ದೇವಸ್ಥಾನದ ಹುಂಡಿ ಹಣಕ್ಕೆ ಕನ್ನ ಹಾಕುವವರಿಗೆ ಶಾಕ್: ಡಿಜಿಟಲ್ ವ್ಯವಸ್ಥೆ ಮೂಲಕ ಕಟ್ಟುನಿಟ್ಟಿನ ನಿಗಾ; ಹೈಕೋರ್ಟ್‌ ಮಹತ್ವದ ಆದೇಶ..!

ಪ್ರತಿಯೊಂದು ರಸೀದಿಯ ಮೇಲೂ ಮುದ್ರಿತ ಕ್ಯೂಆರ್ ಕೋಡ್ ಇರಬೇಕು. ಭಕ್ತರು ಅದನ್ನು ಸ್ಕ್ಯಾನ್ ಮಾಡುವ ಮೂಲಕ ರಸೀದಿ ನೈಜವಾಗಿದೆಯೇ ಮತ್ತು ವಿಶಿಷ್ಟವಾಗಿದೆಯೇ ಎಂಬುದನ್ನು ಕೇಂದ್ರ ಸರ್ವರ್ ಮೂಲಕ ಪರಿಶೀಲಿಸಲು ಸಾಧ್ಯವಾಗಬೇಕು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಎಲ್ಲಾ ದೇವಸ್ಥಾನಗಳ ಹಣ, ಕಾಣಿಕೆ ಹಾಗೂ ಆಸ್ತಿಪಾಸ್ತಿಗಳನ್ನು ಸಮರ್ಪಕವಾಗಿ ಲೆಕ್ಕಕ್ಕೆ ತೆಗೆದುಕೊಂಡು ಸಂರಕ್ಷಿಸುವುದು, ಕಳ್ಳತನ, ದುರ್ಬಳಕೆ ಮತ್ತು ಹಣದ ದುರುಪಯೋಗವನ್ನು ಆರಂಭದಲ್ಲೇ ತಡೆಯುವ ಉದ್ದೇಶದಿಂದ ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿಗಳ ಇಲಾಖೆಯ ಆಯುಕ್ತರಿಗೆ ಈ ನಿರ್ದೇಶನಗಳನ್ನು ನೀಡಲಾಗಿದ್ದು, ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಅವುಗಳನ್ನು ಜಾರಿಗೆ ತರಲು ಸೂಚಿಸಲಾಗಿದೆ.

ಪ್ರಧಾನ ಕಾರ್ಯದರ್ಶಿ, ಇ-ಆಡಳಿತ ಇಲಾಖೆಯ ಸಹಕಾರದೊಂದಿಗೆ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಂತೆ ಕೋರ್ಟ್ ಸೂಚಿಸಿದೆ.

ಮಾರ್ಗಸೂಚಿಗಳ ಪ್ರಕಾರ, ಸಾಧ್ಯವಾದಷ್ಟು ಎಲ್ಲ ರೀತಿಯ ಪಾವತಿಗಳಿಗೆ ವಿದ್ಯುನ್ಮಾನ ಪಾವತಿ ವ್ಯವಸ್ಥೆ ಕಲ್ಪಿಸಬೇಕು. ಹುಂಡಿ ಕಾಣಿಕೆ, ಕಾಣಿಕೆ, ಅರ್ಚನೆ, ಸೇವಾ ಟಿಕೆಟ್, ವಸತಿ ಶುಲ್ಕ, ವಾಹನ ನಿಲುಗಡೆ ಶುಲ್ಕ, ದೇಣಿಗೆ, ಪ್ರಸಾದ ಮಾರಾಟ, ಪ್ರಕಟಣೆಗಳ ಮಾರಾಟ ಸೇರಿದಂತೆ ದೇವಸ್ಥಾನಕ್ಕೆ ಪಾವತಿಸುವ ಪ್ರತಿಯೊಂದು ಮೊತ್ತಕ್ಕೂ ಡಿಜಿಟಲ್ ಪಾವತಿ ವ್ಯವಸ್ಥೆ ಇರಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಡಿಜಿಟಲ್ ಕಿಯೋಸ್ಕ್‌ಗಳು ಹಾಗೂ ಸ್ವಯಂ ಸೇವಾ ಪಾವತಿ ಯಂತ್ರಗಳನ್ನು ಅಳವಡಿಸಬಹುದಾಗಿದೆ.

