

ಶಿವಮೊಗ್ಗ: ನ್ಯಾಯಾಲಯ ಮೂರು ಬಾರಿ ಜಾಮೀನು ರಹಿತ ಬಂಧನ ವಾರಂಟ್ (NBW) ಹೊರಡಿಸಿದ್ದರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿದ್ದ ರೌಡಿ ಶೀಟರ್‌ನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತನನ್ನು ಭದ್ರಾವತಿ ನಿವಾಸಿ ದಿಲೀಪ್ ಅಲಿಯಾಸ್ ಕರಿಯ (19ವ) ಎಂದು ಗುರುತಿಸಲಾಗಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಬಹುಕಾಲದಿಂದ ತಲೆಮರೆಸಿಕೊಂಡಿದ್ದ ಆತ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ.
ಆರೋಪಿಯ ವಿರುದ್ಧ ನ್ಯಾಯಾಲಯ ಮೂರು ಬಾರಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದರೂ ಆತ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೆ, ಪೊಲೀಸರಿಂದಲೂ ನಿರಂತರವಾಗಿ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ.
ಖಚಿತ ಮಾಹಿತಿ ಆಧರಿಸಿ ಭದ್ರಾವತಿ ನ್ಯೂಟೌನ್ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿದರು. ಈ ವೇಳೆ ಆರೋಪಿ ಕೆರೆಯೊಂದರಲ್ಲಿ ಅಡಗಿರುವುದು ಪೊಲೀಸರಿಗೆ ತಿಳಿದುಬಂದಿದೆ.
ತಕ್ಷಣ ಪಿಎಸ್‌ಐ ರಮೇಶ್ ಹಾಗೂ ಪೊಲೀಸ್ ಸಿಬ್ಬಂದಿ ಪ್ರಸನ್ನ ಅವರು ಕೆರೆಗೆ ಧುಮುಕಿ, ನೀರಿನಲ್ಲಿದ್ದ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.