ಅವಧಿ ಮೀರಿದ ಮೊಸರು, ಡೈನಿಂಗ್ ಟೇಬಲ್ ಮೇಲೆ ತಿಗಣೆ ಪುಡಿ: ಹೊಟೇಲ್, ಕ್ಲಬ್ ಗಳ ನಂತರ ಬೆಂಗಳೂರಿನಲ್ಲಿ ಪಿಜಿಗಳ ಕರ್ಮಕಾಂಡ; Video

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ತಂಡಗಳು ನಗರದ 64 ಪಿಜಿಗಳಲ್ಲಿ ತಪಾಸಣೆ ನಡೆಸಿದ್ದು, ಈ ಪೈಕಿ 23 ಪಿಜಿಗಳು ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
The inspection campaign covered PGs across Bengaluru city
ಬೆಂಗಳೂರು ನಗರದಾದ್ಯಂತ ಪಿಜಿಗಳ ಮೇಲೆ ನಿಗಾ
Updated on

ಬೆಂಗಳೂರು: ಹೊಟೇಲ್, ಕ್ಲಬ್ ಗಳ ಮೇಲೆ ತಪಾಸಣೆ ನಂತರ ಆಹಾರ ಇಲಾಖೆ ಈಗ ಬೆಂಗಳೂರಿನ ಪೇಯಿಂಗ್ ಗೆಸ್ಟ್ ಗಳ ಮೇಲೆ ಕಣ್ಣಿಟ್ಟಿದೆ. ತಪಾಸಣೆ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹಗಳು ಆಹಾರ ಸುರಕ್ಷತಾ ಅಧಿಕಾರಿಗಳ ಪರಿಶೀಲನೆಗೆ ಒಳಪಟ್ಟಿವೆ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ತಂಡಗಳು ನಗರದ 64 ಪಿಜಿಗಳಲ್ಲಿ ತಪಾಸಣೆ ನಡೆಸಿದ್ದು, ಈ ಪೈಕಿ 23 ಪಿಜಿಗಳು ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಜಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಹಾಗೂ ಸ್ವಚ್ಛತೆಯ ಕೊರತೆಯಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ಈ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಚ್ಛತೆಯ ಕೊರತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 23 ಪಿಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2011ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು ಹಾಗೂ 2011ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ಉದ್ಯಮಗಳ ಪರವಾನಗಿ ಮತ್ತು ನೋಂದಣಿ) ನಿಯಮಾವಳಿಗಳ ಅನ್ವಯ ತಪಾಸಣೆ ನಡೆಸಲಾಯಿತು. ಆಹಾರ ಪದಾರ್ಥಗಳ ತಯಾರಿಕೆ ಹಾಗೂ ಸಂಗ್ರಹಣೆಯ ವಿಧಾನ ಸೇರಿದಂತೆ ಆಹಾರ ಸುರಕ್ಷತೆಯ ವಿವಿಧ ಅಂಶಗಳನ್ನು ಪರಿಶೀಲಿಸಲಾಯಿತು ಎಂದು ಇಲಾಖೆ ತಿಳಿಸಿದೆ.

ಅವಧಿ ಮೀರಿದ ಮೊಸರು, ಬಿಸಿಬೇಳೆ ಬಾತ್ ಪುಡಿ ಪತ್ತೆ

ಅವಧಿ ಮೀರಿದ ಮೊಸರು, ಬಿಸಿಬೇಳೆ ಬಾತ್ ಪುಡಿ, ಅಕ್ಕಿ ಹಿಟ್ಟು, ಕೃತಕ ಆಹಾರ ಬಣ್ಣ, ಕರಿಮೆಣಸು ಹಾಗೂ ತಪ್ಪು ಲೇಬಲ್ ಹೊಂದಿದ್ದ ಮಿಶ್ರಣ ಪದಾರ್ಥಗಳನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಕಾನೂನು ಪ್ರಾವಧಾನಗಳ ಅನ್ವಯ ಇಂತಹ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಶ್ರೀನಿವಾಸ್ ಕೆ. ತಿಳಿಸಿದ್ದಾರೆ.

