

ಬೆಂಗಳೂರು: ಇಡೀ ಬೆಂಗಳೂರು ನಗರ ಜಿಲ್ಲೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಗೆ ತರಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ತಿಳಿಸಿದ್ದಾರೆ. ಈ ಕುರಿತು ಮೊನ್ನೆ ಸೆಪ್ಟೆಂಬರ್ 24ರಂದು ಅಧಿಸೂಚನೆ ಹೊರಡಿಸಲಾಗಿದೆ.
ಜಿಬಿಎ ವ್ಯಾಪ್ತಿಯ ಹೊರಗಿನ ನಗರ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸಚಿವರು BWSSB, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮುಂದಿನ 10 ವರ್ಷಗಳಿಗೂ ಹೆಚ್ಚು ಕಾಲ ಕುಡಿಯುವ ನೀರಿನ ಬೇಡಿಕೆಯನ್ನು ಅಂದಾಜಿಸುವಂತೆ ಬಿಡಬ್ಲ್ಯುಎಸ್ ಎಸ್ ಬಿಗೆ ಸೂಚಿಸಲಾಗಿದೆ. ನೀರಿನ ಸಂಗ್ರಹಣೆ, ನೀರು ಸಂಸ್ಕರಣಾ ಘಟಕಗಳು ಮತ್ತು ವಿತರಣಾ ಜಾಲದ ಮೇಲೆ ಯೋಜನೆ ಗಮನಹರಿಸಬೇಕು. ಇದರ ಜೊತೆಗೆ, ಅಂತರ್ಜಲ ಒಳಚರಂಡಿ ವ್ಯವಸ್ಥೆಗಾಗಿ ನೀಲನಕ್ಷೆಯನ್ನೂ ಸಿದ್ಧಪಡಿಸಲಾಗುವುದು.
ಇದರಡಿ ಹಂತ ಹಂತವಾಗಿ ಒಳಚರಂಡಿ ಜಾಲ ಹಾಗೂ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು. GBA ವ್ಯಾಪ್ತಿಯ ಹೊರಗಿನ ಜಿಲ್ಲೆಯ ಪ್ರದೇಶಗಳಿಗಾಗಿ ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು. ವಾಸ್ತವಿಕ ನಗರ ವಿಸ್ತರಣೆಗೆ ಅನುಗುಣವಾಗಿ ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಖಾತರಿಪಡಿಸಿದ ಕುಡಿಯುವ ನೀರು ಪೂರೈಸುವುದು ಸವಾಲಿನ ಕೆಲಸವಾಗಲಿದೆ. ಅಲ್ಲಿಯವರೆಗೆ ಅಂತರ್ಜಲವನ್ನೇ ಅವಲಂಬಿಸಬೇಕಾಗುತ್ತದೆ. ಪ್ರಸ್ತುತ ಶೇ.90ಕ್ಕೂ ಹೆಚ್ಚು ನೀರಿನ ಅಗತ್ಯವನ್ನು ಅಂತರ್ಜಲ ಮೂಲಗಳಿಂದಲೇ ಪೂರೈಸಲಾಗುತ್ತಿದೆ. ಈ ಅವಲಂಬನೆ ಇನ್ನೂ ಕೆಲಕಾಲ ಮುಂದುವರಿಯಲಿದೆ. ಇದರಿಂದ ಅಂತರ್ಜಲ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಮುಂದಿನ ದಿನಗಳಲ್ಲಿ ಜಲ ಭದ್ರತೆ ಸಾಧಿಸಲು ಅಂತರ್ಜಲ ಮಟ್ಟವನ್ನು ಪುನಶ್ಚೇತನಗೊಳಿಸುವುದು ಮತ್ತು ಸುಧಾರಿಸುವುದರತ್ತ ಗಮನಹರಿಸಲಾಗುವುದು. ಐತಿಹಾಸಿಕವಾಗಿ ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಕೆರೆಗಳು ಪ್ರಮುಖ ಪಾತ್ರ ವಹಿಸಿವೆ.
ಕುಡಿಯುವ ನೀರಿಗಾಗಿ ಅಂತರ್ಜಲದ ಅತಿಯಾದ ಬಳಕೆಯಿಂದಾಗಿ ಅಂತರ್ಜಲ ಮೂಲಗಳನ್ನು ಪುನಶ್ಚೇತನಗೊಳಿಸಲು, ಅಂತರ್ಜಲ ಮಟ್ಟ ಸುಧಾರಿಸಲು ಕೆರೆಗಳನ್ನು ನೀರಿನಿಂದ ತುಂಬಿಸಬೇಕಿದೆ ಎಂದು ಹೇಳಿದರು.
ಜಿಬಿಎ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ತುಂಬಿಸಲು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬಳಸುವ ಸಾಧ್ಯತೆಗಳ ಕುರಿತು ಯೋಜನೆ ರೂಪಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ.