

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರು ಅಕ್ರಮ ಹೊಡಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ED) ಪತ್ರಿಕಾ ಪ್ರಕಟಣೆ ಹೊರಡಿಸಿದ ವಿಚಾರಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಇಂಥಹ ಗಾಳಿ ಸುದ್ದಿಗಳನ್ನು ನಂಬಲು ಸಾಧ್ಯವಿಲ್ಲ, ಪ್ರೆಸ್ ನೋಟ್‌ನಲ್ಲಿ, ಮುಂದಿನ ತನಿಖೆ ನಡೆಯಬೇಕು ಅಂತ ಹೇಳಿದ್ದಾರೆ. ಇದು ಆರೋಪ ಅಂತ ಇದೆ. ಅಲ್ಲಿ ಸಾಕ್ಷಿ ಸಿಕ್ಕಿದೆ ಅಂತಾರೆ, ಏನು ಸಾಕ್ಷಿ ಸಿಕ್ಕಿದೆ ಅಂತ ಹೇಳಿಲ್ಲ. ಇಂತಹ ಪ್ರೆಸ್ ನೋಟ್ ನೂರು ನೋಡಿದ್ದೇವೆ. ಇದು ಹೊಸದಾ, ಮನಿ ಟ್ರಯಲ್ ತೋರಿಸಲಿ ಎಂದರು.
ಇಂತಹ 196 ಇಡಿ ದಾಳಿಗಳು ಆಗಿವೆ ಎಂದು ನಾನು ಅಂಕಿ ಅಂಶ ಕೊಟ್ಟಿದ್ದೆ. ಎರಡು ಕೇಸ್‌ನಲ್ಲಿ ಮಾತ್ರ ಶಿಕ್ಷೆ ಆಗಿದೆ. ಎಲ್ಲಾ 196 ದಾಳಿಗಳಿಗೂ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ ಅಲ್ವಾ? ಶಿಕ್ಷೆ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ರಾಜಕೀಯ ಪ್ರೇರಿತ ದಾಳಿ
ಬಿಜೆಪಿಯ ವಿಜಯೇಂದ್ರ ಬಗ್ಗೆ ಯತ್ನಾಳ್ ಅವರು ಸಾಕಷ್ಟು ಬಾರಿ ಅಕ್ರಮ, ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ, ಅವರ ಮೇಲೆ ಇಡಿ, ಐಟಿ ದಾಳಿ ಆಗಿದೆಯೇ, ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ದಾಳಿ ಆಗುತ್ತಿದೆ ಎಂದ ಮೇಲೆ ಇದು ರಾಜಕೀಯ ಪ್ರೇರಿತವಲ್ಲವೇ ಎಂದರು.
ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆ ನೀಡಲು ಲಂಚ ಪಡೆದ ಆರೋಪ ವಿಚಾರವಾಗಿ, ಗಾಳಿ ಸುದ್ದಿಗೆ ನಾನು ಉತ್ತರ ಕೋಡೋಕೆ ಆಗಲ್ಲ. ಇಡಿ ಅವ್ರು ಹೇಳಲಿ, ದಾಖಲೆ ಕೊಡಲಿ. ಇಂತಹ ಗುತ್ತಿಗೆಯಲ್ಲಿ ಲಂಚ ಪಡೆದಿದ್ದಾರೆ ಆ ಹಣವನ್ನ ಇಲ್ಲಿ ಹೊಡಿಕೆ ಮಾಡಿದ್ದಾರೆ ಅಂತ ದಾಖಲೆ ಕೊಡಲಿ. ಪಾಸ್ ಪೋರ್ಟ್ ತೆಗೆದು ನೋಡಿ ಯಾರು ಯಾರು ಎಲ್ಲಿಗೆ ಹೋಗಿದ್ದಾರೆ ಅಂತ. ನಮ್ಮ ಪಾಸ್ ಪೋರ್ಟ್ ನಾವು ಕೋಡ್ತೀವಿ, ಬಿಜೆಪಿಯವರು ಕೋಡ್ತಾರಾ? ದುಬೈ, ಮಾರಿಷಸ್‌ಗೆ ಎಷ್ಟು ಸಲ ಹೋಗಿ ಬಂದಿದ್ದಾರೆ ಅಂತ ಕೊಡಲಿ ಎಲ್ಲರೂ, ಬಿಜೆಪಿ ಶಾಸಕರು, ಮಾಜಿ ಸಚಿವರು ಎಲ್ಲಾ ಪಾಸ್ ಪೋರ್ಟ್ ಕೊಡಲಿ ಎಲ್ಲಾ ತನಿಖೆ ಆಗಲಿ, ಇಡಿಯದ್ದು ಹಳೆ ಆಪರೇಟಿಂಗ್ ಪ್ರೊಸೀಜರ್ ಹೆದರಿಸುವುದು, ಬೆದರಿಸುವುದು ಎಂದರು.
