

ಬೆಂಗಳೂರು: ಕೆಪಿಎಸ್‌ಸಿ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅದರಲ್ಲೂ, ತನಿಖಾ ತಂಡದ ನೇತೃತ್ವ ವಹಿಸಬೇಕಾದ ಅಧಿಕಾರಿಯನ್ನು ಹೈಕೋರ್ಟ್ ಸ್ವತಃ ಹೆಸರಿಸಿ ಆದೇಶಿಸಿರುವುದಕ್ಕೆ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ:
ಸರ್ಕಾರದ ಆಕ್ಷೇಪಕ್ಕೆ ಕಾರಣವೇನು?
ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಾಗೂ ಇತರ ಪರೀಕ್ಷೆಗಳಲ್ಲಿ ನಡೆದಿರುವ ಭಾರಿ ಭ್ರಷ್ಟಾಚಾರದ ಆರೋಪದ ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸಿಐಡಿ ಇಲಾಖೆಯಿಂದ ಹಿಂಪಡೆದು, ಎಸ್‌ಐಟಿಗೆ ವಹಿಸಿದ್ದರು. ಈ ವೇಳೆ, ತನ್ನ ಆದೇಶದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹೆಸರನ್ನೇ ಉಲ್ಲೇಖಿಸಿ ಅವರ ನೇತೃತ್ವದಲ್ಲೇ ಎಸ್‌ಐಟಿ ರಚಿಸುವಂತೆ ಸೂಚಿಸಿದೆ. ಹಾಗಾಗಿ, ತನಿಖಾಧಿಕಾರಿಯನ್ನು ಕೋರ್ಟ್ ನಿರ್ದೇಶಿಸುವುದಕ್ಕೆ ಮುಂಚಿನ ಉದಾಹರಣೆಗಳನ್ನು ಆಧರಿಸಿ ಕಾನೂನುಬದ್ಧವಾಗಿ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸರ್ಕಾರ ನಿರ್ಧರಿಸಿದೆ.
ಸಿಐಡಿ ತನಿಖೆ ನಡೆಯುವಾಗ ಎಸ್‌ಐಟಿ ಯಾಕೆ?
ಹೈಕೋರ್ಟ್ ನಿರ್ದಿಷ್ಟ ಅಧಿಕಾರಿಗಳನ್ನು ಹೆಸರಿಸಿ ಎಸ್‌ಐಟಿ ರಚಿಸಲು ಸೂಚಿಸಿರುವುದಕ್ಕೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈಗಾಗಲೇ ಅಪರಾಧ ತನಿಖಾ ಇಲಾಖೆ (ಸಿಐಡಿ) ಈ ಪ್ರಕರಣದ ಶೇ. 80ರಷ್ಟು ತನಿಖೆ ಮುಗಿಸಿದೆ. ಅದರಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸೇರಿದಂತೆ ಹಲವರನ್ನು ಬಂಧಿಸಿ, ಮಹತ್ವದ ದಾಖಲೆ, ಹಣ, ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಅಧಿಕಾರಿಗಳು ದಕ್ಷವಾಗಿ ಕೆಲಸ ಮಾಡುತ್ತಿರುವಾಗ ನಿರ್ದಿಷ್ಟ ಅಧಿಕಾರಿಗಳನ್ನೇ ಹೆಸರಿಸಿ ಎಸ್‌ಐಟಿ ರಚಿಸಲು ಹೇಳಿರುವುದು ತಪ್ಪು ಸಂದೇಶ ರವಾನಿಸುತ್ತದೆ ಎಂಬುದು ಸರ್ಕಾರದ ಮುಖ್ಯ ವಾದವಾಗಿದೆ. ಇನ್ನು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಯಾವ ಅಧಿಕಾರಿಯನ್ನು ತನಿಖಾ ತಂಡಕ್ಕೆ ನೇಮಿಸಬೇಕು ಎಂಬುದು ಕಾರ್ಯಾಂಗದ (ಸರ್ಕಾರದ) ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ನ್ಯಾಯಾಲಯಗಳು ಹೇಗೆ ಹಸ್ತಕ್ಷೇಪ ಮಾಡಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
ಎಸ್‌ಐಟಿ ರಚನೆಯಿಂದ ಸರಕಾರಕ್ಕೆ ಢವಢವ!
ಏತನ್ಮಧ್ಯೆ, ಈ ಎಸ್‌ಐಟಿ ತನಿಖಾ ವ್ಯಾಪ್ತಿ ಕೇವಲ ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಆರೋಪಿ ಜ್ಞಾನೇಂದ್ರ ಕುಮಾರ್ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದ ಕೆಎಎಸ್, ಎಇ ಸೇರಿದಂತೆ ಕಳೆದ ಮೂರ್ನಾಲ್ಕು ವರ್ಷಗಳ ಎಲ್ಲಾ ನೇಮಕಾತಿ ಪರೀಕ್ಷೆಗಳಿಗೂ ವಿಸ್ತರಿಸಬಹುದು ಎನ್ನಲಾಗಿದೆ. ಅಂದರೆ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ತನಿಖಾ ವ್ಯಾಪ್ತಿಗೆ ಸಂಬಂಧಿಸಿದಂತೆ, ಕೇವಲ ಎಫ್‌ಐಆರ್‌ನಲ್ಲಿ ಹೆಸರಿಸಲಾದ ವ್ಯಕ್ತಿಗಳು, ಪ್ರಸ್ತುತ ಮಾಡಲಾದ ಆರೋಪಗಳು ಅಥವಾ ಸದ್ಯಕ್ಕೆ ಕಾಣಿಸುತ್ತಿರುವ ಚೌಕಟ್ಟಿಗೆ ಮಾತ್ರ ಸೀಮಿತಗೊಳಿಸಬಾರದು ಎಂದು ಸ್ಪಷ್ಟಪಡಿಸಿದೆ.
ಜೊತೆಗೆ, ವಿಚಾರಣೆ ವೇಳೆ ಸಂಗ್ರಹವಾಗುವ ಸಾಕ್ಷ್ಯಗಳು ಬೇರೆ ಯಾವುದೇ ವ್ಯಕ್ತಿಗಳು, ಇತರ ಅಕ್ರಮಗಳು ಅಥವಾ ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿರುವುದು ಕಂಡುಬಂದರೆ, ಸಾಕ್ಷ್ಯಗಳು ಎಲ್ಲಿಗೆ ಕರೆದೊಯ್ಯುತ್ತವೆಯೋ ಅಲ್ಲಿಯವರೆಗೂ ಕಾನೂನು ಪ್ರಕಾರ ತನಿಖೆ ಮುಂದುವರಿಸಲು ಎಸ್‌ಐಟಿಗೆ ಮುಕ್ತ ಅಧಿಕಾರ ನೀಡಲಾಗಿದೆ. ಇದರಿಂದ ಹಲವು ಪ್ರಭಾವಿಗಳು, ಶಾಸಕರು ಮತ್ತು ಸಚಿವರ ಹೆಸರುಗಳು ಹೊರಬರುವ ಸಾಧ್ಯತೆ ಇದ್ದು, ರಾಜಕೀಯವಾಗಿ ಭಾರಿ ಹಿನ್ನಡೆಯಾಗುವ ಭಯ ಸರ್ಕಾರವನ್ನು ಕಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.