

ಬೆಂಗಳೂರು: ರಾಜ್ಯದ ಅನುದಾನರಹಿತ ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿ ಈ ವರ್ಷ ನವೆಂಬರ್ 1ರಂದು 70ನೇ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ದೇಶನ ನೀಡಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆ, ಎಲ್ಲ ಶಾಲೆಗಳು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ಸೂಚಿಸಿದೆ. ಆದರೆ, ಈ ಬಾರಿ ನವೆಂಬರ್ 1 ಭಾನುವಾರ ಬಂದಿರುವುದರಿಂದ ಇಲಾಖೆಯ ಸೂಚನೆಗೆ ಆಕ್ಷೇಪ ವ್ಯಕ್ತವಾಗಿದ್ದು, ಶಾಲಾ ಆಡಳಿತ ಮಂಡಳಿಗಳಲ್ಲಿಯೂ ಗೊಂದಲ ಉಂಟಾಗಿದೆ.
‘ಭಾನುವಾರ ಮಕ್ಕಳನ್ನು ಶಾಲೆಗೆ ಕಳುಹಿಸಲು ಯಾವುದೇ ಪೋಷಕರು ಸಿದ್ಧರಿರುವುದಿಲ್ಲ. ಅಲ್ಲದೆ, ಐದು ತಿಂಗಳ ಸುದೀರ್ಘ ಎಸ್‌ಐಆರ್ ಕಾರ್ಯದ ಬಳಿಕ ಶಿಕ್ಷಕರಿಗೂ ಭಾನುವಾರದ ರಜೆ ದೊರೆಯುತ್ತಿದೆ’ ಎಂದು ಬೆಂಗಳೂರಿನ ಸರ್ಕಾರಿ ಶಾಲೆಯೊಂದರ ಮುಖ್ಯಶಿಕ್ಷಕರು ತಿಳಿಸಿದ್ದಾರೆ.