

ಬೆಂಗಳೂರು: ವಿಧಾನ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು 4 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಹಾಗೂ ಜನತಾ ದಳ (ಜಾತ್ಯತೀತ) ಒಳಗೊಂಡ ಎನ್ಡಿಎ 4-0 ಅಂತರದ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಬಿಜೆಪಿ ಬುಧವಾರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಾಲೆಳೆದಿದೆ.
'ಕಾಕ್ರೋಚ್ ಜನತಾ ಪಾರ್ಟಿ' (CJP)ಗೆ ಸಂಬಂಧಿಸಿದ ಯುವಜನ ಮತ್ತು ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಅವರು 'ಸೋನಮ್, ಇಟ್ಸ್ ಡನ್, ಬ್ರೋ' (Sonam, it's done, bro) ಎಂದು ಪೋಸ್ಟ್ ಮಾಡಿದ ರೀತಿಯಲ್ಲಿಯೇ ಬಿಜೆಪಿ ಕೂಡ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ.
ಎಂಎಲ್ಸಿ ಚುನಾವಣೆಯಲ್ಲಿನ ನಾಲ್ಕೂ ಸ್ಥಾನಗಳಲ್ಲಿ ಹೀನಾಯ ಸೋಲು ಕಂಡ ಆಡಳಿತಾರೂಢ ಕಾಂಗ್ರೆಸ್ ಅನ್ನು ಲೇವಡಿ ಮಾಡಲು ಬಿಜೆಪಿ ಇಂಟರ್ನೆಟ್ನಲ್ಲಿ ವೈರಲ್ ಆಗಿರುವ ಟ್ರೆಂಡ್ ಒಂದನ್ನು ಬಳಸಿಕೊಂಡಿದೆ.
'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, 'ಡಿಕೆ, ಇಟ್ಸ್ ಡನ್ ಬ್ರೋ! ಎಂಎಲ್ಸಿ ಚುನಾವಣೆಯಲ್ಲಿ ಶಿಕ್ಷಕರ ಮತ್ತು ಪದವೀಧರರ ನಾಲ್ಕೂ ಕ್ಷೇತ್ರಗಳನ್ನು ಎನ್ಡಿಎ (NDA) ಗೆದ್ದುಕೊಂಡಿದೆ!' ಎಂದು ಬರೆದುಕೊಂಡಿದೆ. ಈ ಪೋಸ್ಟ್ನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಚಿತ್ರವನ್ನೂ ಹಂಚಿಕೊಂಡಿದೆ.
ಈ ಚುನಾವಣೆಯು ಕರ್ನಾಟಕದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಒಳಗೊಂಡಿರುವ 19 ಜಿಲ್ಲೆಗಳಲ್ಲಿ ನಡೆಯಿತು. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಗಳೂ ಸೇರಿವೆ. ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳೆರಡರಲ್ಲೂ ಗೆಲುವು ಸಾಧಿಸಿರುವುದು, ಆಡಳಿತಾರೂಢ ಡಿಕೆ ಶಿವಕುಮಾರ್ ನೇತೃತ್ವದ ಆಡಳಿತಕ್ಕಿಂತ ಹೆಚ್ಚಾಗಿ, ಸುಶಿಕ್ಷಿತ ವೃತ್ತಿಪರರು, ಶಿಕ್ಷಕರು ಮತ್ತು ಯುವ ಪದವೀಧರರು ಎನ್ಡಿಎ ಪರವಾಗಿದ್ದಾರೆ ಎಂಬ ಬಲವಾದ ಸಂದೇಶವನ್ನು ಒದಗಿಸಿದೆ.
ಎನ್ಡಿಎ ನಾಯಕರು ಈ ಒಗ್ಗೂಡಿದ ಚುನಾವಣಾ ಗೆಲುವನ್ನು ಒಂದು ನಿರ್ಣಾಯಕ ಮೆಟ್ಟಿಲು ಎಂದು ಬಣ್ಣಿಸಿದ್ದು, ಇದನ್ನು ಮುಂಬರುವ 2028ರ ಕರ್ನಾಟಕ ವಿಧಾನಸಭಾ ಚುನಾವಣೆಯ 'ಟ್ರೈಲರ್' ಎಂದು ಪರಿಗಣಿಸಿದ್ದಾರೆ.