'ಅಹಿಂದ ಯಾರ ಆಸ್ತಿಯೂ ಅಲ್ಲ'.. ಕರೆಯದೇ ಹೇಗೆ ಹೋಗಲಿ?: ಗುರುವಿನ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಗರಂ!

ಹಿಂದುಳಿದ ವರ್ಗಗಳ ಸಮಾವೇಶ ಗಂಭೀರವಾಗಿ ತಗೋಬೇಕಿಲ್ಲ. ಅಹಿಂದ ಯಾರ ಆಸ್ತಿಯೂ ಅಲ್ಲ. ಯಾರು ಬೇಕಾದರೂ ಅಹಿಂದ ಸಮಾವೇಶವನ್ನು ಮಾಡಬಹುದು. ನನ್ನನ್ನು ಯಾಕೆ ಕರೆದಿಲ್ಲ ಅಂತಾ ಆಯೋಜಕರನ್ನೇ ಕೇಳಿ’ ಎಂದಿದ್ದಾರೆ.
Minister Satish Jarkiholi
ಸತೀಶ್ ಜಾರಕಿಹೊಳಿ
Updated on

ಬೆಂಗಳೂರು: ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಗೈರು ವಿಚಾರವಾಗಿ ಗರಂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 'ಅಹಿಂದ ಯಾರ ಆಸ್ತಿಯೂ ಅಲ್ಲ' ಎಂದು ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಗೈರು ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಸಮಾವೇಶ ಗಂಭೀರವಾಗಿ ತಗೋಬೇಕಿಲ್ಲ. ಅಹಿಂದ ಯಾರ ಆಸ್ತಿಯೂ ಅಲ್ಲ. ಯಾರು ಬೇಕಾದರೂ ಅಹಿಂದ ಸಮಾವೇಶವನ್ನು ಮಾಡಬಹುದು. ನನ್ನನ್ನು ಯಾಕೆ ಕರೆದಿಲ್ಲ ಅಂತಾ ಆಯೋಜಕರನ್ನೇ ಕೇಳಿ’ ಎಂದಿದ್ದಾರೆ.

‘ಹಿಂದುಳಿದ ವರ್ಗಗಳ ಸಮಾವೇಶಕ್ಕೆ ನನ್ನನ್ನು ಯಾರೂ ಕರೆದಿಲ್ಲ. ಆಯೋಜಕರು ನನ್ನನ್ನು ಕರೆದಿದ್ರೆ‌ ಸಮಾವೇಶಕ್ಕೆ ನಾನು ಹೋಗುತ್ತಿದ್ದೆ, ಕರೆಯದೇ ಹೇಗೆ ಹೋಗಲಿ. ಆಯೋಜಕರು ಕರೆದಿದ್ದರೆ ಹೋಗುತ್ತಿದ್ದೆ. ಹಾಗೆಂದು, ಈ ವಿಷಯ ವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಅಹಿಂದ ಎನ್ನುವುದು ಯಾರದೇ ಒಬ್ಬರ ಆಸ್ತಿ ಅಲ್ಲ. ಯಾರು ಬೇಕಾದರೂ ಮಾಡಬಹುದು’ ಎಂದರು.

‘ಬರಗಾಲ, ರೈತರ ಸಮಸ್ಯೆ, ಕಸ್ತೂರಿ ರಂಗನ್‌ ವರದಿ ಕುರಿತು ಚರ್ಚಿಸಲು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲಾಗಿದೆ. ಸರ್ಕಾರಕ್ಕೆ 100 ದಿನ ತುಂಬಿದ ಪ್ರಯುಕ್ತ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಬಹುದು. ಈಗಾಗಲೇ ಘೋಷಣೆ ಮಾಡಿರುವ ಕಾರ್ಯಕ್ರಮಗಳ ಪರಿಶೀಲನೆ ಕೂಡ ಮಾಡಬಹುದು. ಆ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು’ ಎಂದೂ ಹೇಳಿದರು.