ಪ್ರತಿಯೊಂದು ರಸೀದಿಯ ಮೇಲೂ ಮುದ್ರಿತ ಕ್ಯೂಆರ್ ಕೋಡ್ ಇರಬೇಕು. ಭಕ್ತರು ಅದನ್ನು ಸ್ಕ್ಯಾನ್ ಮಾಡುವ ಮೂಲಕ ರಸೀದಿ ನೈಜವಾಗಿದೆಯೇ ಮತ್ತು ವಿಶಿಷ್ಟವಾಗಿದೆಯೇ ಎಂಬುದನ್ನು ಕೇಂದ್ರ ಸರ್ವರ್ ಮೂಲಕ ಪರಿಶೀಲಿಸಲು ಸಾಧ್ಯವಾಗಬೇಕು. ಇದರಿಂದ ನಕಲಿ ಅಥವಾ ನಕಲು ರಸೀದಿಗಳನ್ನು ಕೌಂಟರ್‌ನಲ್ಲೇ ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಹೇಳಿದೆ.

ಇದೇ ವೇಳೆ 2020ರಲ್ಲಿ ಉಡುಪಿ ಜಿಲ್ಲೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ರಾಜೇಶ್ ನಾಯಕ್ ಅವರನ್ನು ವಜಾಗೊಳಿಸಿರುವ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಮಾಹಿತಿ ತಂತ್ರಜ್ಞಾನ ನಿರ್ವಾಹಕರ ಬಳಕೆದಾರ ಹೆಸರು ಮತ್ತು ಗುಪ್ತಪದವನ್ನು ದುರುಪಯೋಗಪಡಿಸಿಕೊಂಡು ಭಕ್ತರಿಗೆ ನಕಲಿ ರಸೀದಿಗಳನ್ನು ನೀಡಿದ್ದ ಆರೋಪ ಅವರ ಮೇಲಿತ್ತು. ಇದು ನಂಬಿಕೆ ದ್ರೋಹ ಹಾಗೂ ಹಣದ ದುರುಪಯೋಗಕ್ಕೆ ಸಮಾನವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

File photo
SC/ST ಪ್ರಕರಣ; ಹಿಂದುತ್ವವಾದಿ ಸ್ವತಂತ್ರ ಭಾರದ್ವಾಜ್‌ಗೆ ಹೈಕೋರ್ಟ್ ಶಾಕ್: 14 ದಿನ ನ್ಯಾಯಾಂಗ ಬಂಧನ!

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ತೀರ್ಪು ನೀಡಿದ್ದು, “ಸಾರ್ವಜನಿಕ ಹಿತದೃಷ್ಟಿಯಿಂದ ಸಾರ್ವಜನಿಕ ಧಾರ್ಮಿಕ ದತ್ತಿಗಳ ಸಮರ್ಪಕ ಆಡಳಿತವನ್ನು ಖಚಿತಪಡಿಸಲು ಕೆಲವು ಸಾಮಾನ್ಯ ನಿರ್ದೇಶನಗಳನ್ನು ನೀಡುವುದು ಸೂಕ್ತ” ಎಂದು ಹೇಳಿದ್ದಾರೆ.

ಪ್ರಮುಖ ಮಾರ್ಗಸೂಚಿಗಳು...

