

ತುಮಕೂರು: ಇಲ್ಲಿನ ದಿಬ್ಬೂರು ಬಳಿ ಇರುವ ವಿದೇಶಿ ವಲಸಿಗರ ಬಂಧನ ಕೇಂದ್ರ (ಡಿಟೆನ್ಷನ್ ಸೆಂಟರ್)ದ ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿ ನೈಜೀರಿಯಾ ಮೂಲದ ಮಹಿಳೆಯೊಬ್ಬರು ಪರಾರಿಯಾಗಿರುವ ಪರಾರಿಯಾಗಿದ್ದು, ಈ ಘಟನೆ ಕೇಂದ್ರದ ಭದ್ರತಾ ವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ.
ಅಕ್ಟೋಬರ್ 20ರಂದು ಈ ಘಟನೆ ನಡೆದಿದ್ದು, ನೈಜೀರಿಯಾ ಮೂಲದ ಅಡೆವೋಲೆ ಅಡೆತು ಅನು (33) ಅಲಿಯಾಸ್ ರೆಜಿನಾ ಜಾರಾ ಅಲಿಯಾಸ್ ಆಯಿಷಾ ಕಿಟಕಿಯ ಕೆಳಭಾಗದಲ್ಲಿದ್ದ ಕಬ್ಬಿಣದ ಸರಳನ್ನು ಕತ್ತರಿಸಿ ಕಟ್ಟಡದಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಆಕೆಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ಬಂಧನ ಕೇಂದ್ರದಲ್ಲಿ ಪದೇಪದೇ ಇಂತಹುದ್ದೇ ಘಟನೆಗಳು ನಡೆಯುತ್ತಿದ್ದರೂ, ಅವುಗಳನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ಪ್ರಶ್ನೆಗಳು ವ್ಯಕ್ತವಾಗಿವೆ.
2023ರ ಜುಲೈನಲ್ಲಿ ಕೇಂದ್ರದಲ್ಲಿದ್ದ ವಿದೇಶಿ ಮಹಿಳೆಯರು ಸಿಬ್ಬಂದಿ ಮತ್ತು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಬಂಧನ ಕೇಂದ್ರದಲ್ಲಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವಿದೇಶಿ ಮಹಿಳೆಯರು ಹಾಗೂ ವೀಸಾ ಮತ್ತು ಪಾಸ್‌ಪೋರ್ಟ್ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ವಾಸಿಸುತ್ತಿರುವ ಮಹಿಳೆಯರನ್ನು ಇರಿಸಲಾಗುತ್ತದೆ.
ಆದರೆ, ಕೇಂದ್ರಕ್ಕೆ ಎತ್ತರದ ಸುತ್ತುಗೋಡೆ ಇಲ್ಲದಿರುವುದು ಹಾಗೂ ಸಿಸಿಟಿವಿ ಕ್ಯಾಮೆರಾಗಳ ಕೊರತೆಯಿಂದ ಬಂಧಿತರು ಯಾರ ಗಮನಕ್ಕೂ ಬಾರದಂತೆ ಪರಾರಿಯಾಗಲು ಸುಲಭವಾಗುತ್ತಿದೆ ಎನ್ನಲಾಗಿದೆ.
ಇದಲ್ಲದೆ, ಕೇಂದ್ರದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೆ ಸೂಕ್ತ ವಸತಿ ವ್ಯವಸ್ಥೆ ಅಥವಾ ವಿಶ್ರಾಂತಿಗಾಗಿ ಪ್ರತ್ಯೇಕ ಕೊಠಡಿಯೂ ಇಲ್ಲ. ಮಳೆಯಾದಾಗ ಆವರಣದೊಳಗಿನ ಒಂದು ಮೂಲೆಯಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ.
ಭದ್ರತೆಗಾಗಿ ನಾವು ಕಾವಲು ಸಿಬ್ಬಂದಿಯನ್ನು ಮಾತ್ರ ಒದಗಿಸುತ್ತೇವೆ. ಬಾಡಿಗೆ ಕಟ್ಟಡದಲ್ಲಿರುವ ಈ ಕೇಂದ್ರ ಸೂಕ್ತವಾಗಿಲ್ಲ ಎಂದು ಬಹಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದ್ದಾರೆ.