

ಬೆಂಗಳೂರು: ಉಚಿತ ಅಕ್ಕಿಯಿಂದ ಹಿಡಿದು ಆಯುಷ್ಮಾನ್ ಭಾರತ್, ಭಾಗ್ಯ ಜ್ಯೋತಿ, ಉಚಿತ ಎಲ್‌ಪಿಜಿ ಸಂಪರ್ಕ, ಉಚಿತ ವಸತಿ ಯೋಜನೆಗಳು ಸೇರಿದಂತೆ ಸರ್ಕಾರದ ಹಲವು ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯ; ಆದರೆ, ಈ ರೇಷನ್ ಕಾರ್ಡ್ ಆಕ್ಟಿವ್ ಆಗಿರಬೇಕು ಅಂದರೆ ಮುಂದಿನ ತಿಂಗಳು 20ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ! ಅಕಸ್ಮಾತ್, ಇಲಾಖೆ ನಿಗದಿಪಡಿಸಿದ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸರ್ಕಾರದಿಂದ ಸಿಗುವ ಹಲವು ಪ್ರಮುಖ ಸೌಲಭ್ಯಗಳು ಸ್ಥಗಿತಗೊಳ್ಳಲಿವೆ. ಹಾಗಾದ್ರೆ, ನಿಗದಿತ ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಯಾವೆಲ್ಲಾ ಸೌಲಭ್ಯಗಳು ಸ್ಥಗಿತಗೊಳ್ಳಬಹುದು ಮತ್ತು ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಯ ಕುರಿತ ಮಾಹಿತಿ ಇಲ್ಲಿದೆ:
ಉಚಿತ ಪಡಿತರ (ಅಕ್ಕಿ) ಸ್ಥಗಿತ: ಪಡಿತರ ಚೀಟಿಯಲ್ಲಿ ಹೆಸರಿದ್ದು, ಇ-ಕೆವೈಸಿ ಮಾಡಿಸದ ಸದಸ್ಯರ ಪಾಲಿನ ಉಚಿತ ಅಕ್ಕಿ ಅಥವಾ ಆಹಾರ ಧಾನ್ಯಗಳ ವಿತರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ಬಂದ್: ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿಗೆ ಸಿಗುವ ಗೃಹಲಕ್ಷ್ಮಿ ಯೋಜನೆಯ ಮಾಸಿಕ ₹2,000 ಹಣದ ಸೌಲಭ್ಯಕ್ಕೂ ತಡೆಯುಂಟಾಗಬಹುದು.
ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆ: ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಸರ್ಕಾರ ನೀಡುತ್ತಿರುವ ಹಣ ವರ್ಗಾವಣೆ ಪ್ರಕ್ರಿಯೆಯು ಸ್ಥಗಿತಗೊಳ್ಳುತ್ತದೆ.
ಪಡಿತರ ಚೀಟಿ ಅಮಾನತು/ರದ್ದು: ದೀರ್ಘಕಾಲದವರೆಗೆ ಇ-ಕೆವೈಸಿ ಮಾಡಿಸದಿದ್ದರೆ ಆ ಕಾರ್ಡ್‌ಗಳನ್ನು ಅನರ್ಹ ಅಥವಾ ನಿಷ್ಕ್ರಿಯ ಎಂದು ಪರಿಗಣಿಸಿ ಪಡಿತರ ಚೀಟಿಯನ್ನೇ ರದ್ದುಗೊಳಿಸುವ ಸಾಧ್ಯತೆ ಇರುತ್ತದೆ.
ಸರ್ಕಾರಿ ಯೋಜನೆಗಳ ಸೌಲಭ್ಯಕ್ಕೆ ಬ್ರೇಕ್: ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ವಿದ್ಯಾರ್ಥಿ ವೇತನ, ಉಚಿತ ವಸತಿ ಯೋಜನೆಗಳು ಮತ್ತು ಸರ್ಕಾರದ ಇತರೆ ಸಬ್ಸಿಡಿ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಅಗತ್ಯವಿದ್ದು, ಇ-ಕೆವೈಸಿ ಆಗದಿದ್ದರೆ ಈ ಯಾವುದೇ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಹಾಗಾದ್ರೆ, ಇ-ಕೆವೈಸಿ ಮಾಡಿಸುವುದು ಹೇಗೆ?
ನ್ಯಾಯಬೆಲೆ ಅಂಗಡಿ (ರೇಷನ್ ಶಾಪ್): ನಿಮ್ಮ ವ್ಯಾಪ್ತಿಯ ರೇಷನ್ ಅಂಗಡಿಗೆ ಕುಟುಂಬದ ಎಲ್ಲಾ ಸದಸ್ಯರು ಆಧಾರ್ ಕಾರ್ಡ್‌ನೊಂದಿಗೆ ಭೇಟಿ ನೀಡಿ, ಇ-ಪೋಸ್ ಯಂತ್ರದಲ್ಲಿ ಹೆಬ್ಬೆರಳ ಗುರುತು ನೀಡುವ ಮೂಲಕ ಉಚಿತವಾಗಿ ಮಾಡಿಸಬಹುದು.
ಮೊಬೈಲ್ ಆ್ಯಪ್: ಸಾರ್ವಜನಿಕರ ಅನುಕೂಲಕ್ಕಾಗಿ ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಮುಖಚರ್ಯೆ ಬಳಸಿ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಮಾಡುವ ಹೊಸ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದಾರೆ.
ಇ-ಕೆವೈಸಿ ಮಾಡಿಸಲು ಬೇಕಾಗುವ ಪ್ರಮುಖ ದಾಖಲೆಗಳು:
ರೇಷನ್ ಕಾರ್ಡ್ ಸಂಖ್ಯೆ
ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್