ರಾಜ್ಯದಲ್ಲಿ ಭೀಕರ ಬರ: 177 ತಾಲೂಕುಗಳು ಬರಪೀಡಿತ, ಇನ್ನೂ 20-30 ತಾಲೂಕು ಸೇರ್ಪಡೆ ಸಾಧ್ಯತೆ..!

ಕಳೆದ 150 ವರ್ಷಗಳಲ್ಲೇ ಈ ಬಾರಿ ಮಳೆ ಕೊರತೆ ಅತ್ಯಂತ ತೀವ್ರವಾಗಿದ್ದು, 1876ರ ಬರ ಪರಿಸ್ಥಿತಿಗೆ ಹೋಲಿಕೆಯಾಗುತ್ತದೆ. ಸಾಮಾನ್ಯವಾಗಿ ರಾಜ್ಯದಲ್ಲಿ 852 ಮಿ.ಮೀ. ಮಳೆಯಾಗಬೇಕಿದ್ದು, ಈ ಬಾರಿ ಕೇವಲ 642 ಮಿ.ಮೀ. ಮಳೆಯಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಾದ್ಯಂತ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನೂ ಕೆಲವು ತಾಲೂಕುಗಳ ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಈ ಸಂಖ್ಯೆ ಸುಮಾರು 200ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಅವರು ಮಂಗಳವಾರ ಹೇಳಿದ್ದಾರೆ.

ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಧಾನ ಪರಿಷತ್‌ನ ವಿಶೇಷ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಸೋಮವಾರ ತೀವ್ರ ವಾಗ್ವಾದ ನಡೆಯಿತು.

ಚರ್ಚೆ ವೇಳೆ ಮಾತನಾಡಿದ ಪರಮೇಶ್ವರ್ ಅವರು, ಇದು “ಸೂಪರ್‌ ಎಲ್‌ನಿನೊ ಪರಿಣಾಮದಿಂದ ಉಂಟಾದ ಬರ” ಎಂದು ಹೇಳಿದರು.

ಕಳೆದ 150 ವರ್ಷಗಳಲ್ಲೇ ಈ ಬಾರಿ ಮಳೆ ಕೊರತೆ ಅತ್ಯಂತ ತೀವ್ರವಾಗಿದ್ದು, 1876ರ ಬರ ಪರಿಸ್ಥಿತಿಗೆ ಹೋಲಿಕೆಯಾಗುತ್ತದೆ. ಸಾಮಾನ್ಯವಾಗಿ ರಾಜ್ಯದಲ್ಲಿ 852 ಮಿ.ಮೀ. ಮಳೆಯಾಗಬೇಕಿದ್ದು, ಈ ಬಾರಿ ಕೇವಲ 642 ಮಿ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ.46ರಷ್ಟು ಹಾಗೂ ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ.44ರಷ್ಟು ಮಳೆ ಕೊರತೆಯಾಗಿದೆ.

ಇದು ನಾಲ್ಕು ಅಥವಾ 10 ತಾಲೂಕುಗಳಿಗೆ ಸೀಮಿತವಾದ ಬರವಲ್ಲ. ಇಡೀ ರಾಜ್ಯವನ್ನು ಬರ ಪರಿಸ್ಥಿತಿ ಬಾಧಿಸಿದೆ. ಬೆಳೆ ನಷ್ಟ ಸುಮಾರು ಶೇ.82ರಷ್ಟಿದ್ದು, ಹಲವು ರೈತರು ಎರಡು ಬಾರಿ ಬಿತ್ತನೆ ಮಾಡಿಯೂ ಬೆಳೆ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸರ್ಕಾರದ ಬರ ನಿರ್ವಹಣಾ ಕ್ರಮಗಳನ್ನು ವಿವರಿಸಿದ ಅವರು, ಆರಂಭದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಬಳಿಕ 23 ತಾಲೂಕುಗಳನ್ನು ಸೇರಿಸಲಾಯಿತು. ಇದೀಗ ಮತ್ತಷ್ಟು 53 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದ್ದು, ಒಟ್ಟು ಸಂಖ್ಯೆ 177ಕ್ಕೆ ತಲುಪಿದೆ ಎಂದು ಹೇಳಿದರು.

