

ಬೆಂಗಳೂರು: ಬರಗಾಲದ ಪರಿಸ್ಥಿತಿಯಲ್ಲಿ ನಾವು ರೈತರನ್ನು ಬದುಕಿಸಬೇಕು. ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನು ಮನ್ನಾ ಮಾಡಲಿ. ನಮ್ಮ ರಾಜ್ಯದ ಪಾಲನ್ನು ಭರಿಸಲು ಸಿದ್ಧರಿದ್ದೇವೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.
ವಿಧಾನಮಂಡಲದ ಉಭಯ ಸದನಗಳಲ್ಲಿ ಬರದ ವಿಚಾರವಾಗಿ ನಡೆದ ವಿಶೇಷ ಚರ್ಚೆ ಬಳಿಕ ಸಿಎಂ ಡಿ ಕೆ ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಮಾತುಗಳಿಗೆ ಉತ್ತರ ನೀಡಿದರು.
ರೈತರ ಸಾಲಮನ್ನಾ ಬಗ್ಗೆ ಸದನದಲ್ಲಿ ಚರ್ಚೆ ನಡೆದಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಬೆಂಬಲಿತ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಿದ್ದಾರೆ. 80 ಶಾಸಕರ ಸಂಖ್ಯಾಬಲವಿದ್ದ ನಾವು ಬೆಂಬಲ ನೀಡದೇ ಇದ್ದಿದ್ದರೆ 38 ಶಾಸಕರ ಬೆಂಬಲವಿದ್ದ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಲು ಆಗುತ್ತಿತ್ತೇ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಸಾಲ ಮನ್ನಾ ಮಾಡಿದರು. ನೀವೆಲ್ಲರೂ ಸರ್ವಪಕ್ಷ ನಿಯೋಗದಲ್ಲಿ ಬರುವುದಾಗಿ ತಿಳಿಸಿದ್ದೀರಿ. ನಾವೆಲ್ಲರೂ ಒಟ್ಟಾಗಿ ಹೋಗೋಣ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರನ್ನು ಬೇಡಿಕೊಳ್ಳೋಣ. ಕೇಂದ್ರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮಾಡಿದ್ದು, ರೈತರ ಸಾಲವನ್ನು ಮನ್ನಾ ಮಾಡಲಿ. ಬೇಕಿದ್ದರೆ ಎಲ್ಲಾ ಕಾರ್ಯಕ್ರಮ ನಿಲ್ಲಿಸಿ ರೈತರಿಗಾಗಿ ಈ ತೀರ್ಮಾನ ಮಾಡುತ್ತೇನೆ. 50:50, 60:40, 70:30 ಯಾವ ಸೂತ್ರಕ್ಕಾದರೂ ಸರಿ ನಮಗೆ ಕೇಂದ್ರ ಸರ್ಕಾರದಿಂದ ಏನಾದರೂ ಕೊಡಿಸಿ ಎಂದು ವಿರೋಧ ಪಕ್ಷದ ನಾಯಕರಿಗೆ ಆಗ್ರಹಿಸಿದರು.
ಕಳೆದ ಬಾರಿ ನಾವು ಕೋರ್ಟ್ ಮೆಟ್ಟಿಲೇರಿ 3 ಸಾವಿರ ಕೋಟಿ ಪರಿಹಾರ ಪಡೆದಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆಸೇರುವುದು ಕೂಡ ಇತಿಹಾಸ. ಆ ಸಂದರ್ಭದಲ್ಲಿ ಒಬ್ಬ ಸಂಸದ ಪ್ರಧಾನಮಂತ್ರಿಗಳ ಮುಂದೆ ಹೋಗಿ ಬಾಯಿ ಬಿಡಲಿಲ್ಲ. ಈಗ ನಮ್ಮ ವಿರೋಧ ಪಕ್ಷದ ನಾಯಕರು ಪ್ರಧಾನಮಂತ್ರಿಗಳ ಭೇಟಿಗೆ ನಾನು ಬರುತ್ತೇನೆ ಎಂದು ಹೇಳಿದ್ದು, ಅವರಿಗೆ ಅಭಿನಂದನೆ, ನಮನ ಸಲ್ಲಿಸುತ್ತೇನೆ. ಅವರು ಈ ಮಾತು ಹೇಳಿದ ಕೂಡಲೇ ನಾನು ಪ್ರಧಾನಮಂತ್ರಿಗಳಿಗೆ ಸಮಯಾವಕಾಶ ಕೋರಿ ಪತ್ರ ಬರೆಯಲಿದ್ದೇನೆ. ನಾನು ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುವೆ, ಅವರು ಅವರ ಸಂಬಂಧದಲ್ಲಿ ಕಾಲಾವಕಾಶ ಕೋರಲಿ. ಈ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇನೆ ಎಂದು ಭರವಸೆ ನೀಡಿದರು.
