

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇದಕ್ಕೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿ ಸರ್ಕಾರ ಆದೇಶಿಸಿದೆ.
ಎಸ್‌ಐಟಿ ರಚನೆ ಬಗ್ಗೆ ಹೈಕೋರ್ಟ್ ಗರಂ ಆಗಿತ್ತು. ವಿಶೇಷ ತನಿಖಾ ತಂಡ ರಚಿಸಿ ಸಕ್ಷಮ ಪೊಲೀಸ್ ಠಾಣೆ ರೂಪಿಸುವಲ್ಲಿ ರಾಜ್ಯ ಸರ್ಕಾರದ ವಿಳಂಬದ ಕ್ರಮವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಇದರಿಂದಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು, ಇದಕ್ಕೆ ಪೊಲೀಸ್ ಠಾಣೆ ಸ್ಥಾನಮಾನ ನೀಡಲಾಗಿದೆ. ಎಸ್‌ಐಟಿ ಮುಖ್ಯಸ್ಥರ ನೇಮಕಾತಿಯನ್ನು ಸೋಮವಾರದಂದು ಅಂತಿಮಗೊಳಿಸಲಾಗುತ್ತದೆ.
ಎಸ್‌ಐಟಿ ಮುಖ್ಯಸ್ಥ ಸ್ಥಾನಕ್ಕೆ ಮತ್ತು ಇನ್ನೊಬ್ಬ ಸದಸ್ಯರ ಸ್ಥಾನಕ್ಕೆ ಆರ್. ಹಿತೇಂದ್ರ, ಬಿ.ಕೆ. ಸಿಂಗ್, ಎಸ್. ಮುರುಗನ್ ಮತ್ತು ಸೌಮೆಂದು ಮುಖರ್ಜಿ ಸೇರಿದಂತೆ ನಾಲ್ಕು ಎಡಿಜಿಪಿ (ADGP) ಮಟ್ಟದ ಅಧಿಕಾರಿಗಳ ಹೆಸರುಗಳನ್ನು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸಲ್ಲಿಸಿದೆ
ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಕೀ-ಆನ್ಸರ್ ಸೋರಿಕೆ, ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಎಸ್. ಸಾಹುಕರ್, ಸದಸ್ಯೆ ಬಿ.ವಿ. ಗೀತಾ, ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ ಕಣ್ಣಾಳೆ ಅವರ ಬಂಧನ ಸೇರಿದಂತೆ ಹಲವು ಅಕ್ರಮಗಳ ತನಿಖೆಯನ್ನು ಈ ಎಸ್‌ಐಟಿ ಮುಂದುವರಿಸಲಿದೆ.