

ಬೆಂಗಳೂರು: ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರಿಗೆ ಪಶ್ಚಿಮ ಘಟ್ಟಗಳ ಅಪ್ರತಿಮ ಸೌಂದರ್ಯ ಹಾಗೂ ಜೀವವೈವಿಧ್ಯವನ್ನು ಪರಿಚಯಿಸಲು ರಾಜ್ಯ ಸರ್ಕಾರವು ವಿನೂತನ ಹೆಜ್ಜೆಯನ್ನಿಟ್ಟಿದೆ.
ಮುಂದಿನ ಆರು ತಿಂಗಳೊಳಗೆ ದೇಶದ ಮೊದಲ ಮೊಬೈಲ್ ಜೀವವೈವಿಧ್ಯ ಮ್ಯೂಸಿಯಂ "ವೆಸ್ಟರ್ನ್ ಘಾಟ್ಸ್ ಆನ್ ವೀಲ್ಸ್" (Western Ghats on Wheels) ರಾಜ್ಯದಲ್ಲಿ ಸಂಚರಿಸಲು ಸಜ್ಜಾಗಿದೆ.
ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೋಲ್ವೊ ಬಸ್ ರಾಜ್ಯದಾದ್ಯಂತ ಸಂಚರಿಸಲಿದ್ದು, ಸಮಾಜದ ವಿವಿಧ ವರ್ಗದ ಜನರಿಗೆ ಪಶ್ಚಿಮ ಘಟ್ಟಗಳ ಪ್ರಕೃತಿ ಸಂಪತ್ತಿನ ಪರಿಚಯ ಮಾಡಿಕೊಡಲಿದೆ.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಸಮಿತಿ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್ ಮಾತನಾಡಿ, ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ಆರು ತಿಂಗಳಲ್ಲಿ ಬಸ್ ಸೇವೆ ಆರಂಭಿಸುವ ಗುರಿ ಹೊಂದಲಾಗಿದೆ. ಯೋಜನೆಗೆ ಅಂದಾಜು ಒಂದು ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದ್ದಾರೆ.
ವೋಲ್ವೊ ಕಂಪನಿಯು 15 ಮೀಟರ್ ಉದ್ದದ, 9600 ಮಾದರಿಯ ಬಹು ಆಕ್ಸಲ್ ಐಷಾರಾಮಿ ಬಸ್ ಅನ್ನು ಈ ಸಂಚಾರಿ ವಸ್ತುಸಂಗ್ರಹಾಲಯಕ್ಕಾಗಿ ಕೊಡುಗೆಯಾಗಿ ನೀಡುತ್ತಿದೆ. ಬಸ್‌ನ ಒಳಭಾಗದಲ್ಲಿ ಸಂವಾದಾತ್ಮಕ ಪರದೆಗಳು ಹಾಗೂ ಹೊಲೊಗ್ರಾಫಿಕ್ ಪ್ರದರ್ಶನ ವ್ಯವಸ್ಥೆ ಅಳವಡಿಸಲಾಗುತ್ತದೆ. ಇವುಗಳ ಮೂಲಕ ವನ್ಯಜೀವಿಗಳು, ಜಲಪಾತಗಳು ಮತ್ತು ಅರಣ್ಯಗಳ ದೃಶ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಬಸ್‌ನ ಕಾರ್ಯಾಚರಣೆಗೆ ಮೇಲ್ಛಾವಣಿಯಲ್ಲಿ ಅಳವಡಿಸುವ ಸೌರ ಫಲಕಗಳನ್ನು ಬಳಸಲಾಗುತ್ತದೆ. ಇದರಿಂದ ಇಂಗಾಲದ ಹೊರಸೂಸುವಿಕೆ ಇಲ್ಲದಂತೆ ಕಾರ್ಯನಿರ್ವಹಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಬಸ್ ಅನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಅದರ ಎರಡೂ ಬದಿಗಳಲ್ಲಿ ಎರಡು ಪ್ರದರ್ಶನ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತದೆ. ಬಸ್‌ನ ಒಟ್ಟು ಜಾಗದ ಮುಕ್ಕಾಲು ಭಾಗವನ್ನು ಪ್ರದರ್ಶನಕ್ಕೆ ಮೀಸಲಿಡಲಾಗುತ್ತದೆ. ಉಳಿದ ಭಾಗದಲ್ಲಿ ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳಿಗಾಗಿ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿವಿಧ ವಿಷಯಗಳಿಗೆ ಅನುಗುಣವಾಗಿ ಜೀವಂತ ಗಾತ್ರದ ಮಾದರಿಗಳನ್ನು ಕೂಡ ಬಸ್‌ನೊಳಗೆ ಪ್ರದರ್ಶಿಸಲು ಯೋಜಿಸಲಾಗಿದೆ.
ವರ್ಚುವಲ್ ದೃಶ್ಯಾವಳಿಗಳು ಮತ್ತು ಪ್ರದರ್ಶನಗಳಿಗಾಗಿ ವಿವಿಧ ಮೂಲಗಳಿಂದ ಚಿತ್ರಗಳು ಹಾಗೂ ವಿಡಿಯೊಗಳನ್ನು ಸಂಗ್ರಹಿಸಲಾಗುತ್ತದೆ. ಮಕ್ಕಳ ಗಮನ ಸೆಳೆಯಲು ಗ್ರಾಫಿಕ್ಸ್ ಮತ್ತು ಅನಿಮೇಷನ್‌ಗಳನ್ನೂ ಬಳಸಲಾಗುತ್ತದೆ. ಅಲ್ಲದೆ, ಬಸ್‌ನೊಳಗೆ ವಿವಿಧ ಅರಣ್ಯಗಳ ಮಾದರಿಗಳನ್ನು ವಿಷಯಾಧಾರಿತವಾಗಿ ನಿರ್ಮಿಸಲಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಬದಲಾಯಿಸುವ ವ್ಯವಸ್ಥೆಯೂ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ, ಬೆಂಗಳೂರಿನ ಎಚ್‌ಎಂಟಿ ಸಮೀಪದ ಜರಕಬಂಡೆ ಮೀಸಲು ಅರಣ್ಯ ಪ್ರದೇಶದಲ್ಲಿ 10 ಎಕರೆ ವಿಸ್ತೀರ್ಣದ ಶಾಶ್ವತ ಪಶ್ಚಿಮ ಘಟ್ಟ ವಸ್ತುಸಂಗ್ರಹಾಲಯ ಸ್ಥಾಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿ ಹಸ್ತಾಂತರಕ್ಕಾಗಿ ಕಾಯಲಾಗುತ್ತಿದ್ದು, ಮುಂದಿನ ಆರು ತಿಂಗಳ ಬಳಿಕ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ. ಇದರ ಭಾಗವಾಗಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟಗಳ ಅನುಭವ ಕೇಂದ್ರಗಳನ್ನೂ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.