ನಾವು ಕೆಲಸ ಮಾಡಿದವರೆಲ್ಲಾ ನಮಗೆ ಮತ ಹಾಕುವುದಿಲ್ಲ. 1.36 ಕೋಟಿ ಜನ ನಮಗೆ ಮತಹಾಕಿದ್ದಾರೆ, ನಾವು 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, 4.40 ಕೋಟಿ ಜನರಿಗೆ 10 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ನೀಡಿದ್ದೇವೆ. ಅವರೆಲ್ಲರೂ ನಮಗೆ ಮತ ಹಾಕುತ್ತಾರಾ? ಮಂಗಳೂರು, ಉಡುಪಿಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಆದರೂ ನಾವು ಈ ರಾಜ್ಯದ ಮಹಿಳೆಯರನ್ನು ನಮ್ಮ ತಾಯಂದಿರು ಎಂದು ಭಾವಿಸಿ ಎಲ್ಲರಿಗೂ ಯೋಜನೆ ನೀಡುತ್ತಿದ್ದೇವೆ. ಆದರೆ ಅಸ್ಸಾಂ ರಾಜ್ಯದಲ್ಲಿ ನೀವು ಆ ಪಕ್ಷಕ್ಕೆ ಮತ ಹಾಕಿದ್ದರೆ ಮಾತ್ರ ನಿಮಗೆ ಯೋಜನೆ. ನಾವು ಆ ರೀತಿ ಮಾಡುವುದಿಲ್ಲ. ಹೀಗಾಗಿ ಮತಕ್ಕೂ ಅಭಿವೃದ್ಧಿ ಕೆಲಸಕ್ಕೂ ವ್ಯತ್ಯಾಸವಿದೆ ಎಂದು ವಿವರಿಸಿದರು.
ನಾನು ಬೆಳಗಾವಿ, ಕಲಬುರ್ಗಿ, ಚಿತ್ರುದುರ್ಗದಲ್ಲಿ ವಿಭಾಗವಾರು ಸಭೆ ಮಾಡಿದೆ, ವಿವಿಧ ಜಿಲ್ಲೆಗಳಿಗೆ ಹೋಗಿ ಬರ ಅಧ್ಯಯನ ಮಾಡಿದೆ. ಕೆಲವು ಶಾಸಕರು ಹಾಲಿನ ದರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ನೆರೆಯ ತಮಿಳುನಾಡಿನಲ್ಲಿ 11 ರೂ. ದರ ಏರಿಕೆ ಮಾಡಿದ್ದಾರೆ. ನಮ್ಮ ಗಡಿ ಭಾಗದ ಹಾಲು ತಮಿಳುನಾಡು ಸೇರುತ್ತಿವೆ. ನಮ್ಮ ಮಲೆನಾಡಿನ ಸುರೇಶ್ ಶೆಟ್ಟಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಮೇವಿನ ಕೊರತೆ ಇದೆ. ಕೇಂದ್ರ ಸರ್ಕಾರ ನಮ್ಮ ನರೇಗಾ ಯೋಜನೆ ತೆಗೆದು ವಿಬಿ ಗ್ರಾಮ್ ಜಿ ಯೋಜನೆ ತಂದಿದೆ. ಬರ ಪ್ರದೇಶದಲ್ಲಿ 50 ದಿನ ಹೆಚ್ಚಿನ ಕೂಲಿ ನೀಡಲು ಅವಕಾಶವಿದೆ. ಈ ಹಿಂದೆ ಇದ್ದ 90:10 ಅನುಪಾತವನ್ನು ಈಗ 60:40 ಮಾಡಿದ್ದಾರೆ. ಆದರೂ ನಾವು ಒಪ್ಪಿದ್ದೇವೆ” ಎಂದು ಹೇಳಿದರು.
ರೈತರಿಗೆ ಕರೆಂಟ್ ಇಲ್ಲ ಎಂದು ಚರ್ಚೆ ಮಾಡಿದ್ದಾರೆ. ಕಲ್ಲಿದ್ದಲು ವಿದ್ಯುತ್ ಗೆ ನಮಗೆ ಅವಕಾಶ ನೀಡಲಿಲ್ಲ. ಹೀಗಾಗಿ ನಾನು ನವೀಕರಿಸಬಹುದಾದ ಇಂಧನದತ್ತ ಗಮನಹರಿಸಿದೆ. ಪಾವಗಡದಲ್ಲಿ ಒಬ್ಬ ರೈತನ ಜಮೀನು ಖರೀದಿ ಮಾಡದೇ, ಸೋಲಾರ್ ಪವರ್ ಪ್ಲಾಂಟ್ ಮಾಡಿದೆ. ಅದನ್ನು ನೋಡಿ ಕೇಂದ್ರ ಸರ್ಕಾರ ಕುಸುಮ್ ಯೋಜನೆ ಜಾರಿಗೆ ತಂದಿದೆ. ನಮ್ಮ ಸಚಿವರಾದ ಕೆ.ಜೆ ಜಾರ್ಜ್ ಅವರು ಪ್ರತಿ ಯುನಿಟ್ ಗೆ 22 ರೂ. ನೀಡಿ ವಿದ್ಯುತ್ ಖರೀದಿಸುವ ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ತಮಿಳುನಾಡು, 22, ಕೇರಳ 24 ರೂ.ಗೆ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ. ಪ್ರತಿ ವರ್ಷ ನಮ್ಮಲ್ಲಿ 10% ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಅದಾನಿ ಜತೆ ನೀನು ಕೆಲಸ ಮಾಡಿಲ್ಲವೇ ಸುನೀಲ್?
“ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ರಾಜ್ಯದ ಬಜೆಟ್ ಸುಮಾರು 18 ಸಾವಿರ ಕೋಟಿ ಇತ್ತು, ಕೃಷ್ಣಾ ಅವರ ಕಾಲದಲ್ಲಿ ಅದು ಸುಮಾರು 25 ಸಾವಿರ ಕೋಟಿಗೆ ಮುಟ್ಟಿತು. ನಂತರ ಹೆಚ್ಚಿನ ಆದಾಯ ಬಂದು ವರ್ಷಕ್ಕೆ ನಾಲ್ಕುವರೆ ಲಕ್ಷ ಕೋಟಿ ಬಜೆಟ್ ಮಂಡಿಸುತ್ತಿದ್ದೇವೆ. ಕರ್ನಾಟಕ ಆರ್ಥಿಕ ಶಿಸ್ತಿನ ರಾಜ್ಯ. ನಾನು ಇವತ್ತೂ ಸಾಲ ಮಾಡಬಹುದು. ನಾನು ಈಗಷ್ಟೇ ಹಣಕಾಸು ಸಚಿವನಾಗಿದ್ದೇನೆ. ನನಗೆ ಈ ವಿಚಾರದಲ್ಲಿ ಪರಿಣಿತಿ ಇದೆ ಎಂದು ಹೇಳುವುದಿಲ್ಲ.
ನಮ್ಮ ಸುನೀಲ್ ಅವರು ಅದಾನಿ ಅವರನ್ನಾದರೂ ಕರೆಯಲಿ, ಬೇರೆಯವರನ್ನಾದರೂ ಕರೆಯಲಿ. ಅದಾನಿ ನಮ್ಮ ಮನೆಗೆ ಬಂದರೋ ಅಥವಾ ನಾನು ಅದಾನಿ ಅವರನ್ನು ಹುಡುಕಿಕೊಂಡು ಹೋಗಿದ್ದೀನಾ? ಅದಾನಿ ಜತೆ ನೀನು ಕೆಲಸ ಮಾಡಿದ್ದೆಯಲ್ಲಪ್ಪಾ. ನಿಮ್ಮ ಕಾಲಲ್ಲೇ ಅನೇಕ ಕಾಮಗಾರಿ ಮಾಡಿದ್ದೀರಿ. ನನಗೆ ಟೀಕೆ ಮಾಡಲು ಇಷ್ಟವಿಲ್ಲ. ಗುತ್ತಿಗೆದಾರರು, ಉದ್ಯಮಿಗಳು ಬರುತ್ತಾರೆ ಹೋಗುತ್ತಾರೆ. ನಮ್ಮ ಯೋಜನೆಗೆ ಜಾಗತಿಕ ಹೂಡಿಕೆದಾರರು ಬರಲಿ ಎಂದು ಅದಕ್ಕೆ ಪ್ರತ್ಯೇಕ ಇಲಾಖೆ ರಚಿಸಲಾಗುತ್ತಿದೆ” ಎಂದು ಹೇಳಿದರು.
ಕೇಂದ್ರದಿಂದ ಕೂತರೂ ಜಿಎಸ್ಟಿ, ನಿಂತರೂ ಜಿಎಸ್ಟಿ
“ಬಂಡವಾಳ ಹೂಡಿಕೆದಾರರು ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಿರುವುದಕ್ಕೆ, ಪ್ರಪಂಚ ಬೆಂಗಳೂರು ನೋಡುತ್ತಿರುವುದಕ್ಕೆ , ಉದ್ಯೋಗ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಬರುವ ಆದಾಯವನ್ನು ಹಳ್ಳಿಗಳಿಗೆ ಬಳಸುತ್ತಿದ್ದೇವೆ. ಕನಕಪುರ ತಾಲ್ಲೂಕಿನಲ್ಲಿ 100 ಹೆಚ್ ಪಿ ಸಾಮರ್ಥ್ಯದ ಒಂದು ಕೈಗಾರಿಕೆ ಇಲ್ಲ. ಲಗುನಾ ಎಂಬ ಕಾರ್ಖಾನೆ ಬಿಟ್ಟರೆ ಬೇರೆ ಇಲ್ಲ. ಹಾರೋಹಳ್ಳಿ ರಾಮನಗರದಲ್ಲಿ ಇವೆ. ರಾಜ್ಯದ ಬೇರೆ ಭಾಗಗಳಿಂದ ಜನ ಬೆಂಗಳೂರಿಗೆ ವಲಸೆ ಬರುತ್ತಿರುವುದು ಉದ್ಯೋಗ ಹಾಗೂ ಶಿಕ್ಷಣಕ್ಕೆ. ನಾನು ಬೆಂಗಳೂರು ನಗರಕ್ಕೆ ಬಂದಿದ್ದು ಶಿಕ್ಷಣಕ್ಕೆ.
ಇಲ್ಲಿನ ಉತ್ತಮ ಹವಾಮಾನ, ಕಾವೇರಿ ನೀರು ನೋಡಿ ವಾಪಸ್ ಹೋಗುತ್ತಿಲ್ಲ. 20 ವರ್ಷಗಳಲ್ಲಿ 70 ಲಕ್ಷ ಜನಸಂಖ್ಯೆ ಹೆಚ್ಚಾಗಿದ್ದು, 45 ಲಕ್ಷ ಜನರು ಹೊರಗಿನಿಂದ ಬಂದು ಕೆಲಸ ಮಾಡುತ್ತಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರಿದ್ದಾರೆ. ಇಲ್ಲಿಂದ ಬರುತ್ತಿರುವ ಹಣ ಹೆಚ್ಚು ಹೋಗುತ್ತಿರುವುದು ಕೇಂದ್ರ ಸರ್ಕಾರಕ್ಕೆ. ಇಲ್ಲಿ ಕೂತರೂ ಜಿಎಸ್ಟಿ, ನಿಂತರೂ ಜಿಎಸ್ಟಿ. ರೈತರ ಟ್ರ್ಯಾಕ್ಟರ್ ಗೂ ಜಿಎಸ್ಟಿ” ಎಂದು ಕುಟುಕಿದರು.