ಕಬ್ಬು ಬೆಳೆಗಾರರ ನೆರವಿಗೆ ಧಾವಿಸಿ, , ರೈತರ ಹೋರಾಟಕ್ಕೆ ಅಂತ್ಯ ಹಾಡಿ: ಪ್ರಧಾನಿ ಮೋದಿಗೆ CM ಡಿಕೆಶಿ ಮನವಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ಪ್ರತಿ ಕೆ.ಜಿ.ಗೆ ಸುಮಾರು 45 ರೂ.ಗೆ ಮಾರಾಟವಾಗುತ್ತಿದೆ. ಈಗ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸಿದರೂ ಗ್ರಾಹಕರಿಗೆ ಸಕ್ಕರೆ ಬೆಲೆ ಏರಿಕೆಯ ಹೊರೆ ಬೀಳುವುದಿಲ್ಲ. ಬದಲಿಗೆ ಇದರಿಂದ ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಸಲು ಅನುಕೂಲವಾಗಲಿದೆ.
DK Shivkumar
ಡಿಕೆಶಿವಕುಮಾರ್
Updated on: 

ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸಲು ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಅವರು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಪರಿಷ್ಕರಣೆ, ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ನಿಗದಿಗೆ ಶೇ.9.5ರ ಮೂಲ ಸಕ್ಕರೆ ಇಳುವರಿ ಪ್ರಮಾಣವನ್ನು ಮರುಸ್ಥಾಪಿಸುವುದು ಸೇರಿದಂತೆ ಐದು ಪ್ರಮುಖ ಬೇಡಿಕೆಗಳ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

2019ರ ಫೆಬ್ರವರಿಯಿಂದ ಪ್ರತಿ ಕೆ.ಜಿ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ 31 ರೂ.ನಲ್ಲೇ ಸ್ಥಿರವಾಗಿದೆ. ಆದರೆ, ಇದೇ ಅವಧಿಯಲ್ಲಿ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಪ್ರತಿ ಟನ್‌ಗೆ 2,750 ರೂ.ನಿಂದ 3,650 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ಪ್ರತಿ ಕೆ.ಜಿ.ಗೆ ಸುಮಾರು 45 ರೂ.ಗೆ ಮಾರಾಟವಾಗುತ್ತಿದೆ. ಈಗ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸಿದರೂ ಗ್ರಾಹಕರಿಗೆ ಸಕ್ಕರೆ ಬೆಲೆ ಏರಿಕೆಯ ಹೊರೆ ಬೀಳುವುದಿಲ್ಲ. ಬದಲಿಗೆ ಇದರಿಂದ ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

2026ರ ಅಕ್ಟೋಬರ್‌ನಲ್ಲಿ ಹೊರಡಿಸಲಾದ ಎಥೆನಾಲ್ ಸಂಬಂಧಿತ ನಿರ್ದೇಶನವನ್ನು 2027ರ ಫೆಬ್ರವರಿಯ ಬೆಳೆ ಉತ್ಪಾದನಾ ಅಂದಾಜಿನ ಬಳಿಕ ಮರುಪರಿಶೀಲಿಸುವಂತೆಯೂ ಅವರು ಪ್ರಧಾನಿಯನ್ನು ಕೋರಿದ್ದಾರೆ.

ಆರಂಭದಲ್ಲಿ ಬಿ-ಹೆವಿ ಮೊಲಾಸಸ್‌ನಿಂದ ಎಥೆನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸುವುದರ ಜೊತೆಗೆ, ಕಬ್ಬಿನ ರಸ ಮತ್ತು ಬಿ-ಹೆವಿ ಮೊಲಾಸಸ್‌ನಿಂದ ತಯಾರಿಸುವ ಎಥೆನಾಲ್ ಬೆಲೆಯನ್ನು ಪರಿಷ್ಕರಿಸಬೇಕು. ಈ ಬೆಲೆ 2022-23ರಿಂದ ಬದಲಾಗದೆ ಉಳಿದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಡಿಮೆ ಸಕ್ಕರೆ ಇಳುವರಿ ಹೊಂದಿರುವ ಪ್ರದೇಶಗಳ ರೈತರಿಗೆ ಮಣ್ಣು ಮತ್ತು ಹವಾಮಾನದ ಕಾರಣದಿಂದ ಅನ್ಯಾಯವಾಗದಂತೆ ಎಫ್‌ಆರ್‌ಪಿ ನಿಗದಿಯ ಮೂಲ ಇಳುವರಿ ಪ್ರಮಾಣವನ್ನು ಶೇ.9.5ಕ್ಕೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಬೇಕು. ಇದರಿಂದ ಸಾಮಾನ್ಯ ಗ್ರಾಹಕರಿಗೆ ರಕ್ಷಣೆ ಸಿಗುವುದರ ಜೊತೆಗೆ ಬೃಹತ್ ಪ್ರಮಾಣದಲ್ಲಿ ಖರೀದಿಸುವ ವಾಣಿಜ್ಯ ಬಳಕೆದಾರರು ನ್ಯಾಯಯುತ ಬೆಲೆ ಪಾವತಿಸುವಂತಾಗುತ್ತದೆ ಎಂದು ತಿಳಿಸಿದ್ದಾರೆ.

DK Shivkumar
CM ಡಿ.ಕೆ ಶಿವಕುಮಾರ್ ಭರವಸೆಗೂ ಜಗ್ಗದ ಕಬ್ಬು ಬೆಳೆಗಾರರು; ಹೋರಾಟ ಮುಂದುವರಿಸಲು ನಿರ್ಧಾರ..!

ಇದರೊಂದಿಗೆ ಎಥೆನಾಲ್ ಮತ್ತು ಸಹ-ವಿದ್ಯುತ್ ಉತ್ಪಾದನೆಯಿಂದ ಬರುವ ಆದಾಯವನ್ನೂ ಸೇರಿಸುವಂತೆ ಆದಾಯ ಹಂಚಿಕೆ ಸೂತ್ರವನ್ನು ಪರಿಷ್ಕರಿಸಬೇಕು. ನೀತಿ ಆಯೋಗದ ಕಾರ್ಯಪಡೆ ಮತ್ತು ಕೃಷಿ ವೆಚ್ಚ ಹಾಗೂ ಬೆಲೆಗಳ ಆಯೋಗ (CACP) ಶಿಫಾರಸಿನಂತೆ ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸರ್ಕಾರ ಸಕಾಲದಲ್ಲಿ ಈ ಬೇಡಿಕೆಗಳ ಕುರಿತು ನಿರ್ಧಾರ ಪ್ರಕಟಿಸಿದರೆ ರೈತರ ಮನವೊಲಿಸಿ ಹೋರಾಟವನ್ನು ಅಂತ್ಯಗೊಳಿಸಲು ಹಾಗೂ ಕಬ್ಬು ಅರೆಯುವ ಪ್ರಕ್ರಿಯೆ ಮುಂದುವರಿಸಲು ರಾಜ್ಯಕ್ಕೆ ಅನುಕೂಲವಾಗಲಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಮತ್ತು ಎಲ್ಲ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಎರಡೂ ಕಡೆಯವರ ಸಮಸ್ಯೆಗಳನ್ನು ಆಲಿಸಿರುವುದಾಗಿಯೂ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕಾರ್ಯಾಚರಣೆಯಲ್ಲಿರುವ ಎಲ್ಲ 81 ಸಕ್ಕರೆ ಕಾರ್ಖಾನೆಗಳಲ್ಲಿ ಈಗ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಅನ್ವಯ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ. ಕಾರ್ಖಾನೆಗಳ ಪ್ರಯೋಗಾಲಯಗಳನ್ನೂ ತಿಂಗಳಿಗೆ ಎರಡು ಬಾರಿ ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಇದೇ ವೇಳೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರಿಗೂ ಪ್ರತ್ಯೇಕ ಪತ್ರ ಬರೆದಿರುವ ಅವರು, ಎಂ.ಎಸ್. ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿರುವ ಸಿ2 ವೆಚ್ಚದ ಮೇಲೆ ಶೇ.50ರಷ್ಟು ಲಾಭ ಸೇರಿಸುವ ಸೂತ್ರದ ಆಧಾರದಲ್ಲಿ ಕಬ್ಬಿನ ಎಫ್‌ಆರ್‌ಪಿಯನ್ನು ಪ್ರತಿ ಟನ್‌ಗೆ 5,500 ರೂ.ಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿ.ಗೆ 31 ರೂ.ನಿಂದ 41.50 ರೂ.ಗೆ ಹೆಚ್ಚಿಸುವಂತೆಯೂ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X