

ಬೆಂಗಳೂರು: ತೆರಿಗೆ ನೀತಿ ಚರ್ಚೆಗಳನ್ನು ನಿರ್ದಿಷ್ಟ ವಲಯಗಳ ಹಿತಾಸಕ್ತಿಗಳನ್ನು ಮೀರಿ ನೋಡಬೇಕು ಮತ್ತು ನ್ಯಾಯಯುತ, ಊಹಿಸಬಹುದಾದ ಮತ್ತು ಹೂಡಿಕೆ, ನಾವೀನ್ಯತೆಗೆ ಬೆಂಬಲ ನೀಡುವ ವ್ಯವಸ್ಥೆಯನ್ನು ರಚಿಸುವುದು ಸೇರಿದಂತೆ ದೇಶದ ಒಟ್ಟಾರೆ ಆರ್ಥಿಕತೆಯ ಅಗತ್ಯತೆಗಳ ಮೇಲೆ ಗಮನ ಹರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರತಿಪಾದಿಸಿದ್ದಾರೆ.
'ಇಂಟರ್ ನ್ಯಾಷನಲ್ ಟ್ಯಾಕ್ಸ್ ರಿಸರ್ಚ್ ಅಂಡ್ ಅನಾಲಿಸಿಸ್ ಫೌಂಡೇಶನ್' (ITRAF) ಆಯೋಜಿಸಿದ್ದ ಎಂಟನೇ ಅಂತಾರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಮಾತನಾಡಿದ ಸೀತಾರಾಮನ್, ಇತ್ತೀಚಿನ ವರ್ಷಗಳಲ್ಲಿ ಕೈಗೊಂಡ ತೆರಿಗೆ ಸುಧಾರಣೆಗಳು ಸಂಕೀರ್ಣ ತೆರಿಗೆಯನ್ನು ಸರಳಗೊಳಿಸುವ, ಮೊಕದ್ದಮೆಗಳನ್ನು ಕಡಿಮೆ ಮಾಡುವ ಮತ್ತು ತೆರಿಗೆದಾರರಿಗೆ ಹೆಚ್ಚಿನ ಖಚಿತತೆಯನ್ನು ಒದಗಿಸುವ ಗುರಿಯನ್ನು ಹೊಂದಿವೆ ಎಂದು ಹೇಳಿದರು.
ಪ್ರಬುದ್ಧ ತೆರಿಗೆ ನೀತಿ ಚರ್ಚೆಯು ವಲಯ ಪರಿಗಣನೆಯನ್ನು ಮೀರಿ ಹೋಗಬೇಕು. ತೆರಿಗೆ ವೃತ್ತಿಪರರು ತಮ್ಮ ತಕ್ಷಣದ ಹಿತಾಸಕ್ತಿಗಳನ್ನು ಮೀರಿ ನೋಡಬೇಕು ಮತ್ತು ಅವರ ಸಲಹೆಗಳ ವ್ಯಾಪಕ ಪರಿಣಾಮಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸ್ವಯಂಪ್ರೇರಿತ ಅನುಸರಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಸರ್ಕಾರವು ಮೂಲದಲ್ಲಿ ತೆರಿಗೆ ಕಡಿತ (TDS) ಮತ್ತು ಮೂಲದಲ್ಲಿ ತೆರಿಗೆ ಸಂಗ್ರಹ (TCS)ಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ತರ್ಕಬದ್ಧಗೊಳಿಸಿದೆ. ಮಿತಿಗಳನ್ನು ಹೆಚ್ಚಿಸಿದೆ ಮತ್ತು ಅನಗತ್ಯ ಅಪರಾಧ ಪರಿಣಾಮಗಳನ್ನು ಕಡಿಮೆ ಮಾಡಿದೆ ಎಂದರು.
"ವಿವಾದ್ ಸೆ ವಿಶ್ವಾಸ್" ಯೋಜನೆಯಂತಹ ಕ್ರಮಗಳ ಮೂಲಕ ಮತ್ತು 2024 ರಲ್ಲಿ ಇಲಾಖಾ ಮೇಲ್ಮನವಿಗಳಿಗೆ ಹಣಕಾಸಿನ ಮಿತಿಗಳನ್ನು ಹೆಚ್ಚಿಸುವ ಮೂಲಕ ಸರ್ಕಾರ ತೆರಿಗೆ ಮೊಕದ್ದಮೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು.
ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಮಿತಿಗಳನ್ನು 60 ಲಕ್ಷ ರೂ.ಗಳಿಗೆ, ಹೈಕೋರ್ಟ್‌ಗಳಲ್ಲಿ ಎರಡು ಕೋಟಿ ರೂ.ಗಳಿಗೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಐದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ .ಸರ್ಕಾರವು ಮುಖರಹಿತ ಮೌಲ್ಯಮಾಪನ ( faceless assessment) ಮೇಲ್ಮನವಿಗಳು, ಪೂರ್ವ-ಭರ್ತಿ ಮಾಡಿದ ತೆರಿಗೆ ರಿಟರ್ನ್‌ಗಳು ಮತ್ತು ನವೀಕರಿಸಿದ ರಿಟರ್ನ್‌ಗಳನ್ನು ಪರಿಚಯಿಸಿದೆ. ಅಲ್ಲದೇ ಹೆಚ್ಚಿನ ಮರುಪಾವತಿಗಳನ್ನು ಈಗ ಕೆಲವೇ ದಿನಗಳಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ನೇರ ತೆರಿಗೆಯ ಕುರಿತು ಮಾತನಾಡಿದ ಅವರು, 2019 ರಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಶೇ. 22 ಕ್ಕೆ ಇಳಿಸಿರುವುದನ್ನು ಮತ್ತು 2025 ರಲ್ಲಿ ವೈಯಕ್ತಿಕ ಆದಾಯ ತೆರಿಗೆ ರಚನೆಯ ತರ್ಕಬದ್ಧಗೊಳಿಸುವಿಕೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. 1961 ರ ಶಾಸನವನ್ನು ಬದಲಿಸಿದ ಹೊಸ ಆದಾಯ ತೆರಿಗೆ ಕಾಯ್ದೆಯನ್ನು ಸಹ ಅವರು ಉಲ್ಲೇಖಿಸಿದರು, ಹೊಸ ಕಾನೂನನ್ನು ಹೆಚ್ಚು ಸಂಕ್ಷಿಪ್ತ ಮತ್ತು ಸರಳ ಸಂಹಿತೆಯ ಮೂಲಕ ಹೆಚ್ಚಿನ ಸ್ಪಷ್ಟತೆಯನ್ನು ಒದಗಿಸಲು ರೂಪಿಸಲಾಗಿದೆ ಎಂದು ಹೇಳಿದರು.
ಜಿಎಸ್ಟಿಯಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ನಡೆಯಲಿರುವ ಜಿಎಸ್ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಮತ್ತಷ್ಟು ಸುಧಾರಣೆಗಳ ಬಗ್ಗೆ ಗಮನ ಕೇಂದ್ರೀಕರಿಸಲಾಗುವುದು. "ಇನ್ನೂ 3.0 ನಲ್ಲಿಲ್ಲ. ಎರಡರಲ್ಲಿಯೇ, ನಾವು ಅದನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಇನ್ನೂ ಡಿಜಿಟಲ್ ಆರ್ಥಿಕತೆ ಕುರಿತು ಮಾತನಾಡಿದ ಸೀತಾರಾಮನ್, ಡಿಜಿಟಲ್ ಕಂಪನಿಗಳ ತೆರಿಗೆ, ವರ್ಚುವಲ್ ಡಿಜಿಟಲ್ ಸ್ವತ್ತುಗಳು, ಕ್ಲೌಡ್ ಸೇವೆಗಳು ಮತ್ತು ಗಡಿಯಾಚೆಗಿನ ವಹಿವಾಟುಗಳ ತೆರಿಗೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ.ವಿಶೇಷವಾಗಿ ತೆರಿಗೆ ಕ್ರಮಗಳು ಭವಿಷ್ಯದ ಹೂಡಿಕೆಗಳ ಮೇಲೆ ಪರಿಣಾಮ ಬೀರಬಹುದು ಎಂದರು.