  • ಪ್ರತಿಯೊಂದು ರಸೀದಿಯನ್ನೂ ವ್ಯವಸ್ಥೆಯ ಮೂಲಕವೇ ಸೃಷ್ಟಿಸಬೇಕು. ವಿಶಿಷ್ಟ, ಕ್ರಮಬದ್ಧ ಹಾಗೂ ಮರುಕಳಿಸದ ಯಂತ್ರ-ರಚಿತ ಕ್ರಮಸಂಖ್ಯೆ ರಸೀದಿಯಲ್ಲಿ ಇರಬೇಕು.

  • ದೇವಸ್ಥಾನಕ್ಕೆ ಸ್ವೀಕರಿಸುವ ಪ್ರತಿಯೊಂದು ಮೊತ್ತವನ್ನೂ ಪಾವತಿ ವಿಧಾನ ಯಾವುದೇ ಆಗಿದ್ದರೂ ಸಮಗ್ರ ಡಿಜಿಟಲ್ ಸಂಗ್ರಹ ಮತ್ತು ಲೆಕ್ಕಪತ್ರ ವ್ಯವಸ್ಥೆಯಲ್ಲಿ ತಕ್ಷಣ ದಾಖಲಿಸಬೇಕು.

  • ಹುಂಡಿ, ಕಾಣಿಕೆ ಪೆಟ್ಟಿಗೆ ಹಾಗೂ ಇತರ ಕಾಣಿಕೆ ಸ್ವೀಕಾರ ಪೆಟ್ಟಿಗೆಗಳಲ್ಲಿ ಸಂಗ್ರಹವಾಗುವ ಹಣವನ್ನು ಏಕರೂಪದ, ಪಾರದರ್ಶಕ ಹಾಗೂ ಸುರಕ್ಷಿತ ಎಣಿಕೆ ವ್ಯವಸ್ಥೆಯಡಿ ನಿರ್ವಹಿಸಬೇಕು.

  • ಪ್ರತಿಯೊಂದು ವಹಿವಾಟು ಸೃಷ್ಟಿಯಾದ ಕ್ಷಣದಲ್ಲೇ ಕೇಂದ್ರ ಸರ್ವರ್‌ಗೆ ರವಾನೆಯಾಗಬೇಕು.

  • ಲಡ್ಡು, ತೆಂಗಿನಕಾಯಿ, ಕುಂಕುಮ, ಅರಿಶಿನ, ಹೂವು, ಧಾರ್ಮಿಕ ಪುಸ್ತಕಗಳು, ಛಾಯಾಚಿತ್ರಗಳು, ವಿಗ್ರಹಗಳು, ಸ್ಮರಣಿಕೆಗಳು, ಪೂಜಾ ಸಾಮಗ್ರಿಗಳು, ಪ್ರಸಾದದ ಪೊಟ್ಟಣಗಳು ಸೇರಿದಂತೆ ಮಾರಾಟ ಮಾಡುವ ಎಲ್ಲ ವಸ್ತುಗಳನ್ನು ಸಮಗ್ರ ಡಿಜಿಟಲ್ ದಾಸ್ತಾನು ನಿರ್ವಹಣಾ ವ್ಯವಸ್ಥೆಯಡಿ ತರಬೇಕು.

  • ಪ್ರತಿಯೊಬ್ಬ ಸಿಬ್ಬಂದಿಗೂ ಪ್ರತ್ಯೇಕ ಬಳಕೆದಾರ ಹೆಸರು ಮತ್ತು ಪ್ರವೇಶ ವಿವರ ಇರಬೇಕು. ಸಾಮಾನ್ಯ ಅಥವಾ ಹಂಚಿಕೆಯ ಬಳಕೆದಾರ ಗುರುತನ್ನು ಬಳಸಲು ಅವಕಾಶ ಇರಬಾರದು.

  • ಬಹುಹಂತದ ದೃಢೀಕರಣ ಅಥವಾ ಜೈವಿಕ ದೃಢೀಕರಣದ ಮೂಲಕ ವ್ಯವಸ್ಥೆಯ ಪ್ರವೇಶವನ್ನು ಸುರಕ್ಷಿತಗೊಳಿಸಬೇಕು. ಹುದ್ದೆ ಆಧಾರಿತ ಅನುಮತಿಗಳನ್ನು ಮಾತ್ರ ನೀಡಬೇಕು.

