

ಬೆಂಗಳೂರು: ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಅಕ್ಟೋಬರ್ 29 ಮತ್ತು 30ರಂದು ವಿಶೇಷ ತಪಾಸಣೆ ನಡೆಸಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ), ಆಹಾರ ಸುರಕ್ಷತಾ ಮಾನದಂಡಗಳನ್ನು ಗಂಭೀರವಾಗಿ ಉಲ್ಲಂಘಿಸಿದ 12 ಘಟಕಗಳನ್ನು ಸೀಲ್‌ಡೌನ್ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ರಾಜ್ಯಾದ್ಯಂತ ಈ ವಿಶೇಷ ತಪಾಸಣಾ ಅಭಿಯಾನ ಕೈಗೊಳ್ಳಲಾಗಿದೆ.
ಅಭಿಯಾನದ ಎರಡನೇ ದಿನವಾದ ಶುಕ್ರವಾರ ಅಧಿಕಾರಿಗಳು 57 ಘಟಕಗಳನ್ನು ಪರಿಶೀಲಿಸಿ, ಪ್ರಯೋಗಾಲಯ ಪರೀಕ್ಷೆಗಾಗಿ 37 ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, 29 ಘಟಕಗಳು ಅಥವಾ ಆಹಾರ ವ್ಯವಹಾರ ನಿರ್ವಾಹಕರಿಗೆ ನೋಟಿಸ್ ನೀಡಿದ್ದಾರೆ.
ಎರಡು ದಿನಗಳ ಅಭಿಯಾನದಲ್ಲಿ ಒಟ್ಟು 69 ನೀರಿನ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಆಹಾರ ಪರೀಕ್ಷಾ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ವಿವಿಧ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 53 ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ತಪಾಸಣೆ ವೇಳೆ ಹಲವು ಘಟಕಗಳಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದೆ. ಆಹಾರ ನಿರ್ವಹಣೆ ಮಾಡುವ ಸಿಬ್ಬಂದಿ ಕಡ್ಡಾಯ ವೈದ್ಯಕೀಯ ಪ್ರಮಾಣಪತ್ರ ಹೊಂದಿರದಿರುವುದು, ನೀರಿನ ಬಾಟಲಿಗಳ ಮೇಲಿನ ಲೇಬಲ್‌ಗಳಲ್ಲಿ ಲೋಪ, ನೀರಿನ ಗುಣಮಟ್ಟ ಪರೀಕ್ಷೆಯ ವರದಿಗಳು ಇಲ್ಲದಿರುವುದು ಹಾಗೂ ಕೀಟ ನಿಯಂತ್ರಣ ಪ್ರಮಾಣಪತ್ರದ ಕೊರತೆಯಂತಹ ಹಲವು ಅಕ್ರಮಗಳು ಪತ್ತೆಯಾಗಿವೆ.
ಸೀಲ್ ಡೌನ್ ಮಾಡಿದ ಘಟಕಗಳ ಪೈಕಿ ಹಾಸನ ಜಿಲ್ಲೆಯ ಸಂತೇಪೇಟೆಯ ಎಸ್‌ಪಿ ಫುಡ್ ಆ್ಯಂಡ್ ಬೆವರೇಜಸ್ ಹಾಗೂ ಬೆಂಗಳೂರು ನಗರ ಜಿಲ್ಲೆಯ ಮಾದನಾಯಕನಹಳ್ಳಿಯ ಅವಂತಿ ಇಂಡಸ್ಟ್ರೀಸ್‌ನಲ್ಲಿ ತೀವ್ರ ಸ್ವಚ್ಛತೆಯ ಕೊರತೆ ಕಂಡುಬಂದಿದೆ.
ಮಾದನಾಯಕನಹಳ್ಳಿಯ ಓಂ ಶಕ್ತಿ ಮಿನರಲ್ಸ್ ಮತ್ತು ಮೈಸೂರು ಗ್ರಾಮಾಂತರ ಜಿಲ್ಲೆಯ ಡಾಲಿಯಾ ಬೆವರೇಜಸ್ ಘಟಕಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಪಡೆಯಬೇಕಾದ ಕಡ್ಡಾಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಬೀಗ ಜಡಿಯಲಾಗಿದೆ.
ಕಲಬುರಗಿ ಜಿಲ್ಲೆಯ ನಂದಿ ಫುಡ್ ಆ್ಯಂಡ್ ಬೆವರೇಜಸ್ ಘಟಕದಲ್ಲಿ ತೀವ್ರ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಕಡ್ಡಾಯ ಪರವಾನಗಿಯೂ ಇರಲಿಲ್ಲ. ಹೀಗಾಗಿ ಅದನ್ನು ಮುಚ್ಚಿಸಲಾಗಿದೆ. ಬೀದರ್ ಜಿಲ್ಲೆಯ ಸಾಯಿ ರಾಮ್ ಫುಡ್ ಬೆವರೇಜಸ್ ಘಟಕವನ್ನು ಸ್ವಚ್ಛತೆಯ ಕೊರತೆಯಿಂದಾಗಿ ಬಂದ್ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಆಕ್ವಾ ರಿಫ್ರೆಶ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಘಟಕವು ತಪಾಸಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅದನ್ನೂ ಮುಚ್ಚಿಸಲಾಗಿದೆ.
ಇದೇ ವೇಳೆ, ಲೇಬಲ್‌ಗಳಲ್ಲಿನ ದೋಷಗಳು ಪತ್ತೆಯಾದ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿರುವ ಎಂ.ಎಸ್. ಫುಡ್ ಆ್ಯಂಡ್ ಬೆವರೇಜಸ್ ಘಟಕದಿಂದ ಒಂದು ಲೀಟರ್‌ನ ಪ್ಯಾಕೇಜ್ಡ್ ಕುಡಿಯುವ ನೀರಿನ 82 ಬಾಕ್ಸ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 7,380 ರೂ. ಎಂದು ತಿಳಿದುಬಂದಿದೆ.