

ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರದ ಸಾಲ ಪಡೆಯುವ ಸಾಮರ್ಥ್ಯ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿವೇಚನೆಯಿಂದ ವೆಚ್ಚ ಮಾಡುವಂತೆ ಹಣಕಾಸು ಇಲಾಖೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಮುಖ್ಯಮಂತ್ರಿಗಳ ಕಚೇರಿಗೆ ನೀಡಿರುವ ಟಿಪ್ಪಣಿಯಲ್ಲಿ ಹಣಕಾಸು ಇಲಾಖೆ, ಲಭ್ಯವಿರುವ ಹಣಕಾಸಿನ ಮಿತಿಯನ್ನು ವಾಸ್ತವಿಕವಾಗಿ ಪರಿಗಣಿಸುವುದು ಸೂಕ್ತ. ಈಗಾಗಲೇ ಬಾಕಿ ಉಳಿದಿರುವ ಕಾಮಗಾರಿಗಳ ವೆಚ್ಚದ ಹೊರೆಯನ್ನು ಮತ್ತಷ್ಟು ಹೆಚ್ಚಿಸುವ ಯಾವುದೇ ಕ್ರಮ ಕೈಗೊಳ್ಳದಿರುವುದು ಒಳಿತು ಎಂದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸರ್ಕಾರದ ಹಿತದೃಷ್ಟಿಯಿಂದಲೇ ಈ ಸಲಹೆ ನೀಡಲಾಗಿದೆ. ಹಣಕಾಸು ಸಚಿವನಾಗಿ ಯಾವ ಯೋಜನೆಗಳನ್ನು ಕೈಬಿಡಬೇಕು, ಯಾವ ಯೋಜನೆಗಳನ್ನು ಪರಿಚಯಿಸಬೇಕು ಎಂಬುದು ನನಗೆ ಗೊತ್ತಿದೆ.
ಬೆಲೆಗಳು ಗಗನಕ್ಕೇರಿವೆ, ಆದರೆ ಜನರ ಆದಾಯ ಕುಸಿದಿದೆ. ಅದಕ್ಕಾಗಿಯೇ ನಾವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ರೈತರು ಹಾಗೂ ಸಾರ್ವಜನಿಕರ ಜೀವನೋಪಾಯಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಾಕಿ ಇರುವ ಅನುದಾನಗಳನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ ಕೃಷ್ಣಾ ಮೇಲ್ದಂಡೆ ಯೋಜನೆ-3ಕ್ಕೆ ಸಂಬಂಧಿಸಿದ 5,300 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ. .
ಇದೇ ವೇಳೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹಣಕಾಸು ಇಲಾಖೆಯ ಟಿಪ್ಪಣಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಜೆಟ್‌ನಲ್ಲಿ ಅನುದಾನ ಮೀಸಲಿಡದ ಪ್ರಮುಖ ಯೋಜನೆಗಳನ್ನು ಸಂಪನ್ಮೂಲ ಕ್ರೋಢೀಕರಿಸದೆ ಕೈಗೆತ್ತಿಕೊಳ್ಳಬಾರದು. 2026-27ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಒದಗಿಸದ ರೂ.1,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕ ಈಗಾಗಲೇ ತನ್ನ ಅಗತ್ಯಗಳನ್ನು ಪೂರೈಸಲು ಸಾಲ ಪಡೆಯುವ ಸಾಮರ್ಥ್ಯವನ್ನು ಬಳಸಿಕೊಂಡಿದೆ. ಅಂದರೆ, ಇನ್ನು ಮುಂದೆ ಹೆಚ್ಚುವರಿ ಸಾಲ ಪಡೆಯಲು ಸಾಧ್ಯವಿಲ್ಲ. ಅದಕ್ಕೆ ಅನುಮತಿಯೂ ಸಿಗುವುದಿಲ್ಲ. 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಹಿನ್ನೆಲೆಯಲ್ಲಿ ಇಂತಹ ದೊಡ್ಡ ಯೋಜನೆಗಳಿಗೆ ಹಣ ಒದಗಿಸಲು ಹೆಚ್ಚುವರಿ ಸಾಲ ಪಡೆಯುವ ಅವಕಾಶವಿಲ್ಲ. ರೈತರು ನೈಸರ್ಗಿಕ ಬರದಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ “ಆರ್ಥಿಕ ಬರ” ಎದುರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಹಣಕಾಸು ಇಲಾಖೆ ಈ ರೀತಿಯ ಹೇಳಿಕೆ ನೀಡಿರುವುದನ್ನು ನಾನು ಹಿಂದೆಂದೂ ನೋಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳ ಹಣವನ್ನು ಸರ್ಕಾರ ಮುಂದುವರಿದೂ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಿದೆ. ವಿವಿಧ ಇಲಾಖೆಗಳ ಬಾಕಿ ಬಿಲ್‌ಗಳ ಮೊತ್ತ ರೂ. 2 ಲಕ್ಷ ಕೋಟಿಗೂ ಹೆಚ್ಚಾಗಿದೆ, ಸಾರಿಗೆ ನಿಗಮಗಳು, ನೀರಾವರಿ ನಿಗಮಗಳು ಹಾಗೂ ವಿದ್ಯುತ್ ಕಂಪನಿಗಳು ತೀವ್ರ ಆರ್ಥಿಕ ಒತ್ತಡದಲ್ಲಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿದ್ಯುತ್ ಸಬ್ಸಿಡಿ ವಿಚಾರದಲ್ಲೂ ಸರ್ಕಾರದ ನಿಲುವಿನಲ್ಲಿ ವೈರುಧ್ಯವಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಯಾವುದೇ ಸಬ್ಸಿಡಿ ಬಾಕಿ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದರೆ, ಇಂಧನ ಇಲಾಖೆಗೆ ಸಬ್ಸಿಡಿ ಹಣ ಬಿಡುಗಡೆ ಮಾಡಬೇಕಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ ಎಂದು ಅಶೋಕ್ ಹೇಳಿದ್ದಾರೆ.