

ಹಾಸನ: ‘ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳ ತಂಡ ಇದೆ. ಆದರೆ ಇಲ್ಲಿನ ಜಿಲ್ಲಾಧಿಕಾರಿಗೆ ಕಿರುಕುಳ ಇದೆ. ಯಾರಿಂದ ಕಿರುಕುಳ ಇದೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ’ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳುವ ಮೂಲಕ ಮಾಜಿ ಸಚಿವ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ.
ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ
ಇಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ನೇರ ಸಂವಾದ ಸಭೆಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ನಾನೇ ಖುದ್ದು ಜಿಲ್ಲಾಧಿಕಾರಿಗೆ ಫೋನ್ ಮಾಡಿ ಧೈರ್ಯ ತುಂಬಿದ್ದೇನೆ. ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಬಡವರ ಪರವಾಗಿ ಕೆಲಸ ಮಾಡಮ್ಮ’ ಎಂದು ಹೇಳಿದ್ದೇನೆ ಎಂದರು.
ಕೆಲವರು ಟೀಕೆ ಮಾಡುತ್ತಾರೆ, ಮಾಡಲಿ ಸಂತೋಷ. ನಾನು ಕ್ಯಾಬಿನೆಟ್ ಮೀಟಿಂಗ್ ಮಾಡಿದ್ರು ಟೀಕೆ ಮಾಡ್ತಾರೆ, ನಡೆದರು ಟೀಕೆ ಮಾಡ್ತಾರೆ. ಬಿಜೆಪಿ ಸ್ನೇಹಿತರು ಅವರ ಸಾಧನೆಗಳನ್ನು ಹೇಳಲಿ, ಬೇಡ ಎನ್ನಲ್ಲ, ಆದರೆ ಮಾಡದೆ ಹೋದಾಗ, ದೇವರು ವರನು ಕೊಡಲ್ಲ, ಶಾಪನೂ ಕೊಡಲ್ಲ ಅವಕಾಶ ಕೊಡ್ತಾನೆ. ನನಗೆ ಒಂದು ಅವಕಾಶ ಕೊಟ್ಟಿದ್ದಾನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕೂಡ ಟೀಕೆ ಮಾಡಿದರು.
ಇತ್ತೀಚೆಗೆ ಗ್ರಾಮ ಪಂಚಾಯಿತಿ ಚುನಾವಣಾ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ನಡುವೆ ತೀವ್ರ ಮಾತಿನ ಸಮರವೇ ನಡೆದಿತ್ತು. ಈ ವೇಳೆ ರೇವಣ್ಣ ಅವರು ಜಿಲ್ಲಾಧಿಕಾರಿಯವರ ವಿರುದ್ಧ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಡಿಸಿ ಕೂಡ ತಮ್ಮ ಮೇಲಿನ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.