

ಬೆಂಗಳೂರು: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವರು, ಜನರು ಒಂದು ಲೀಟರ್ ನೀರಿಗೆ 30ರಿಂದ 35 ರೂ. ನೀಡುತ್ತಾರೆ. ಆದರೆ, ಹಾಲಿನ ದರ ಏರಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರೈತರಿಗೆ ನಷ್ಟವಾಗುವುದನ್ನು ತಡೆಯುವ ಉದ್ದೇಶದಿಂದ ಹಾಲಿನ ದರ ಹೆಚ್ಚಿಸಲಾಗಿದೆ. ಸರ್ಕಾರ ರೈತರ ನೆರವಿಗೆ ನಿಂತಿದೆ. ರೈತರು ನಮಗೆ ಮುಖ್ಯ ಎಂದು ಹೇಳಿದರು .
ಹಾಲಿನ ದರವನ್ನು ಪ್ರತಿ ಲೀಟರ್‌ಗೆ 12ರಿಂದ 15 ರೂ. ಹೆಚ್ಚಿಸಬೇಕೆಂಬ ಬೇಡಿಕೆಯೂ ಇತ್ತು. ರೈತರಿದ್ದರೆ ಮಾತ್ರ ನಮಗೆ ಹಾಲು ಕುಡಿಯಲು ಸಾಧ್ಯ. ರೈತರೇ ಇಲ್ಲದಿದ್ದರೆ ಹಾಲು ಸಿಗಲು ಸಾಧ್ಯವೇ? ಪ್ಲಾಸ್ಟಿಕ್ ಪ್ಯಾಕಿಂಗ್, ಡೀಸೆಲ್, ಪೆಟ್ರೋಲ್ ಸೇರಿದಂತೆ ಎಲ್ಲದರ ಬೆಲೆ ಏರಿಕೆಯಾಗಿದೆ. ಹಾಲಿನ ಸಾಗಣೆ ವೆಚ್ಚವೂ ಹೆಚ್ಚಾಗಿದೆ.
ಜನರು ಒಂದು ಲೀಟರ್ ನೀರಿಗೆ 30ರಿಂದ 35 ರೂ. ನೀಡುತ್ತಾರೆ. ನೆರೆಯ ಆಂಧ್ರಪ್ರದೇಶಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ಇಲ್ಲಿ ದರ ಕಡಿಮೆ ಇದ್ದ ಕಾರಣ ನಂದಿನಿ ಹಾಲನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು. ಇದನ್ನು ತಡೆಯುವ ಅಗತ್ಯವಿತ್ತು ಎಂದು ತಿಳಿಸಿದರು.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕೂಡ ನಂದಿನಿ ತುಪ್ಪ ಖರೀದಿಸುತ್ತಿದೆ ಟಿಟಿಡಿ ಸ್ಥಳೀಯವಾಗಿಯೇ ತುಪ್ಪ ಖರೀದಿಸಬಹುದಿತ್ತು. ಆದರೆ, ನಂದಿನಿ ಉತ್ಪನ್ನಗಳ ಮೇಲೆ ಅವರಿಗೆ ವಿಶ್ವಾಸವಿದೆ. ಮೈಸೂರು ಪಾಕ್ ಸೇರಿದಂತೆ ಇತರ ಸಿಹಿ ತಿನಿಸುಗಳ ತಯಾರಿಕೆಗೆ ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆಯಿದೆ. ಇದರ ಜೊತೆಗೆ ಸರ್ಕಾರ ರೈತರಿಗೆ ಆರ್ಥಿಕ ಪ್ರೋತ್ಸಾಹಧನವನ್ನೂ ನೀಡುತ್ತಿದೆ. ರೈತರು ನಷ್ಟ ಅನುಭವಿಸುತ್ತಿದ್ದ ಕಾರಣ ಹಾಲಿನ ದರ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಹಾಲಿನ ದರ ಹೆಚ್ಚಳಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು.ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಎಲ್ಲ ಪಕ್ಷಗಳ ಸದಸ್ಯರೂ ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿದ್ದರು. ವಿಧಾನಪರಿಷತ್ ಚುನಾವಣೆಗಳ ಕಾರಣದಿಂದ ಈ ಹಿಂದೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆಗಳು ಮುಗಿದಿರುವುದರಿಂದ ದರ ಏರಿಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.