  • ಹಣ ಸಂಗ್ರಹ ಕೌಂಟರ್, ಹುಂಡಿ ವಿಭಾಗ, ದಾಸ್ತಾನು ಕೊಠಡಿ ಅಥವಾ ಭದ್ರತಾ ಕೊಠಡಿಯಂತಹ ಸೂಕ್ಷ್ಮ ಹುದ್ದೆಗಳಲ್ಲಿ ಯಾವುದೇ ಉದ್ಯೋಗಿಯನ್ನು ಅನಿರ್ದಿಷ್ಟ ಅವಧಿಗೆ ಮುಂದುವರಿಸಲು ಅವಕಾಶ ನೀಡಬಾರದು.

  • ದಿನಗೂಲಿ ಹಾಗೂ ಗುತ್ತಿಗೆ ನೌಕರರು ಸೇರಿದಂತೆ ಎಲ್ಲ ಸಿಬ್ಬಂದಿಯ ಹಾಜರಾತಿಯನ್ನು ಜೈವಿಕ ಗುರುತಿನ ವ್ಯವಸ್ಥೆಯ ಮೂಲಕ ದಾಖಲಿಸಬೇಕು.

  • ಕಾನೂನು ಅನುಮತಿಸುವ ಮಿತಿಯೊಳಗೆ ಪ್ರತಿಯೊಂದು ದೇವಸ್ಥಾನದ ವಾರ್ಷಿಕ ಲೆಕ್ಕಪತ್ರ ಹಾಗೂ ಆದಾಯ-ವೆಚ್ಚದ ಸಾರಾಂಶವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು.

  • ನಗದು, ಯುಪಿಐ, ಕ್ಯೂಆರ್ ಕೋಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್, ಟ್ಯಾಪ್ ಆ್ಯಂಡ್ ಪೇ, ಎನ್‌ಎಫ್‌ಸಿ ಸೇರಿದಂತೆ ಅನುಮೋದಿತ ಎಲ್ಲ ವಿದ್ಯುನ್ಮಾನ ಪಾವತಿಗಳನ್ನು ನೈಜ ಸಮಯದಲ್ಲೇ ದಾಖಲಿಸಿ ಕೇಂದ್ರ ಲೆಕ್ಕಪತ್ರ ವ್ಯವಸ್ಥೆಯಲ್ಲಿ ಪ್ರತಿಬಿಂಬಿಸಬೇಕು.

  • ನಗದು, ವಸ್ತು, ಚಿನ್ನ, ಬೆಳ್ಳಿ, ಆಭರಣ, ರತ್ನಾಭರಣ, ಅಮೂಲ್ಯ ಕಲ್ಲುಗಳು ಅಥವಾ ಇತರ ಬೆಲೆಬಾಳುವ ವಸ್ತುಗಳ ಯಾವುದೇ ಸ್ವೀಕೃತಿ ಕೌಂಟರ್ ಅನ್ನು ಒಬ್ಬ ಅಧಿಕಾರಿಯ ಅಥವಾ ನೌಕರನ ವೈಯಕ್ತಿಕ ಕಚೇರಿ, ಕೊಠಡಿ ಅಥವಾ ಏಕೈಕ ವಶದಲ್ಲಿರುವ ಸ್ಥಳದಲ್ಲಿ ಇರಿಸಬಾರದು.

  • ಎಲ್ಲ ಸಂಗ್ರಹ ಕೌಂಟರ್‌ಗಳು, ಹುಂಡಿ ಹಾಗೂ ಎಣಿಕೆ ಪ್ರದೇಶಗಳು, ಭದ್ರತಾ ಕೊಠಡಿ, ಆಭರಣ ಕೊಠಡಿ ಮತ್ತು ದಾಸ್ತಾನು ಕೊಠಡಿಗಳನ್ನು ಒಳಗೊಂಡಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com