2020ರ ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸ್ಥಳ ಪರಿಶೀಲನೆಯ ಆಧಾರದ ಮೇಲೆ ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಯಾವುದೇ ತಾಲೂಕನ್ನು ಬೇಕಾಬಿಟ್ಟಿಯಾಗಿ ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ. ನಿಗದಿತ ಮಾನದಂಡಗಳನ್ನು ಪೂರೈಸಬೇಕು. ಮುಂದಿನ ಹಂತದ ಪರಿಶೀಲನೆಯಲ್ಲಿ ಇನ್ನೂ 20ರಿಂದ 30 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಈಗಾಗಲೇ ಪ್ರತಿ ಜಿಲ್ಲೆಗೆ ರೂ.5 ಕೋಟಿ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.1 ಕೋಟಿ ಬಿಡುಗಡೆ ಮಾಡಿದೆ. ಆರಂಭದಲ್ಲಿ 101 ಬರಪೀಡಿತ ತಾಲೂಕುಗಳಲ್ಲಿ ಉಂಟಾಗಿರುವ ರೂ.18,000 ಕೋಟಿ ನಷ್ಟಕ್ಕೆ ಪರಿಹಾರವಾಗಿ ರೂ.3,500 ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮೊದಲ ಮನವಿಪತ್ರ ಸಲ್ಲಿಸಲಾಗಿದೆ ಎಂದರು.

File photo
ಬರ, ಆರ್ಥಿಕ ಒತ್ತಡ: ಹೊಸ ಯೋಜನೆ ಘೋಷಣೆ ಮುನ್ನ ವಾಸ್ತವ ತಿಳಿದುಕೊಳ್ಳಿ; CM ಡಿ.ಕೆ ಶಿವಕುಮಾರ್ ಗೆ ಹಣಕಾಸು ಇಲಾಖೆ ಎಚ್ಚರಿಕೆ!

ಹೆಚ್ಚಿನ ಪರಿಹಾರ ಪಡೆಯಲು ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲು ಸರ್ವಪಕ್ಷ ನಿಯೋಗವನ್ನು ಕರೆದೊಯ್ಯುವ ಪ್ರಸ್ತಾವನೆಯನ್ನೂ ಅವರು ಮುಂದಿಟ್ಟರು.

ಈ ಅಧಿವೇಶನ ಬರದ ವಿಚಾರಕ್ಕೆ ಮಾತ್ರ ಸೀಮಿತವಾಗಿಲ್ಲ. ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಎಲ್ಲ ಸದಸ್ಯರು ಪಕ್ಷಭೇದ ಮರೆತು ರೈತರು ಸಂಕಷ್ಟದಿಂದ ಹೊರಬರಲು ಹೇಗೆ ನೆರವಾಗಬಹುದು ಎಂಬುದರ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಚರ್ಚೆಯಲ್ಲಿ ಭಾಗವಹಿಸಿದ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಪರಿಸ್ಥಿತಿ ಗಂಭೀರವಾಗಿದೆ ಎಂಬುದನ್ನು ಒಪ್ಪಿಕೊಂಡರು. ಆದರೆ, ಭಾರತೀಯ ಹವಾಮಾನ ಇಲಾಖೆ ನಾಲ್ಕೈದು ತಿಂಗಳ ಹಿಂದೆಯೇ ಮುನ್ನೆಚ್ಚರಿಕೆ ನೀಡಿದ್ದರೂ ಸರ್ಕಾರ ಏಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಎಸ್‌.ಎಂ. ಕೃಷ್ಣ ಅವರ ಸರ್ಕಾರದ ಅವಧಿಯಲ್ಲೂ ಬರದ ಮುನ್ಸೂಚನೆ ಬಂದ ತಕ್ಷಣ ಮೋಡ ಬಿತ್ತನೆ ಆರಂಭಿಸಲಾಗಿತ್ತು. ಈ ಸರ್ಕಾರ ಏಕೆ ಮೌನವಾಗಿತ್ತು? ನಿರ್ಣಾಯಕ ಸಂದರ್ಭದಲ್ಲಿ ಸರ್ಕಾರ ಅಗತ್ಯ ಎಚ್ಚರಿಕೆ ವಹಿಸಿಲ್ಲ ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರ ನಿರ್ವಹಣೆಗಾಗಿ ಪ್ರತಿ ಜಿಲ್ಲಾಧಿಕಾರಿಗೆ ತಕ್ಷಣ ರೂ.100 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ. ಈಗ ಪ್ರತಿ ಜಿಲ್ಲೆಗೆ ಕೇವಲ ರೂ.5 ಕೋಟಿ ನೀಡಲಾಗಿದೆ. ಬರ ನಿರ್ವಹಣೆಗೆ ಪ್ರತ್ಯೇಕ ವಿಪತ್ತು ನಿರ್ವಹಣಾ ಉಪಸಮಿತಿ ರಚಿಸದಿರುವುದನ್ನು ಟೀಕಿಸಿದರು.

