KPSC ಹಗರಣಕ್ಕೆ ಬಿಗ್ ಟ್ವಿಸ್ಟ್: ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾಗಿ CID ಮುಂದೆ ತಪ್ಪೊಪ್ಪಿಕೊಂಡ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್..!

ತನಿಖಾಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯ ಪ್ರಕಾರ, ಆತ ಎರಡು ಮೊಬೈಲ್ ಫೋನ್‌ಗಳು ಮತ್ತು ಒಂದು ಟ್ಯಾಬ್ಲೆಟ್‌ನ್ನು ಕಾಲುವೆಯೊಂದಕ್ಕೆ ಎಸೆದಿದ್ದಾನೆ ಎನ್ನಲಾಗಿದೆ.
jnanendra kumar
ಜ್ಞಾನೇಂದ್ರ ಕುಮಾರ್online desk
Updated on

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯಲ್ಲಿ ಮಹತ್ವದ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ತಾವೇ ಖುದ್ದಾಗಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವುದಾಗಿ ಬಂಧಿತ ಆರೋಪಿ, ಕೆಪಿಎಸ್‌ಸಿ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಸಿಐಡಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ

ಜ್ಞಾನೇಂದ್ರ ಅವರು ಈ ಹಿಂದೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಅಮಾನತುಗೊಳ್ಳುವ ಮುನ್ನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಪ್ರಕರಣದ ತನಿಖೆಯ ಭಾಗವಾಗಿ, ಕನ್ನಾಳೆ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳನ್ನು ವಿಲೇವಾರಿ ಮಾಡಿದ್ದಾನೆ ಎನ್ನಲಾದ ಶ್ರೀರಂಗಪಟ್ಟಣ ಸಮೀಪದ ಸ್ಥಳಕ್ಕೆ ಸಿಐಡಿ ಅಧಿಕಾರಿಗಳು ಆತನನ್ನು ಕರೆದೊಯ್ಯುವ ಸಾಧ್ಯತೆಯಿದೆ.

ತನಿಖಾಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯ ಪ್ರಕಾರ, ಆತ ಎರಡು ಮೊಬೈಲ್ ಫೋನ್‌ಗಳು ಮತ್ತು ಒಂದು ಟ್ಯಾಬ್ಲೆಟ್‌ನ್ನು ಕಾಲುವೆಯೊಂದಕ್ಕೆ ಎಸೆದಿದ್ದಾನೆ ಎನ್ನಲಾಗಿದೆ.

jnanendra kumar
KPSC ಹಗರಣ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಿಐಡಿ ವಶಕ್ಕೆ

ಪರೀಕ್ಷೆಗೂ ಮುನ್ನ 24 ಅಭ್ಯರ್ಥಿಗಳಿಂದ 12 ಕೋಟಿ ರೂ. ಸಂಗ್ರಹ

ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಪರೀಕ್ಷೆಗೂ ಮುನ್ನವೇ 24 ಅಭ್ಯರ್ಥಿಗಳಿಂದ ರೂ.12 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿಯನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.

ಸಂಗ್ರಹಿಸಲಾದ ಹಣದ ಬಹುಪಾಲು ನಗದು ರೂಪದಲ್ಲೇ ಪಾವತಿಯಾಗಿರುವ ಸಾಧ್ಯತೆಯಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಕೆಲವು ಅಭ್ಯರ್ಥಿಗಳು ಬೀದರ್‌ನ ಸಹಕಾರಿ ಬ್ಯಾಂಕ್‌ನಲ್ಲಿರುವ ಕನ್ನಾಳೆ ಅವರ ಖಾತೆಗೆ ನೇರವಾಗಿ ಸುಮಾರು ರೂ.75 ಲಕ್ಷ ಹಣ ವರ್ಗಾವಣೆ ಮಾಡಿರುವುದು ಕೂಡ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಈಗಾಗಲೇ ಸ್ಥಗಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ದೂರುದಾರರಿಗೆ ಬೆದರಿಕೆ ಕರೆ

ಏತನ್ಮಧ್ಯೆ ಜುಲೈ 25, 2026ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪಶುವೈದ್ಯ ಡಾ. ಮಂಜುನಾಥ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದೆ.

ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ 29 ಅಭ್ಯರ್ಥಿಗಳ ಹೆಸರುಗಳನ್ನು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರಿನಲ್ಲಿ ಹೆಸರಿಸಲಾದ ಅಭ್ಯರ್ಥಿಗಳ ಆಪ್ತರು ಎನ್ನಲಾದ ಕೆಲವರು ಡಾ. ಮಂಜುನಾಥ್ ಅವರಿಗೆ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಪೈಕಿ ನಡೆದ ಒಂದು ಸಂಭಾಷಣೆಯ ಧ್ವನಿಮುದ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧ್ವನಿಮುದ್ರಿಕೆಯಲ್ಲಿ ಕರೆ ಮಾಡಿದ ವ್ಯಕ್ತಿ, “ನಾವು ಬೆಂಗಳೂರಿಗೆ ಬರುತ್ತೇವೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಮನೆಯಲ್ಲೇ ನಿಮಗೆ ಪಡಿತರ ಸಿಗದಂತೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿರುವುದು ಕೇಳಿಬರುತ್ತದೆ ಎನ್ನಲಾಗಿದೆ.

ಅಲ್ಲದೆ, ಡಾ. ಮಂಜುನಾಥ್ ಅವರು ನೀಡಿರುವ ದೂರಿಗೆ ಆಧಾರವೇನು ಎಂದು ಪ್ರಶ್ನಿಸಿರುವ ಕರೆ ಮಾಡಿದ ವ್ಯಕ್ತಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದೂರುದಾರರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು ಹಾಗೂ ತನಿಖೆಯನ್ನು ತ್ವರಿತಗೊಳಿಸಬೇಕು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಒತ್ತಾಯಿಸಿದ್ದಾರೆ.

ಸಾಹುಕಾರ್ ನಿವಾಸದಲ್ಲೂ ಶೋಧ

ಈ ನಡುವೆ ತನಿಖೆಯ ಭಾಗವಾಗಿ ಅಮಾನತುಗೊಂಡಿರುವ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲೂ ಸಿಐಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎನ್ನಲಾಗಿದೆ.

ಸೋಮವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ, ಅದೇ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ವಾಸಿಸುತ್ತಿರುವ ಆರ್‌ಟಿಒ ಇನ್ಸ್‌ಪೆಕ್ಟರ್‌ರ ನಿವಾಸವನ್ನೂ ಸಿಐಡಿ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com