ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಅವರಿಗೆ ಕಾನೂನು ಸಂಕಷ್ಟಗಳು ಎದುರಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಜೀವ ಬೆದರಿಕೆ ಹಾಕಿರುವ ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಧನ್ವೀರ್‌ಗೆ ಅಧಿಕೃತವಾಗಿ ನೋಟಿಸ್ ಜಾರಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಯಾವೆಲ್ಲಾ ಪೊಲೀಸ್ ಠಾಣೆಗಳಿಂದ ನೋಟಿಸ್?
ರಾಜರಾಜೇಶ್ವರಿನಗರ ಪೊಲೀಸ್ ಠಾಣೆ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಆಪ್ತ ಹಾಗೂ ಮ್ಯಾನೇಜರ್ ಆದ ಪಿ.ಎ. ನಾಗರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 20 ರಂದು ವ್ಯವಹಾರದ ವಿಚಾರವಾಗಿ ಮಾತನಾಡಲು ಹೋದಾಗ ಧನ್ವೀರ್ ಕುಟುಂಬಸ್ಥರು ಗಲಾಟೆ ಮಾಡಿದ್ದು, ಬಳಿಕ ಧನ್ವೀರ್ ವಾಟ್ಸಾಪ್ ಮೂಲಕ ಧ್ವನಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಸವೇಶ್ವರನಗರ ಪೊಲೀಸ್ ಠಾಣೆ: ನಿರ್ಮಾಪಕ ಭೋಜರಾಜ ರೈ ಎಂಬುವರು ನೀಡಿದ ದೂರಿನ ಅನ್ವಯ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪದಡಿ ಮತ್ತೊಂದು ಪ್ರಕರಣ ದಾಖಲಾಗಿದೆ. ಆರ್.ಆರ್. ನಗರ ಹಾಗೂ ಬಸವೇಶ್ವರ ನಗರ ಪೊಲೀಸರು ಎರಡು ದಿನದೊಳಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣೆ: ಇತ್ತೀಚೆಗೆ ವೈರಲ್ ಆದ ಆಡಿಯೋದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಪುತ್ರ, ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಮುಖ್ಯಮಂತ್ರಿ ಮತ್ತು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ ಆರೋಪದಡಿ ಝೈದ್ ಖಾನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿನಾಯಕ್ ದೂರು ನೀಡಿದ್ದು, ಇಲ್ಲಿಯೂ ಎಫ್‌ಐಆರ್ ದಾಖಲಾಗಿದೆ.
ಈ ಬೆಳವಣಿಗೆಗಳ ಕುರಿತು ಧನ್ವೀರ್ ಪರ ವಕೀಲರಾದ ಪ್ರಜ್ವಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ವೈರಲ್ ಆಗಿರುವ ಆಡಿಯೋಗಳನ್ನು ತಿರುಚಲಾಗಿದೆ ಮತ್ತು ಧನ್ವೀರ್ ವಿರುದ್ಧದ ಎಲ್ಲ ಆರೋಪಗಳು ಸುಳ್ಳು" ಎಂದು ತಿಳಿಸಿದ್ದಾರೆ. ಅಲ್ಲದೆ 10 ಕೋಟಿ ರೂ. ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಇ.ಡಿ ಹಾಗೂ ಐಟಿ ತನಿಖೆಗೂ ನಾವು ಸಿದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ನಟ ದರ್ಶನ್ ಅವರು ತಮ್ಮ ಹಾಗೂ ವಿಜಯಲಕ್ಷ್ಮಿ ಅವರ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ಅವಹೇಳನಕಾರಿ ಹೇಳಿಕೆ ಅಥವಾ ಸುದ್ದಿ ಬಿತ್ತರಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತರಲು ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ ಎನ್ನಲಾಗಿದೆ.