

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಹಾಗೂ ಅಕ್ರಮ ಆಸ್ತಿ ಗಳಿಸಿದ ಅಧಿಕಾರಿಗಳ ಮೇಲೆ ಮತ್ತೆ ಲೋಕಾಯುಕ್ತ ಬಲೆ ಬೀಸಿದೆ. ಲೋಕಾಯುಕ್ತ ಪೊಲೀಸರು ಇಂದು ಮಂಗಳವಾರ ಬೆಳ್ಳಂಬೆಳಿಗ್ಗೆ ಬಿಗ್ ಶಾಕ್ ನೀಡಿದ್ದಾರೆ. ಕಲಬುರಗಿ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ಚಿತ್ರದುರ್ಗ ಸೇರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಜೆಸ್ಕಾಂ ಎಇಇ ರಾಜೇಶ್ವರಿ ಮನೆ, ಕಚೇರಿ ಮೇಲೆ ದಾಳಿ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM)ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಿರಣ್ ಕುಮಾರ್ ಬೈಂದೂರ್ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯಕ್ಕೆ ಹೋಲಿಸಿದರೆ ಅಕ್ರಮವಾಗಿ ಹೆಚ್ಚುವರಿ ಆಸ್ತಿ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು GESCOM ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ ಎರಡು ಮನೆಗಳು ಹಾಗೂ ಕಚೇರಿಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಲಬುರಗಿಯ ಮಹಾಲಕ್ಷ್ಮಿ ಲೇಔಟ್ ಮತ್ತು ಖಾದ್ರಿ ಚೌಕ್‌ನಲ್ಲಿರುವ ನಿವಾಸಗಳ ಮೇಲೆ ಈ ದಾಳಿ ನಡೆಸಲಾಗಿದೆ.
ಅಧಿಕಾರಿ ರಾಜೇಶ್ವರಿ ಅವರು ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಲೋಕಾಯುಕ್ತ ತಂಡ ಸ್ಥಳದಲ್ಲೇ ಕಾಯುತ್ತಿತ್ತು. ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅವರ ಮುಖ್ಯ ನಿವಾಸ, ಖಾದ್ರಿ ಚೌಕ್‌ನಲ್ಲಿರುವ ಮತ್ತೊಂದು ಮನೆ ಹಾಗೂ ಅವರ ಜೆಸ್ಕಾಂ ಕಚೇರಿ ಸೇರಿದಂತೆ ಒಟ್ಟು ಮೂರು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಹುಬ್ಬಳ್ಳಿಯಲ್ಲಿ ಹೆಸ್ಕಾಂ AEE ಕಿರಣಕುಮಾರ್ ದಂಪತಿ ಲೋಕಾ ಬಲೆಗೆ
ಹುಬ್ಬಳ್ಳಿಯ ಹೆಸ್ಕಾಂ (HESCOM) ಕಚೇರಿಯ AEE ಕಿರಣಕುಮಾರ್ ಬೈಂದೂರ್ ಅವರಿಗೆ ಸೇರಿದ ನಾಲ್ಕು ಪ್ರಮುಖ ಸ್ಥಳಗಳ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಕಿರಣಕುಮಾರ್ ಅವರ ಪತ್ನಿ ಪ್ರೀತಿ ಸಹ ಹೆಸ್ಕಾಂನಲ್ಲಿಯೇ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಷಯ್ ಪಾರ್ಕ್‌ನಲ್ಲಿರುವ ಅವರ ನಿವಾಸ, ತಬೀಬ್ ಲ್ಯಾಂಡ್‌ನಲ್ಲಿರುವ ಕಿರಣಕುಮಾರ್ ಕಚೇರಿ, ಪ್ರೀತಿ ಅವರು ಕೆಲಸ ಮಾಡುತ್ತಿರುವ ಗೋಪನಕೊಪ್ಪ ಹೆಸ್ಕಾಂ ಕಚೇರಿ ಹಾಗೂ ಕಿರಣಕುಮಾರ್ ಅವರ ಸಹೋದರನ ಮನೆ ಮೇಲೆ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ್ ಬುದ್ನಿ, ನಾಲ್ಕೂ ಸ್ಥಳಗಳಲ್ಲಿ ಪ್ರಮುಖ ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಎಫ್‌ಡಿಎ ದರ್ಶನ್ ಗೌಡಗೆ ಸೇರಿದ ಬೆಂಗಳೂರಿನ 7 ಮನೆಗಳ ಮೇಲೆ ದಾಳಿ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ (FDA) ಆಗಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ಗೌಡ ಎಂಬುವವರ ಮೇಲೆಯೂ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಪೊಲೀಸರು ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಒಟ್ಟು ೮ ಸ್ಥಳಗಳಲ್ಲಿ ಸುದೀರ್ಘ ಪರಿಶೀಲನೆ ನಡೆದಿದೆ. ಈ ವೇಳೆ ದರ್ಶನ್ ಗೌಡ ಅವರಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲೇ ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಒಟ್ಟು ೭ ಐಷಾರಾಮಿ ಮನೆಗಳು ಹಾಗೂ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಬೀದರ್‌ನಲ್ಲಿ ನಿವೃತ್ತ ಕೃಷಿ ಅಧಿಕಾರಿಗೆ ಬಿಗ್ ಶಾಕ್