ಆಹಾರದ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆಯನ್ನು ಪರಿಶೀಲಿಸುವ ಉದ್ದೇಶದಿಂದ 12 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಡ್‌ಬಗ್‌ ನಿಯಂತ್ರಣ ಪುಡಿ ಪತ್ತೆ

ಬೊಮ್ಮಸಂದ್ರದ ನಂದನಾ ಎಲೈಟ್ ಪಿಜಿಯಲ್ಲಿ ಆಹಾರ ಪದಾರ್ಥಗಳಿದ್ದ ಡೈನಿಂಗ್ ಟೇಬಲ್ ಮೇಲೆಯೇ ತಿಗಣೆ ನಿಯಂತ್ರಣಕ್ಕೆ ಬಳಸುವ ಪುಡಿಯನ್ನು ಇರಿಸಿರುವುದು ತಪಾಸಣೆ ವೇಳೆ ಪತ್ತೆಯಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕುಡಿಯುವ ನೀರಿನ ಸೌಲಭ್ಯವಿದ್ದ ಸ್ಥಳದಲ್ಲಿ ಬಳಕೆಯಾಗದ ಹಾಗೂ ಆಹಾರಕ್ಕೆ ಸಂಬಂಧಿಸದ ವಸ್ತುಗಳನ್ನು ಸಂಗ್ರಹಿಸಿರುವುದು ಕೂಡ ಕಂಡುಬಂದಿದೆ. ಒಟ್ಟಾರೆ ಅಸ್ವಚ್ಛ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಡೈನಿಂಗ್ ಪ್ರದೇಶವನ್ನು ಸೀಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ಪಿಜಿ ಮಾಲೀಕರು ಹಾಗೂ ಆಹಾರ ನಿರ್ವಹಣೆಯಲ್ಲಿ ತೊಡಗಿರುವವರಿಗೆ ಆಹಾರ ಸುರಕ್ಷತೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ.

ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬೇಕು, ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಬೇಕು, ಅಡುಗೆಮನೆ ಮತ್ತು ಆಹಾರ ತಯಾರಿಸುವ ಪ್ರದೇಶಗಳಲ್ಲಿ ಸೂಕ್ತ ಸ್ವಚ್ಛತೆ ಕಾಪಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಬಾರದು ಅಥವಾ ವಿತರಿಸಬಾರದು ಎಂದು ಸೂಚಿಸಲಾಗಿದೆ.

ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳು ಮತ್ತು ನಿಯಮಾವಳಿಗಳ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ವಿಧಾನಸೌಧದಲ್ಲೂ ಆಹಾರ ಸುರಕ್ಷತಾ ತಪಾಸಣೆ

ಇದೇ ವೇಳೆ, ನಿನ್ನೆ ಬೆಳಗ್ಗೆ 11 ಗಂಟೆಗೆ ನಡೆದ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ವಿಧಾನಸೌಧದ ಕ್ಯಾಬಿನೆಟ್ ಹಾಲ್‌ನ ಪ್ಯಾಂಟ್ರಿಯನ್ನೂ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದರು.

ಸ್ವಚ್ಛತೆ, ಆಹಾರ ಸಂಗ್ರಹಣೆಯ ಸುರಕ್ಷತೆ, ಆಹಾರದ ಗುಣಮಟ್ಟ ಹಾಗೂ ದಾಸ್ತಾನು ನಿರ್ವಹಣೆಯನ್ನು ತಪಾಸಣೆಗೆ ಒಳಪಡಿಸಲಾಯಿತು.

ನೆಲ, ಕಪಾಟುಗಳು, ಮೂಲೆಗಳು ಹಾಗೂ ಉಪಕರಣಗಳು ಧೂಳಿನಿಂದ ಮುಕ್ತವಾಗಿ ಸ್ವಚ್ಛವಾಗಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಸಿಂಕ್‌ಗಳು ಮತ್ತು ಒಳಚರಂಡಿ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಹಾಗೂ ನೀರು ಸೋರಿಕೆಯಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಲಾಯಿತು.

ಎಲ್ಲಾ ಆಹಾರ ಪದಾರ್ಥಗಳ ಮೇಲೆ ಉತ್ಪಾದನಾ ದಿನಾಂಕ ಮತ್ತು ಅವಧಿ ಮುಕ್ತಾಯ ದಿನಾಂಕವನ್ನು ಸ್ಪಷ್ಟವಾಗಿ ನಮೂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು. ಕೀಟಗಳು, ಇಲಿಗಳು ಅಥವಾ ಅವುಗಳ ಹಿಕ್ಕೆಗಳ ಇರುವಿಕೆಯ ಲಕ್ಷಣಗಳಿಗಾಗಿ ಕೂಡ ಪರಿಶೀಲನೆ ನಡೆಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com