

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪ್ರಜೆಯೊಬ್ಬನನ್ನು ಬಂಧಿಸಿ, ಅಂದಾಜು 5.25 ಕೋಟಿ ಮೌಲ್ಯದ 15 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಸೂರಜ್ ಸೂರ್ಯವಂಶಿ ಎಂದು ಗುರುತಿಸಲಾದ ಆರೋಪಿಯನ್ನು, ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಟರ್ಮಿನಲ್-2ರಲ್ಲಿ (T2) ಏರ್ ಇಂಟೆಲಿಜೆನ್ಸ್ ಯುನಿಟ್ (AIU) ತಂಡ ತಡೆದು ತಪಾಸಣೆ ನಡೆಸಿತು. ಮೊನ್ನೆ 10ರಂದು ರಾತ್ರಿ 11.55ಕ್ಕೆ ಬೆಂಗಳೂರಿಗೆ ಆಗಮಿಸಬೇಕಿದ್ದ ಥಾಯ್ ಏರ್‌ವೇಸ್‌ನ TG 325 ವಿಮಾನದಲ್ಲಿ ಆತ ಪ್ರಯಾಣಿಸಿದ್ದ.
ತಪಾಸಣೆ ಹಾಗೂ ನಂತರದ ಪರಿಶೀಲನೆ ವೇಳೆ, ಆರೋಪಿಯ ಲಗೇಜ್‌ನಲ್ಲಿ ಅತ್ಯುನ್ನತ ಗುಣಮಟ್ಟದ ಮಾದಕವಸ್ತುವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ.
ಪ್ರಯಾಣಿಕನ ವಿರುದ್ಧ ಮಾದಕ ದ್ರವ್ಯಗಳು ಮತ್ತು ಮನಃಪ್ರಭಾವಿ ವಸ್ತುಗಳ (NDPS) ಕಾಯ್ದೆ, 1985ರ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಆರೋಪಿಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.