

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಬೆಳಗ್ಗೆಯೇ ಮಂಗಳೂರಿನ ಬಂದರು ಪ್ರದೇಶಕ್ಕೆ ಭೇಟಿ ನೀಡಿ, ಮೀನುಗಾರಿಕಾ ಬೋಟ್‌ನಲ್ಲಿ ಅಳಿವೆಬಾಗಿಲು ಪ್ರದೇಶದ ವಸ್ತುಸ್ಥಿತಿ ಪರಿಶೀಲಿಸಿದರು. ಇದೇ ವೇಳೆ ಬಂದರಿನಲ್ಲಿನ ಮೀನು ವ್ಯಾಪಾರ ಬಂದ್ ಮಾಡಿಸಿದ್ದಕ್ಕೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು.
ಮಂಗಳೂರಿನ ಮೀನುಗಾರಿಕೆ ದಕ್ಕೆಗೆ ತೆರಳಿದ ಮುಖ್ಯಮಂತ್ರಿ, ಮೀನುಗಾರಿಕಾ ಬೋಟ್‌ಗಳನ್ನು ವೀಕ್ಷಿಸಿದರು. ಸದಾ ಪ್ರಕ್ಷುಬ್ಧವಾಗಿರುವ ಅಳಿವೆಬಾಗಿಲು ಪ್ರದೇಶದಲ್ಲಿ ಸಮುದ್ರದಿಂದ ದಡ ಸೇರುವ ಸ್ಥಳದ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಬೋಟ್‌ನಲ್ಲಿ ಸಂಚರಿಸುವ ಮೂಲಕ ಅರಿತುಕೊಂಡರು. ಮೀನುಗಾರರೊಂದಿಗೆ ಮಾತುಕತೆ ನಡೆಸಿದ ಅವರು, ಸಮಸ್ಯೆಗಳನ್ನು ಆಲಿಸಿದರು.
ಡಿಕೆ ಶಿವಕುಮಾರ್ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕೂಡ ಇದ್ದರು. ಬಂದರು ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆಗಳು ಹಾಗೂ ಬೋಟ್‌ಗಳ ಸಂಚಾರವನ್ನು ವೀಕ್ಷಿಸಿದ ಬಳಿಕ ಮುಖ್ಯಮಂತ್ರಿ ಅಲ್ಲಿಂದ ತೆರಳಿದರು.
ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ದಕ್ಕೆ ಹಳೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದರು. ಸಿಎಂ ಭೇಟಿ ಹಿನ್ನೆಲೆಯಲ್ಲೇ ದಕ್ಕೆಯಲ್ಲಿ ಮೀನುಗಾರಿಕೆ ವ್ಯವಹಾರ ಚಟುವಟಿಕೆ ಸ್ಥಗಿತಗೊಳಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಬಂದರಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಮೀನುಗಾರರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳು ಹಾಗೂ ತುರ್ತು ಅಗತ್ಯಗಳ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಫ್ರೆಶ್ ಮೀನು ಕೈಯಲ್ಲಿ ಹಿಡಿದು ನೋಡಿದರು.
ಮೀನು ವ್ಯಾಪಾರ ಬಂದ್
ಸಿಎಂ ಭೇಟಿ ಹಿನ್ನೆಲೆ ಭದ್ರತಾ ಕಾರಣಗಳನ್ನು ನೀಡಿ ಬಂದರಿನಲ್ಲಿನ ಮೀನು ವ್ಯಾಪಾರವನ್ನ ಬಂದ್ ಮಾಡಿಸಲಾಗಿತ್ತು. ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಈ ಬಗ್ಗೆ ಮೀನುಗಾರರು ಅಳಲು ತೋಡಿಕೊಂಡರು. ಇದರಿಂದ ಅಸಮಾಧಾನಗೊಂಡ ಸಿಎಂ, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಬಳಿ ಈ ಕುರಿತು ಮಾಹಿತಿ ಕೇಳಿದರು.
ಮೀನುಗಾರರ ಸಮಸ್ಯೆ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಅವರ ವ್ಯಾಪಾರ ಬಂದ್ ಮಾಡಲು ಯಾರು ಹೇಳಿದ್ದು? ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಿಎಂ, ತಾವು ವ್ಯಾಪಾರ ಸ್ಥಗಿತಗೊಳಿಸುವಂತೆ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಭದ್ರತೆಯ ಹೆಸರಿನಲ್ಲಿ ಮೀನುಗಾರರ ವ್ಯಾಪಾರಕ್ಕೆ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು. ನಿಮ್ಮ ಸೆಕ್ಯೂರಿಟಿ ಯಾರಿಗೆ ಬೇಕು? ಮೀನುಗಾರರ ವ್ಯಾಪಾರ ಬಂದ್ ಮಾಡಿಸಲು ಯಾರು ಹೇಳಿದ್ದು? ಯಾರಾದರೂ ಆರ್ಡರ್ ಮಾಡಿದ್ದರೆ ಅವರನ್ನ ಸಸ್ಪೆಂಡ್ ಮಾಡುತ್ತೇನೆ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳ ಭೇಟಿ ವೇಳೆ ಮಂಗಳೂರು ಮೀನುಗಾರಿಕಾ ಬಂದರಿನ ಮೀನುಗಾರರು ತಮ್ಮ ಹಲವು ತುರ್ತು ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಅವರ ಮುಂದಿಟ್ಟರು. ಬಂದರಿನ ಮೂಲಸೌಕರ್ಯ, ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಮೀನುಗಾರರು ಸಿಎಂ ಗಮನಕ್ಕೆ ತಂದರು.
ಬಳಿಕ ಮಂಗಳೂರಿನ ತಾಜ್ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಉಪಾಹಾರ ಸೇವಿಸಿದರು. ಯು ಟಿ ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಸೇರಿದಂತೆ ಹಲವು ಮುಖಂಡರು ಈ ವೇಳೆ ಉಪಸ್ಥಿತರಿದ್ದರು. ಬನ್ಸ್, ತುಪ್ಪದೋಸೆ, ಕಾಶಿ ಹಲ್ವಾ, ಇಡ್ಲಿ ಮತ್ತು ವಡೆ ಸೇರಿದಂತೆ ವಿವಿಧ ತಿಂಡಿಗಳನ್ನು ಮುಖ್ಯಮಂತ್ರಿ ಸೇವಿಸಿದರು.