

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ದಲ್ಲಿನ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಗಳ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪೊಲೀಸ್ ತನಿಖೆ ಈಗಾಗಲೇ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಕ್ರಮದಲ್ಲಿ ಶಾಮೀಲಾದ ಹಲವರನ್ನು ಈಗಾಗಲೇ ಗುರುತಿಸಲಾಗಿದೆ.
ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚನೆಗೆ ಆಕ್ಷೇಪವಿಲ್ಲ ಎಂದರು. ಆದರೆ, ಅಧಿಕಾರಿಗಳ ನೇಮಕದಲ್ಲಿ ಹೊರಗಿನವರ ಹಸ್ತಕ್ಷೇಪದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಬಿಟ್ಟ ವಿಚಾರದಲ್ಲಿ ಇತರರ ಪಾತ್ರದ ಕುರಿತು ಕಾನೂನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಅದೆಷ್ಟೋ ಅಭ್ಯರ್ಥಿಗಳ ಕಠಿಣ ಶ್ರಮ-ನಿರಂತರ ಪ್ರಯತ್ನಕ್ಕೆ ಅನ್ಯಾಯವಾಗಿದ್ದು, ಕೆಪಿಎಸ್‌ಸಿ ಬೇಕಾ ಅನ್ನೋ ಚರ್ಚೆ ಎದ್ದಿದೆ. ಇದರ ನಡುವೆಯೇ ಕೆಪಿಎಸ್‌ಸಿ ಕಚೇರಿಗೆ ಬೀಗ ಹಾಕುವ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
KPSC ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬರ್ತಿದೆ. ಹೀಗಾಗಿ ಸರ್ಕಾರ ಮಹತ್ವದ ಚಿಂತನೆ ನಡೆಸಿದೆ. ಈ ಕುರಿತ ಮಾಧ್ಯಮಗಳ ಜೊತೆ ಮಾತಾಡಿದ ಸಿಎಂ ಡಿಕೆ ಶಿವಕುಮಾರ್ ಅವ್ರು ಕೆಪಿಎಸ್‌ಸಿ ಕಚೇರಿಯನ್ನೇ ಮುಚ್ಚುವ ಬಗ್ಗೆ ಯೋಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಲೀಗಲ್ ಆಗಿ ಚಿಂತನೆ ಮಾಡಿದ್ದು, ನಾವು ನಂಬಿಕೆ ಮೇಲೆ ನೇಮಕ ಮಾಡಿರುತ್ತೇವೆ. ಅಧಿಕಾರಿಗಳೇ ಹೀಗೆ ಮಾಡಿದ್ರೆ ಹೇಗೆ? ಈ ರೀತಿ ಅಕ್ರಮಗಳು ಆದಾಗ ಮಕ್ಕಳ ಭವಿಷ್ಯಕ್ಕೆ ಸಮಸ್ಯೆ ಆಗುತ್ತೆ. ಹೀಗಾಗಿ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಎಸ್‌ಸಿ- ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಇರುವ ರಾಜ್ಯ ಮಟ್ಟದ ಸ್ವಾಯತ್ತ ಸಂಸ್ಥೆಯಾಗಿದೆ. ಆದ್ರೆ ಇತ್ತೀಚಿಗೆ ಈ ಸಂಸ್ಥೆಯಲ್ಲಿ ಅಕ್ರಮ-ಭ್ರಷ್ಟಾಚಾರ ತಾಂಡವವಾಡ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಹಿಂದೆ ವಿದ್ಯುತ್ ಸಚಿವರಾಗಿದ್ದಾಗ ಪಾರದರ್ಶಕ ನೇಮಕಾತಿ ನಡೆಸಿದ್ದನ್ನು ಅವರು ಸ್ಮರಿಸಿದರು. ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.