Minister Satish Jarkiholi
'ನಾನು ಈಗ ಸರ್ಕಾರದ ಮುಖ್ಯಸ್ಥನಲ್ಲ, ಡಿ.ಕೆ ಶಿವಕುಮಾರ್ ನನ್ನ ಮಾತು ಕೇಳುತ್ತಾರೆ ಎಂಬ ವಿಶ್ವಾಸವಿದೆ': ಸಿದ್ದರಾಮಯ್ಯ

ರಾಜಕೀಯ ಗುರುವಿನ ವಿರುದ್ಧವೇ ಜಾರಕಿಹೊಳಿ ಗರಂ?

ಅರಮನೆ ಮೈದಾನದಲ್ಲಿ ನಿನ್ನೆ ಅಹಿಂದ ಕಹಳೆ ಮೊಳಗಿತ್ತು. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಅಹಿಂದ ಚಳುವಳಿಗೆ 25 ವರ್ಷ ತುಂಬಿದ ಹಿನ್ನಲೆ ಇಂದು ಅರಮನೆ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿತ್ತು.

ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಲಾಯಿತು. ಆದರೆ ಅಹಿಂದ ಚಳುವಳಿಯಲ್ಲಿ ಸಿದ್ದರಾಮಯ್ಯಗೆ ಬೆನ್ನೆಲುಬಾಗಿ ನಿಂತಿದ್ದ ಸತೀಶ್ ಜಾರಕಿಹೊಳಿಗೆ ಮಾತ್ರ ಇಂದಿನ ಸಮಾವೇಶಕ್ಕೆ ಆಹ್ವಾನ ನೀಡಿರಲಿಲ್ಲ.

ಸಿದ್ದು ಜೊತೆ ಮುನಿಸು

ಸಿದ್ದರಾಮಯ್ಯ-ಸತೀಶ್ ಜಾರಕಿಹೊಳಿ (Satish Jarkiholi) ಒಂದು ಕಾಲದಲ್ಲಿ ಗುರು-ಶಿಷ್ಯರು. ಅಹಿಂದ ಆರಂಭಿಸಿದ್ದಾಗ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದು ಇದೇ ಸತೀಶ್ ಜಾರಕಿಹೊಳಿ. ಅಹಿಂದ ಬಾವುಟ ಹಿಡಿಯೋಕೆ ಸಿದ್ದು ಕೈಗಳಿಗೆ ಶಕ್ತಿ ತುಂಬಿದ್ದು, ತೆನೆ ಇಳಿಸಿ ಕೈ ಹಿಡಿಯಲು ಹೊರಟಾಗ ಸಾಥ್ ಕೊಟ್ಟಿದ್ದು ಸತೀಶ್ ಜಾರಕಿಹೊಳಿ.

ಆನಂತರ ಸಿಎಂ ಆಗುವವರೆಗೂ ಪ್ರತಿ ಹಂತದಲ್ಲೂ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯಗೆ ಸಾಥ್ ನೀಡಿದ್ದರು. ಆದ್ರೀಗ ಇಬ್ಬರ ನಡುವೆ ಕಂದಕ ಮೂಡಿದೆ. ಇಬ್ಬರ ನಡುವಿನ ಸ್ನೇಹ ಸಂಬಂಧ ಹಳಸಿ ಹೋಗಿದೆ. ಅಧಿಕಾರ ಹಸ್ತಾಂತರ ಬಳಿಕ ಇಬ್ಬರ ದಿಕ್ಕು ಬೇರೆ ಬೇರೆಯಾಗಿದೆ ಎಂದು ಹೇಳಲಾಗಿದೆ.

ಬಿರುಕು ಬಗ್ಗೆ ಇತ್ತೀಚೆಗೆ ಸತೀಶ್ ಜಾರಕಿಹೊಳಿ ಸಹ ಒಪ್ಪಿಕೊಂಡಿದ್ದರು. ಸಿದ್ದರಾಮಯ್ಯ ಅಹಿಂದ ಚಳುವಳಿಗೆ ಬೆನ್ನೆಲುಬಾಗಿ ನಿಂತಿದ್ದ ಸತೀಶ್ ಜಾರಕಿಹೊಳಿ ಜೊತೆಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪಗೂ ಅಹಿಂದ ಸಮಾವೇಶಕ್ಕೆ ಆಹ್ವಾನ ಇರಲಿಲ್ಲ. ಆಹ್ವಾನ ಕೊಡದೆ ಅಹಿಂದ ರಜತ ಮಹೋತ್ಸವ ಆಚರಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com