Pratap Simha ವಿರುದ್ಧ ಮತ್ತೊಂದು FIR, 'ಅಟ್ರಾಸಿಟಿ' ಕೇಸ್ ದಾಖಲು; 'ಸುಳ್ಳು ಪ್ರಕರಣ' ಬೇಡ ಎಂದ ಮಾಜಿ ಸಂಸದ!

ಸೆಪ್ಟೆಂಬರ್ 18ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Fresh FIR against ex-BJP MP Pratap Simha
ಮಾಜಿ ಸಂಸದ ಪ್ರತಾಪ್ ಸಿಂಹ
Updated on

ಮೈಸೂರು: ದಲಿತ ಸಮುದಾಯದ ಸದಸ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು FIR ದಾಖಲಾಗಿದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 18ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸೆಪ್ಟೆಂಬರ್ 22ರಂದು ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಬಿ.ಆರ್. ಅಂಬೇಡ್ಕರ್ ಕ್ಷೇಮ ಕ್ರೀಡಾ ಕಲಾ ಸಂಘದ ಅಧ್ಯಕ್ಷರು ನೀಡಿದ ದೂರಿನ ಆಧಾರದ ಮೇಲೆ ಹೊಸ ಪ್ರಕರಣ ದಾಖಲಿಸಲಾಗಿದೆ.

ಪ್ರತಾಪ್ ಸಿಂಹ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 (ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಸೆಕ್ಷನ್ 356 (ಮಾನಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Fresh FIR against ex-BJP MP Pratap Simha
ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ; ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಕ್ತ ಮಾಡ್ತೀವಿ- ಪ್ರತಾಪ್ ಸಿಂಹ

ಅಟ್ರಾಸಿಟಿ ಕೇಸ್

ಪೊಲೀಸರ ಪ್ರಕಾರ, ಟಿ. ನರಸೀಪುರ ಪೊಲೀಸ್ ಠಾಣೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನೂರಾರು ಜನರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರತಾಪ್ ಸಿಂಹ ಅವರು ದಲಿತ ಸಮುದಾಯದ ಸದಸ್ಯರನ್ನು ಸಾರ್ವಜನಿಕವಾಗಿ ಅವಮಾನಿಸುವ ಹಾಗೂ ಅವರನ್ನು ಕೀಳು ಮಟ್ಟದಲ್ಲಿ ಬಿಂಬಿಸುವ ಉದ್ದೇಶದಿಂದ ಅತ್ಯಂತ ಅವಹೇಳನಕಾರಿ ಮತ್ತು ನಿಂದನಾತ್ಮಕ ಭಾಷಣ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಕಾರ್ಯಕರ್ತರನ್ನು ಪ್ರತಾಪ್ ಸಿಂಹ ನೇರವಾಗಿ ಗುರಿಯಾಗಿಸಿಕೊಂಡು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು FIRನಲ್ಲಿ ಆರೋಪಿಸಲಾಗಿದೆ. ಮಾತ್ರವಲ್ಲದೇ ಮೆರವಣಿಗೆ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರ ಜಾತಿಯನ್ನೂ ಉಲ್ಲೇಖಿಸಿದ್ದಾರೆ ಎಂದು FIRನಲ್ಲಿ ಆರೋಪಿಸಲಾಗಿದೆ.

“ಸ್ವೀಕರಿಸಿದ ದೂರಿನ ಆಧಾರದ ಮೇಲೆ ಕಾನೂನಿನ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ FIR ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ಕಳೆದ ವಾರವೂ ಇದೇ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಪ್ರತ್ಯೇಕ FIR ದಾಖಲಾಗಿತ್ತು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮೈಕ್‌ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು PSI ನೀಡಿದ ದೂರಿನ ಆಧಾರದ ಮೇಲೆ ಆ ಪ್ರಕರಣ ದಾಖಲಿಸಲಾಗಿತ್ತು.

ಸುಳ್ಳು ಪ್ರಕರಣ ಬೇಡ: ಪ್ರತಾಪ್ ಸಿಂಹ ತಿರುಗೇಟು

ಇನ್ನು ಈ ಕುರಿತು ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, 'ರಾಜಕಾರಣದಲ್ಲಿ ಎಲ್ಲ ರೀತಿಯ ಆರೋಪಗಳು ಬರುತ್ತವೆ. ದಲಿತ ವಿರೋಧಿ ಎಂಬ ಆರೋಪಗಳಿಗೆ ನಾನು ದೀರ್ಘವಾಗಿ ಹೇಳೋಕೆ ಹೋಗಲ್ಲ. ನನ್ನ ನಿಲುವು ಮತ್ತು ನಂಬಿಕೆಯನ್ನು ಸ್ಪಷ್ಟವಾಗಿ ಹೇಳಿದ್ದೇನೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು 140 ಕೋಟಿ ಭಾರತೀಯರಿಗೂ ಸಲ್ಲಬೇಕಾದವರು. ನಾನು ಈ ಹಿಂದೆ ಕೋಲಾರ ಕಾರ್ಯಕ್ರಮದಲ್ಲಿದ್ದಾಗಲೂ ಈ ಬಗ್ಗೆ ಹೇಳಿದ್ದೆ. ಮನೆಯಲ್ಲಿ ನೀವು ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಏನಾದರೂ ಇಟ್ಟುಕೊಳ್ಳಿ. ಆದರೆ ಮನೆಯಿಂದ ಹೊರಗೆ ಬಂದ ಮೇಲೆ ನಿಮ್ಮ ಹಕ್ಕುಗಳು, ಅಧಿಕಾರವನ್ನು ರಕ್ಷಣೆ ಮಾಡುವುದು ಮತ್ತು ಅದನ್ನು ನೀಡುವುದು ಭಾರತದ ಸಂವಿಧಾನ. ಅದನ್ನ ಬರೆದವರು ಬಾಬಾ ಸಾಹೇಬ್ ಅಂಬೇಡ್ಕರ್.. ಎಂದು ಹೇಳಿದ್ದೇನೆ. ಅಲ್ಲದೆ ಈ ಮೂಲಕ ಅಪಪ್ರಚಾರ ಮಾಡಬೇಡಿ ಎಂದು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com