

ಬೆಂಗಳೂರು: ರಾಜಮನೆತನಕ್ಕೆ ನೀಡಬೇಕಾದ ಗೌರವ ಹಾಗೂ ಸಾಂಪ್ರದಾಯಿಕ ಪದ್ಧತಿಗಳಿಗೆ ಯಾವುದೇ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೈಸೂರು ದಸರಾ ಮಹೋತ್ಸವ ಆಚರಣೆ ವಿಚಾರವಾಗಿ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದಸರಾ ಮಹೋತ್ಸವ ಸರ್ಕಾರದ ಕಾರ್ಯಕ್ರಮವೇ ಹೊರತು ಡಿಕೆಶಿ ಕಾರ್ಯಕ್ರಮವಲ್ಲ. ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಪ್ರಮೋದಾದೇವಿ ಅವರು ನೀಡಿರುವ ಹೇಳಿಕೆಯನ್ನು ನಾನು ಇನ್ನೂ ಪೂರ್ಣವಾಗಿ ನೋಡಿಲ್ಲ. ಅವರು ಏನು ಹೇಳಿದ್ದಾರೆ ಎಂಬುದನ್ನು ಗಮನಿಸಿ, ಅವರೊಂದಿಗೆ ಚರ್ಚೆ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರವೂ ಅಲ್ಲ, ಪ್ರಮೋದಾದೇವಿ ಅವರ ವೈಯಕ್ತಿಕ ವಿಚಾರವೂ ಅಲ್ಲ ಇದು ಇಡೀ ರಾಜ್ಯದ ಹೆಮ್ಮೆಯ ಹಬ್ಬದ ವಿಚಾರ ಎಂದರು
ಮೊದಲಿನಿಂದಲೂ ರಾಜಮನೆತನಕ್ಕೆ ಯಾವ ರೀತಿ ಗೌರವ ನೀಡಬೇಕೋ, ಆ ಪರಂಪರೆಯ ಪ್ರಕಾರವೇ ಎಲ್ಲವನ್ನೂ ಮಾಡಿಕೊಂಡು ಬರಲಾಗಿದೆ. ಹಳೆಯ ಪದ್ಧತಿ ಏನಿದೆಯೋ ಅದನ್ನೇ ಮುಂದುವರಿಸಿದ್ದೇವೆ. ನನಗೆ ಇತಿಹಾಸದ ಎಲ್ಲಾ ಸೂಕ್ಷ್ಮಗಳು ಗೊತ್ತಿಲ್ಲದಿರಬಹುದು, ಆದರೆ ಪರಂಪರೆಗೆ ಗೌರವ ನೀಡಿದ್ದೇವೆ. ಈಗ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಪ್ರಜಾಪ್ರಭುತ್ವ ಇರದಿದ್ದರೆ ಬೇರೆಯೇ ಇರುತ್ತಿತ್ತು, ಆದರೆ ಈಗ ನಿಯಮಗಳ ಪ್ರಕಾರ ನಡೆಯಬೇಕಾಗುತ್ತದೆ ಎಂದು ಹೇಳಿದರು.
ಆನೆ ನನ್ನ ಮಾತು ಕೇಳಲಿಲ್ಲ ಎಂಬ ವಿಚಾರವೇ ಇಲ್ಲ. ಈ ಬಾರಿ ಹೊಸ ಆನೆ ‘ಪ್ರಶಾಂತ’ ಮೂಲಕ ಮೆರವಣಿಗೆಯನ್ನು ಸಾಂಪ್ರದಾಯಿಕವಾಗಿ ನಡೆಸಲಾಗಿದೆ. ಶಿವಮೊಗ್ಗದಲ್ಲಿ ಈ ಹಿಂದೆ ಏನಾಯಿತು ಎಂಬುದನ್ನು ಎಲ್ಲರೂ ನೋಡಿದ್ದೀರಿ, ಹೀಗಾಗಿ ಮುನ್ನೆಚ್ಚರಿಕೆಯಿಂದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದರು.