ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಕಾವೇರಿ ಕದನ: 20 TMC ನೀರಿಗೆ ತಮಿಳುನಾಡು ಪಟ್ಟು, ಬರ ಪರಿಸ್ಥಿತಿ ಮುಂದಿಟ್ಟ ಕರ್ನಾಟಕ..!

ತಮಿಳುನಾಡು ತನ್ನ ಪಾಲಿನ ನೀರಿನಲ್ಲಿ 20 ಟಿಎಂಸಿ ಕೊರತೆಯಾಗಿದೆ ಎಂದು ಆರೋಪಿಸಿ, ಬೆಳೆ ನಷ್ಟದ ವಿಚಾರವನ್ನು ಮುಂದಿಟ್ಟರೆ, ಕರ್ನಾಟಕವು ತನ್ನ ಜಲಾನಯನ ಪ್ರದೇಶದಲ್ಲೇ ಬರ ಪರಿಸ್ಥಿತಿ ಇದೆ ಎಂದು ಸಮರ್ಥಿಸಿಕೊಂಡಿದೆ.
Cauvery water
ಕಾವೇರಿ ಜಲ
Updated on

ನವದೆಹಲಿ/ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಾದ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಧ್ವನಿಸಿದೆ.

ತಮಿಳುನಾಡು ತನ್ನ ಪಾಲಿನ ನೀರಿನಲ್ಲಿ 20 ಟಿಎಂಸಿ ಕೊರತೆಯಾಗಿದೆ ಎಂದು ಆರೋಪಿಸಿ, ಬೆಳೆ ನಷ್ಟದ ವಿಚಾರವನ್ನು ಮುಂದಿಟ್ಟರೆ, ಕರ್ನಾಟಕವು ತನ್ನ ಜಲಾನಯನ ಪ್ರದೇಶದಲ್ಲೇ ಬರ ಪರಿಸ್ಥಿತಿ ಇದೆ ಎಂದು ಸಮರ್ಥಿಸಿಕೊಂಡಿದೆ.

ನೀರಿನ ಕೊರತೆಯ ನಡುವೆಯೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ನೀರು ಬಿಡುಗಡೆ ಮಾಡುತ್ತಿರುವುದಾಗಿ ಕರ್ನಾಟಕ ತಿಳಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಗುರುವಾರ ತಮಿಳುನಾಡಿನ ಅರ್ಜಿಯನ್ನು ವಿಚಾರಣೆ ನಡೆಸಿತು. ಈ ವೇಳೆ ಎರಡೂ ರಾಜ್ಯಗಳು ಕಾವೇರಿ ಜಲ ಲಭ್ಯತೆ ಮತ್ತು ನೀರು ಹಂಚಿಕೆ ಕುರಿತು ತಮ್ಮ ವಾದಗಳನ್ನು ಮಂಡಿಸಿದವು.

ತಮಿಳುನಾಡಿನ ಪರ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ವಾದ ಮಂಡಿಸಿ, ನೀರಿನ ಕೊರತೆಯಿಂದಾಗಿ ರಾಜ್ಯದ ‘ಪೂರ್ವೈ’ ಬೆಳೆ ಈಗಾಗಲೇ ನಷ್ಟವಾಗಿದೆ ಎಂದು ತಿಳಿಸಿದರು.

ಕರ್ನಾಟಕವು ಕಾವೇರಿ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಕಾವೇರಿ ನೀರು ಹಂಚಿಕೆ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ನ್ಯಾಯಾಲಯದ ನಿರ್ದೇಶನ ಕೋರಿದರು.

ಈ ವೇಳೆ ತಮಿಳುನಾಡಿನಲ್ಲಿ ನೀರಿನ ಕೊರತೆ ಎಷ್ಟಿದೆ ಎಂದು ನ್ಯಾಯಪೀಠ ಪ್ರಶ್ನಿಸಿದಾಗ, ರಾಜ್ಯವು ಕೊರತೆಯನ್ನು 20 ಟಿಎಂಸಿ ಎಂದು ಅಂದಾಜಿಸಿದೆ ಎಂದು ವೈದ್ಯನಾಥನ್ ತಿಳಿಸಿದರು. ಆದರೆ, ಕರ್ನಾಟಕವು ನೀರಿನ ಕೊರತೆ 16 ಟಿಎಂಸಿ ಎಂದು ಹೇಳಿದೆ ಎಂದರು.

ಬಳಿಕ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ನೀರಿನ ಕೊರತೆಯನ್ನು ಸಮರ್ಪಕವಾಗಿ ಪರಿಹರಿಸಲು ವಿಫಲವಾಗಿವೆ ಎಂದು ತಮಿಳುನಾಡು ಆರೋಪಿಸಿತು. ಕೊರತೆಯಿರುವ ನೀರನ್ನು ಪೂರೈಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿತು.

ಇದಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತು. ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ವಾದ ಮಂಡಿಸಿ, ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರದಂತಹ ಪರಿಸ್ಥಿತಿ ಇದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Cauvery water
'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ನೀರಿನ ಅಭಾವದ ನಡುವೆಯೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನಗಳಿಗೆ ಅನುಗುಣವಾಗಿ ನೀರು ಬಿಡುಗಡೆ ಮುಂದುವರಿಸಲಾಗಿದೆ ಎಂದು ಹೇಳಿದರು.

“ಇದು ನಮಗೆ ಕಠಿಣ ಪರಿಸ್ಥಿತಿಯಾಗಿದೆ. ಆದರೂ ನಾವು ನಿರ್ದೇಶನಗಳನ್ನು ಪಾಲಿಸುತ್ತಿದ್ದೇವೆ” ಎಂದು ದಿವಾನ್ ತಿಳಿಸಿದರು.

ಮಳೆಗಾಲ ಹಿಂತಿರುಗುತ್ತಿದ್ದು, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಅವರು ವಾದಿಸಿದರು. ಆದರೆ, ತಮಿಳುನಾಡಿಗೆ ಈಶಾನ್ಯ ಮುಂಗಾರು ಮಳೆಯ ಲಾಭ ದೊರೆಯಲಿದೆ ಎಂದು ತಿಳಿಸಿದರು.

ಈ ವೇಳೆ ಕರ್ನಾಟಕ ಈಗಾಗಲೇ 6,000 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿರುವುದನ್ನು ನ್ಯಾಯಪೀಠ ಗಮನಿಸಿತು. ತಮಿಳುನಾಡಿನ ಪ್ರಮುಖ ದೂರು ನೀರಿನ ಕೊರತೆಯ ಕುರಿತಾಗಿದ್ದು, ಈ ವಿಚಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೇ ಪರಿಶೀಲಿಸಬೇಕಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಬಳಿಕ ತಮಿಳುನಾಡು ಸಲ್ಲಿಸಿರುವ ಅರ್ಜಿಗೆ ಕರ್ನಾಟಕದ ಪ್ರತಿಕ್ರಿಯೆ ಪಡೆಯಲು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿತು.

ಇದಕ್ಕೂ ಮೊದಲು, ಆಗಸ್ಟ್ 3ರಂದು ತಮಿಳುನಾಡು ಸುಪ್ರೀಂ ಕೋರ್ಟ್‌ನ್ನು ಸಂಪರ್ಕಿಸಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಜುಲೈ 30ರಂದು ನೀಡಿದ್ದ ನಿರ್ದೇಶನದಂತೆ ಕರ್ನಾಟಕವು 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಲಾಗಿತ್ತು. ಆದರೆ, ಈ ನಿರ್ದೇಶನ ಜಾರಿಯಾಗಿಲ್ಲ ಎಂದು ಆರೋಪಿಸಿ ತಮಿಳುನಾಡು ಅರ್ಜಿ ಸಲ್ಲಿಸಿತ್ತು.

ಕರ್ನಾಟಕದ ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಂತೆ ನೀಡಿದ್ದ ನಿರ್ದೇಶನವನ್ನು ಜಾರಿಗೊಳಿಸಿಲ್ಲ ಎಂದು ತಮಿಳುನಾಡು ಹೇಳಿತು.

15 ದಿನಗಳ ಅವಧಿಗೆ ಪ್ರತಿದಿನ 3,500 ಕ್ಯುಸೆಕ್‌ನಂತೆ ಒಟ್ಟು 4.536 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ರಾಜ್ಯವು ಮನವಿ ಮಾಡಿತ್ತು. ಆಗಸ್ಟ್ 12ರೊಳಗೆ ನಿಗದಿತ ಪ್ರಮಾಣದ ನೀರು ತಮಿಳುನಾಡಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಕೋರಿತ್ತು.

ಕಾವೇರಿ ನೀರು ಹಂಚಿಕೆ ವಿಚಾರವನ್ನು ಪರಿಹರಿಸಿ, ನಿಗದಿತ ಅವಧಿಯಲ್ಲಿ ತಮಿಳುನಾಡಿಗೆ ಅದರ ಪಾಲಿನ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com