ನಮ್ಮ ರಾಜ್ಯದಲ್ಲಿ ಸಿಎಂ ಅವರ ಬಗ್ಗೆ ಎಷ್ಟೆಲ್ಲಾ ಆಪಾದನೆ ಮಾಡಿದ್ರು, ಆಮೇಲೆ ಏನಾಯ್ತು? ನ್ಯಾಯಾಲಯದಲ್ಲಿ ಏನಾಯ್ತು? ಅದಕ್ಕೆ ಬಿಜೆಪಿಯವರು ಕೇಂದ್ರ ಸರ್ಕಾರದವರು ಕ್ಷಮೆ ಕೇಳಿದ್ರಾ? ಮಾನಸಿಕವಾಗಿ ಹಿಂಸೆ ಕೊಟ್ರು ಅಲ್ವ ಸಿಎಂ, ಮತ್ತು ಅವ್ರ ಕುಟುಂಬದವರಿಗೆ, ಇಷ್ಟು ಚಾರಿತ್ರ್ಯ ಹಾಳು ಮಾಡಿದ್ರು, ಅದಕ್ಕೆ ಕ್ಷಮೆ ಕೇಳಿದ್ರಾ?
ಬಿಜೆಪಿಗೆ ಹೋದ ತಕ್ಷಣ ಸಾತ್ ಖೂನ್ ಮಾಫ್, ಯಾರು ಯಾರು ಅತೀ ಭ್ರಷ್ಟ ರಾಜಕಾರಣಿಗಳು ಇದ್ದಾರೆ ಅಂತ ಬಿಜೆಪಿ ಅವ್ರು ಹೇಳ್ತಾ ಇದ್ರು, ಅವರು ಬಿಜೆಪಿಗೆ ಹೋದ ತಕ್ಷಣವೇ ಗಂಗಾ ಜಲದಿಂದ ಪವಿತ್ರ ಆಗ್ಬಿಟ್ರು, ಇವೆಲ್ಲಾ ರಾಜಕೀಯ ಪ್ರೇರಿತ ಎಂದು ವ್ಯಂಗ್ಯವಾಡಿದರು.
ಕೆಪಿಎಸ್ ಸಿ ಹಗರಣದಲ್ಲಿ ನಾನು ದುಡ್ಡು ತಿಂದಿದ್ದೀನಿ ಅಂತಾರೆ, ಇಷ್ಟು ದಿನಗಳಾದವು, ಒಂದಾದರೂ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆಯೇ, ಇದೆಲ್ಲಾ ಬಿಜೆಪಿಯವರ ಹಿಟ್ ಅಂಡ್ ರನ್ ಕೇಸು, ಅವರ ಹಗರಣಗಳನ್ನು, ವೈಫಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದೇವೆ, ದೇಶದ ಹಗರಣಗಳು, ನಿರುದ್ಯೋಗ, ಶಿಕ್ಷಣ ಬಗ್ಗೆ ನಾವು ಕಾಂಗ್ರೆಸ್ ನವರು ಮಾತನಾಡುತ್ತಿದ್ದೇವೆ, ಆರ್ ಎಸ್ ಎಸ್ ಅಸ್ತಿತ್ವ ಬಗ್ಗೆ ಪ್ರಶ್ನೆ ಮಾಡುತ್ತಿದ್ದೇವೆ ಎಂದು ಇಡಿ, ಐಟಿ ದಾಳಿ ಮಾಡಿಸುತ್ತಿದ್ದಾರೆ, ಪ್ರಶ್ನೆ ಕೇಳುವವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.