ಬೀದರ್‌ನಲ್ಲಿ ಕಳೆದ ತಿಂಗಳಷ್ಟೇ ಸೇವಾ ನಿವೃತ್ತಿ ಹೊಂದಿದ್ದ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ ಅವರ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರು ಸೇವೆಯಲ್ಲಿದ್ದಾಗ ವ್ಯಾಪಕ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಎಸ್ಪಿ ಸಿದ್ಧರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹನುಮಂತರಾಯ ನೇತೃತ್ವದ ತಂಡವು ಬೀದರ್ ನಗರದ ಹಕ್ ಕಾಲನಿ ಮನೆ, ಹುಮನಾಬಾದ್‌ನ ಟೀಚರ್ ಕಾಲನಿ ಮನೆ ಹಾಗೂ ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿರುವ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಚಿತ್ರದುರ್ಗ AC ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ FDA ಬಲೆಗೆ
ಇನ್ನೊಂದೆಡೆ, ಚಿತ್ರದುರ್ಗದ ಸಹಾಯಕ ಕಮಿಷನರ್ (AC) ಕಚೇರಿಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಲಂಚ ಸ್ವೀಕರಿಸುತ್ತಿದ್ದ ಎಫ್‌ಡಿಎ (FDA) ಬಸವರಾಜ ಎಂಬುವವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಕೆಲ್ಲೋಡು ಗ್ರಾಮದ ಹನುಮಂತಪ್ಪ ಎಂಬುವವರಿಂದ ಪಹಣಿ ತಿದ್ದುಪಡಿ ಮಾಡಿಕೊಡಲು ಬಸವರಾಜ ೪೦,೦೦೦ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು. ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಎಸ್ಪಿ ಕವಲೆಪುರೆ ಹಾಗೂ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದೆ.
ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಸಹಾಯಕ ಆಯುಕ್ತರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪ್ರಥಮ ದರ್ಜೆ ಸಹಾಯಕ (FDA) ಎಚ್.ಜೆ. ಬಸವರಾಜಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.
ಹೊಸದುರ್ಗ ತಾಲ್ಲೂಕಿನ ದೂರುದಾರ ಹನುಮಂತಪ್ಪ ಅವರಿಗೆ ಸೇರಿದ ಪಹಣಿ (ಆರ್‌ಟಿಸಿ)ಯಲ್ಲಿ ತಿದ್ದುಪಡಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಎಚ್.ಜೆ. ಬಸವರಾಜಪ್ಪ ಅವರ ಮೇಲಿದೆ.
ಲಂಚದ ಬೇಡಿಕೆ ಇಟ್ಟಿದ್ದ ಪೊಲೀಸ್ ನಿರೀಕ್ಷಕ ಲೋಕಾಯುಕ್ತ ಬಲೆಗೆ
ಮಂಗಳೂರು ನಗರದ ಬಜಪೆ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದ್ದ ಸೊತ್ತುಗಳನ್ನು ಬಿಡುಗಡೆಗೊಳಿಸಲು ಲಂಚದ ಹಣದ ಬೇಡಿಕೆ ಇಟ್ಟಿದ್ದ ಬಜಪೆ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಹಣ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸ್ವತ್ತು ಬಿಡಿಸಲು ಬಾಲಕೃಷ್ಣ ಅವರು 25 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಅದರಂತೆ 15 ಸಾವಿರ ರು.ವನ್ನು ಮುಂಚಿತವಾಗಿ ಆರೋಪಿಗಳಿಂದ ಪಡೆದುಕೊಂಡಿದ್ದರು. ಹೆಚ್ಚುವರಿಯಾಗಿ 5 ಸಾವಿರ ರು.ಗೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಆರೋಪಿಗಳು ಮಂಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೆ.21ರಂದು ಬಾಲಕೃಷ್ಣ ಅವರು 5 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಬಾಲಕೃಷ್ಣ ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.