ಗೃಹಲಕ್ಷ್ಮಿ ನಕಲಿ ಖಾತೆಗಳಿಗೆ ಕಡಿವಾಣ: ಮನೆ-ಮನೆ ಸಮೀಕ್ಷೆಗೆ ಸರ್ಕಾರ ಮುಂದು, ಸಮೀಕ್ಷೆ ತಪ್ಪಿಸಿದ್ರೆ ನಿಲ್ಲಲಿದೆ 2,000 ರೂ. ಹಣ..!

ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ನೀಡಲಾಗುವ ಮಾಸಿಕ ಅಕ್ಕಿ ಪ್ರಮಾಣವನ್ನು 5 ಕೆ.ಜಿ. ಕಡಿತಗೊಳಿಸಿ, ಅದರ ಬದಲಿಗೆ ಅಡುಗೆ ಎಣ್ಣೆ, ಸಕ್ಕರೆ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡ ‘ಇಂದಿರಾ ಕಿಟ್’ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.
File photo
ಸಂಗ್ರಹ ಚಿತ್ರ
Updated on

ಮಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಫಲಾನುಭವಿಗಳ ಮನೆ ಮನೆಗೆ ತೆರಳಿ ಮರುಪರಿಶೀಲನೆ ನಡೆಸಲು ಮುಂದಾಗಿದೆ.

ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.177 ಕೋಟಿ ಹಣ ಜಮೆಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡುವ ಉದ್ದೇಶದಿಂದ ಗೃಹಜ್ಯೋತಿ ಯೋಜನೆಯಲ್ಲೂ ಪರಿಶೀಲನಾ ಕಾರ್ಯ ಆರಂಭಿಸಲಾಗಿದೆ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಫಲಾನುಭವಿಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ನೆರವಾಗಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಆರು ಸದಸ್ಯರ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ಬಳಿಕ ಆಗಸ್ಟ್ 31ರಂದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದೆ.

ಈ ಸಮಿತಿಗಳ ರಚನೆಯಿಂದ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಸಮಿತಿಗಳು ಕೇವಲ ಪರಿಶೀಲನಾ ಪ್ರಕ್ರಿಯೆಗೆ ಅಗತ್ಯ ಸಹಕಾರ ನೀಡಲಿವೆ ಎಂದು ಸ್ಪಷ್ಟಪಡಿಸಿದರು.

File photo
ದೇಗುಲ ನಿರ್ಮಾಣಕ್ಕೆ ಗೃಹಲಕ್ಷ್ಮಿ ಹಣ: 850 ಮಹಿಳೆಯರಿಂದ 17 ಲಕ್ಷ ರೂ ದೇಣಿಗೆ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೆಚ್ಚುಗೆ..!

ಫಲಾನುಭವಿಗಳ ಬಯೋಮೆಟ್ರಿಕ್ ಪರಿಶೀಲನೆಗೆ ಚಿಂತನೆ

ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಗಾಗಿ ರಚಿಸಲಾಗುವ ಆರು ಸದಸ್ಯರ ಸಮಿತಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ಸಾಮಾನ್ಯ ವರ್ಗದ ಪ್ರತಿನಿಧಿಗಳು ಇರಲಿದ್ದಾರೆ.

ಇತ್ತೀಚೆಗೆ ಸರ್ಕಾರ ನೀಡಿದ ಮಾಹಿತಿಯಂತೆ, ಅಕ್ರಮ ಪತ್ತೆಯಾಗುವ ಮುನ್ನ ಮೃತಪಟ್ಟ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ರೂ.177 ಕೋಟಿ ಜಮೆಯಾಗಿತ್ತು. ಈ ಪೈಕಿ ಇದುವರೆಗೆ ಸುಮಾರು ರೂ.30 ಕೋಟಿ ವಸೂಲಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಫಲಾನುಭವಿ ಮೃತಪಟ್ಟ ಕೂಡಲೇ ಅವರ ಖಾತೆಗೆ ಹಣ ವರ್ಗಾವಣೆಯಾಗುವುದನ್ನು ಸ್ವಯಂಚಾಲಿತವಾಗಿ ತಡೆಯುವ ವ್ಯವಸ್ಥೆ ಈಗಾಗಲೇ ಜಾರಿಗೆ ತರಲಾಗಿದೆ.

ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ ಎಂದರು.

ಪಡಿತರ ಅಕ್ಕಿ ಪ್ರಮಾಣ ಕಡಿತಕ್ಕೆ ಚಿಂತನೆ

ಇದೇ ವೇಳೆ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ನೀಡಲಾಗುವ ಮಾಸಿಕ ಅಕ್ಕಿ ಪ್ರಮಾಣವನ್ನು 5 ಕೆ.ಜಿ. ಕಡಿತಗೊಳಿಸಿ, ಅದರ ಬದಲಿಗೆ ಅಡುಗೆ ಎಣ್ಣೆ, ಸಕ್ಕರೆ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡ ‘ಇಂದಿರಾ ಕಿಟ್’ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರೇವಣ್ಣ ತಿಳಿಸಿದರು.

ಸಬ್ಸಿಡಿ ದರದ ಅಕ್ಕಿ ಕಾಳಸಂತೆಗೆ ಹರಿದುಹೋಗುವುದನ್ನು ತಡೆಯುವ ಉದ್ದೇಶದಿಂದ ಈ ಪ್ರಸ್ತಾವನೆಯನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ಸರ್ಕಾರವು ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ತಿಂಗಳಿಗೆ ರೂ.2,000 ಹಣವನ್ನು ನೀಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com