೀದಿಗಳು, ಉದ್ಯಾನವನಗಳು, ಸಾರ್ವಜನಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು, ಸಾಂಸ್ಕೃತಿಕ ಕೇಂದ್ರಗಳು ಮತ್ತು ಇತರ ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇನ್ನು 10 ದಿನಗಳ ಕಾಲ ನಡೆಯುವ ಈ ಬೆಂಗಳೂರು ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳು ಇರಲಿವೆ. ಬೆಂಗಳೂರು ಮೆಟ್ರೋ, ಪೊಲೀಸ್ ಇಲಾಖೆ, ಬೆಸ್ಕಾಂ ಸೇರಿದಂತೆ ಎಲ್ಲಾ ಅಂಗ ಸಂಸ್ಥೆಗಳು ಸೇರಿ ಈ ಬೆಂಗಳೂರು ಜಾತ್ರೆ ಮಾಡುತ್ತೇವೆ. ಎಲ್ಲಾ ಸಂಸ್ಥೆಗಳಿಗೂ ಪತ್ರ ಬರೆದಿದ್ದೇವೆ. ಐಟಿ ಹಬ್‌ಗಳಿದ್ದಾವೆ, ಖಾಸಗಿ ಶಿಕ್ಷಣ ಸಂಸ್ಥೆಗಳು, ಕೇಂದ್ರದಡಿ ಬರುವ ಇಲಾಖೆಗಳಿದ್ದಾವೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹೀಗಾಗಿ ಅವರಿಗೂ ಕಾರ್ಯಕ್ರಮ ಮಾಡುವಂತೆ ಆಹ್ವಾನ ನೀಡಲಿದ್ದೇವೆ. ಹೋಟೆಲ್, ರೆಸ್ಟೋರೆಂಟ್‌ಗಳಿಗೂ ಆಹ್ವಾನ ನೀಡಿದ್ದು, ಆಯೋಜಕರಾಗಿ ಭಾಗಿಯಾಗುವಂತೆ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಜಾತ್ರೆಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು?

ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳಲ್ಲೂ ಕಾರ್ಯಕ್ರಮಗಳು ನಡೆಯಲಿವೆ. ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಉದ್ಯಾನ, ರಸ್ತೆಗಳಲ್ಲಿ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಾನಪದ ಕಲೆಗಳ ಪ್ರದರ್ಶನ, ನಮ್ಮ ರಸ್ತೆ, ನಮ್ಮ ಬಡಾವಣೆ, ನಮ್ಮ ಸಂಸ್ಥೆ, ನಮ್ಮ ಕಲೆ ಹೀಗೆ ಎಲ್ಲರ ಜಾತ್ರೆ. ಜಿಬಿಎ, ಬಿಡಿಎ, ಕನ್ನಡ-ಸಂಸ್ಕೃತಿ ಇಲಾಖೆ ಸೇರಿ ಹಣ ಹಾಕಿ ಮಾಡಲಾಗುತ್ತೆ.

ಕನ್ನಡ-ಸಾಂಸ್ಕೃತಿಕ ಇಲಾಖೆಯಿಂದಲೇ 5 ಕೋಟಿ ಹಣ ಮೀಸಲಿದೆ. ಈ ರೀತಿ ಕಾರ್ಯಕ್ರಮದಿಂದ ಬೆಂಗಳೂರಿಗೆ ಹೆಚ್ಚು ಪ್ರವಾಸಿಗರು ಬರುತ್ತಾರೆ. ಇದು ಬೆಂಗಳೂರಿನ ಆರ್ಥಿಕ ಪ್ರಗತಿಗೂ ಸಹಕಾರವಾಗುತ್ತೆ. ಖಾಸಗಿ ಸಂಸ್ಥೆ ಬೆಂಗಳೂರು ಹಬ್ಬ ಆಯೋಜನೆ ಮಾಡುತ್ತಾ ಇತ್ತು. ಇದೀಗ ರಾಜ್ಯ ಸರ್ಕಾರವೇ ಕಾರ್ಯಕ್ರಮ ಮಾಡಲು ಮುಂದಾಗಿದೆ. 15 ರಿಂದ 20 ಕೋಟಿ ರೂ. ವೆಚ್ಚದಲ್ಲಿ ‘ಬೆಂಗಳೂರು ಜಾತ್ರೆ’ ಆಚರಣೆಗೆ ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com