

ಬಾಗಲಕೋಟೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಬಳ್ಳಾರಿ, ವಿಜಯನಗರ ಹಾಗೂ ಬಾಗಲಕೋಟೆ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ಬಳಿಕ ಬಾಗಲಕೋಟೆ ಜಿಲ್ಲೆಗೆ ಖುದ್ದಾಗಿ ಭೇಟಿ ನೀಡಿದ ಅವರು ಶಿರೂರು ಗ್ರಾಮದಲ್ಲಿ ಬೆಳೆಗಳನ್ನು ಪರಿಶೀಲಿಸಿ, ರೈತರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಈ ಮೂಲಕ ಬೆಳೆ ಹಾನಿಯ ಪ್ರಮಾಣವನ್ನು ಅಂದಾಜಿಸಿದರು.
ಜಿಲ್ಲಾ ಬರ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕವು ದೇಶದಲ್ಲೇ ಎರಡನೇ ಅತಿ ದೊಡ್ಡ ಒಣಭೂಮಿ ಪ್ರದೇಶವನ್ನು ಹೊಂದಿದ್ದು, ಬರವು ನೈಸರ್ಗಿಕ ಸವಾಲಾಗಿದೆ. ಇದನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ ಎಂದು ಹೇಳಿದರು.
ಕೇಂದ್ರದ ಬರ ಪರಿಶೀಲನಾ ತಂಡಕ್ಕೆ ಅಧಿಕಾರಿಗಳು ಯಾವುದೇ ತಪ್ಪು ಮಾಹಿತಿ ನೀಡಬಾರದು ಎಂದು ಸಿಎಂ ಎಚ್ಚರಿಕೆ ನೀಡಿದರು. “ಸತ್ಯವನ್ನು ತಿಳಿಸಿ. ಬರ ಪರಿಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿ” ಎಂದು ಸೂಚಿಸಿದರು.
ಬೆಳೆ ವಿಮೆ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಬೇಕು. ರೈತರನ್ನು ದಾರಿ ತಪ್ಪಿಸುವ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬರದಿಂದ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಕಡಿಮೆ ಮಾಡಲು ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕೇಂದ್ರದ ಬರ ಪರಿಶೀಲನಾ ತಂಡಕ್ಕೆ ವಾಸ್ತವ ಪರಿಸ್ಥಿತಿಯ ನಿಖರ ಮಾಹಿತಿಯನ್ನು ಒದಗಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ ಶೇ.40ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಿದ ಸಿಎಂ, ತಾವು ಭೇಟಿ ನೀಡಿದ ನಾಲ್ಕು ತಾಲೂಕುಗಳಲ್ಲಿ ಬೆಳೆಗಳು ಸರಿಯಾಗಿ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದರು. “ಹೊಲಗಳು ಹಸಿರಾಗಿ ಕಾಣಿಸಿಕೊಳ್ಳಬಹುದು. ಆದರೆ, ಅದರಿಂದ ರೈತರಿಗೆ ಫಸಲು ಬಂದಿದೆ ಎಂದರ್ಥವಲ್ಲ” ಎಂದು ತಿತಳಿಸಿದರು.
ಬೆಳೆ ವಿಮೆಗೆ ಸಂಬಂಧಿಸಿದಂತೆ ಅಕ್ರಮಗಳ ಕುರಿತು ದೂರುಗಳು ಬಂದಿವೆ. ಈ ಬಗ್ಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಾಗಲಕೋಟೆಯಲ್ಲಿ ಫಸಲ್ ಬಿಮಾ ಯೋಜನೆಯಲ್ಲಿ ಸುಮಾರು 30 ಕೋಟಿ ರೂ. ಮೊತ್ತದ ಹಗರಣ ನಡೆದಿದೆ ಎಂಬ ವರದಿಗಳಿವೆ. ಈ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.