ಕಡತಗಳು ಧೂಳು ಹಿಡಿಯುತ್ತಿವೆ. ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ಎಲ್ಲವೂ ಕೇವಲ ಮಾತುಗಳಾಗಿಯೇ ಉಳಿಯುತ್ತದೆ ಎಂದು ಹೇಳಿದರು.

ಕಾವೇರಿ ಜಲಾನಯನ ಪ್ರದೇಶದ, ವಿಶೇಷವಾಗಿ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಸಂಕಷ್ಟದ ಬಗ್ಗೆಯೂ ಅವರು ಗಮನ ಸೆಳೆದರು. ನೀರಿನ ಕೊರತೆಯಿಂದ ಕಳೆದ ವರ್ಷ 44 ಲಕ್ಷ ಹೆಕ್ಟೇರ್‌ನಷ್ಟಿದ್ದ ಕಬ್ಬು ಪ್ರದೇಶ ಈ ವರ್ಷ 18 ಲಕ್ಷ ಹೆಕ್ಟೇರ್‌ಗೆ ಇಳಿಕೆಯಾಗಿದೆ ಎಂದು ಹೇಳಿದರು.

ರೈತರ ಆತ್ಮಹತ್ಯೆ, ಮೇವಿನ ಕೊರತೆ, ಕೊಳವೆಬಾವಿಗಳು ವಿಫಲವಾಗಿರುವುದು ಹಾಗೂ ವಿದ್ಯುತ್‌ ಕಡಿತ ಸೇರಿದಂತೆ ಹಲವು ಸಮಸ್ಯೆಗಳು ಕೃಷಿ ಕ್ಷೇತ್ರದ ಸಂಕಷ್ಟ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿವೆ ಎಂದು ನಾರಾಯಣಸ್ವಾಮಿ ಹೇಳಿದರು.

ನಾಯಕತ್ವದ ವಿಚಾರವಾಗಿ ಸರ್ಕಾರದ ನಾಯಕರು ದೆಹಲಿಗೆ “ಹತ್ತಾರು ಬಾರಿ” ಭೇಟಿ ನೀಡಿದ್ದಾರೆ. ಆದರೆ ಬರದ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಮಾತ್ರ ದೆಹಲಿಗೆ ಹೋಗಿಲ್ಲ ಎಂದು ಅವರು ಆರೋಪಿಸಿದರು.

ಇದಕ್ಕೆ ಸಚಿವರು ಮಧ್ಯಪ್ರವೇಶಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರವೇ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗಿದ್ದು, ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ಮಾತಿನ ಮೇಲೆ ಮಾತು ಆರಂಭಿಸಿದ್ದರಿಂದ ಸದನದಲ್ಲಿ ಗದ್ದಲ ಉಂಟಾಯಿತು. ನಾರಾಯಣಸ್ವಾಮಿ ತಮ್ಮ ಭಾಷಣ ಪೂರ್ಣಗೊಳಿಸಲು ಸಮಯ ನೀಡುವಂತೆ ಪದೇಪದೇ ಮನವಿ ಮಾಡಿದರು.

ಸಭಾಪತಿ ಸಲಿಂ ಅಹ್ಮದ್‌ ಅವರು ಹಲವು ಬಾರಿ ಮಧ್ಯಪ್ರವೇಶಿಸಿ, ಸದಸ್ಯರು ಶಾಂತವಾಗಿದ್ದು ಚರ್ಚೆ ಮುಂದುವರಿಯಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಗದ್ದಲ ಮುಂದುವರಿದು ಸುಸೂತ್ರ ಚರ್ಚೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸಭಾಪತಿ ಸದನವನ್ನು ಕೆಲಕಾಲ ಮುಂದೂಡಿದರು. ಅಲ್ಪ ವಿರಾಮದ ಬಳಿಕ ಮತ್ತೆ ಸಭೆ ಸೇರಿ ಚರ್ಚೆ ಮುಂದುವರಿಸುವುದಾಗಿ ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com