ಡಿಜಿಟಲ್ ಪಾವತಿ ಮೂಲಸೌಕರ್ಯ ವಿಸ್ತರಣೆಯಾಗಿದ್ದರೂ ಕೆಲವು ಪ್ರಮುಖ ಮಾರುಕಟ್ಟೆ ಅಂಗಡಿಗಳು ಇನ್ನೂ ನಗದು ವಹಿವಾಟಿಗೇ ಆದ್ಯತೆ ನೀಡುತ್ತಿವೆ. ಭಾರತದಲ್ಲಿ ಡಿಜಿಟಲ್ ಪಾವತಿಗಳ ಯಶಸ್ಸು NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ದತ್ತಾಂಶದಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದ ಅವರು, ಗ್ರಾಹಕರು, ವೃತ್ತಿಪರರು ಮತ್ತು ಉದ್ಯಮಗಳು ಇದರ ವ್ಯಾಪಕ ಬಳಕೆಯನ್ನು ಉತ್ತೇಜಿಸುವಂತೆ ಕೋರಿದರು. ಡಿಜಿಟಲ್ ವ್ಯವಸ್ಥೆಯು ಎಷ್ಟು ಯಶಸ್ವಿಯಾಗಿದೆ ಎಂಬುದನ್ನು NPCI ಅಂಕಿಅಂಶಗಳಲ್ಲಿ ಕಾಣಬಹುದು; ಇದು ಜಗತ್ತಿಗೇ ಮಾದರಿಯಾಗಿದೆ ಎಂದು ಅವರು ಹೇಳಿದರು.
ದೇಶದ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ ದಾಖಲಿಸಿದ ಶೇ. 7.8 ರಷ್ಟು ಬೆಳವಣಿಗೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸೀತಾರಾಮನ್, ಅದರ ಶ್ರೇಯಸ್ಸನ್ನು ತಾವೇ ಪಡೆಯುವ ಬದಲು, ನಾಗರಿಕರು, ಕೈಗಾರಿಕೆಗಳು ಮತ್ತು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ಪ್ರಯತ್ನಗಳೇ ಇದಕ್ಕೆ ಕಾರಣ ಎಂದು ಹೇಳಿದರು.
ಆದಾಗ್ಯೂ, ಸುಂಕ ಬೆದರಿಕೆ, ಮೂರು ಯುದ್ಧಗಳು, ಹಾರ್ಮುಜ್ ಜಲಸಂಧಿಯ ಸುತ್ತಲಿನ ತೊಡಕುಗಳು ಮತ್ತು ಕಚ್ಚಾ ತೈಲ ಮತ್ತು ರಸಗೊಬ್ಬರಗಳ ಬೆಲೆಗಳನ್ನು ಉಲ್ಲೇಖಿಸಿ, ಜಾಗತಿಕ ಆರ್ಥಿಕ ವಾತಾವರಣವು ಸವಾಲಿನದ್ದಾಗಿಯೇ ಉಳಿದಿದೆ ಎಂದು ಅವರು ಎಚ್ಚರಿಸಿದರು. ಈ ಸವಾಲುಗಳ ಹೊರತಾಗಿಯೂ, ಸರ್ಕಾರ ತಂದಿರುವ ಖಚಿತತೆಯಿಂದಾಗಿ ಭಾರತ ಉತ್ತಮ ಸ್ಥಾನದಲ್ಲಿದೆ. ವಿಶ್ವಾಸವನ್ನು ಉಳಿಸಿಕೊಳ್ಳಲು ಮತ್ತು ಹೂಡಿಕೆ ವ್ಯವಹಾರ ವಿಸ್ತರಣೆಯನ್ನು ಮುಂದುವರಿಸಲು ಅವರು ಒತ್ತಾಯಿಸಿದರು.
ಜಾಗತಿಕ ಹೂಡಿಕೆದಾರರು ಭಾರತವನ್ನು "ಚೀನಾ ಪ್ಲಸ್ ಒನ್" ಕಾರ್ಯತಂತ್ರದ ಭಾಗವಾಗಿ ಹೆಚ್ಚಾಗಿ ನೋಡುತ್ತಿದ್ದಾರೆ. ಬಾಹ್ಯಾಕಾಶ ವಲಯದ ಕುರಿತು, ಸಂಶೋಧನೆ ಮತ್ತು ನಾವೀನ್ಯತೆ ಸೌಮ್ಯ ತೆರಿಗೆ ವಿಧಾನವನ್ನು ಪಡೆಯಬೇಕು ಎಂದು ಹೇಳಿದ ಸಚಿವರು, ತೆರಿಗೆ ನೀತಿಯು ಅಂತಿಮವಾಗಿ ಭಾರತದ ಅಭಿವೃದ್ಧಿ ಉದ್ದೇಶಗಳನ್ನು ಬೆಂಬಲಿಸಬೇಕು ಮತ್ತು ಊಹಿಸಬಹುದಾದ ಮತ್ತು ಆರ್ಥಿಕ ಚಟುವಟಿಕೆಗೆ ಅನುಕೂಲಕರವಾಗಿರಬೇಕು ಎಂದು ಸೀತಾರಾಮನ್ ಹೇಳಿದರು.