

ಬೆಂಗಳೂರು: ನಕಲಿ ಔಷಧ ತಯಾರಿಕೆ ಮತ್ತು ಮಾರಾಟ ಜಾಲ ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್‌ನನ್ನ ವಿಶೇಷ ತನಿಖಾಧಿಕಾರಿಗಳ ತಂಡ ಬಂಧಿಸಿದೆ.
ಪ್ರಶಾಂತ್ ವಿರುದ್ಧ ಈಗಾಗಲೇ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಆತ ಅಜರ್‌ಬೈಜಾನ್‌ನಲ್ಲಿ ತಲೆಮರೆಸಿಕೊಂಡಿದ್ದ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿದ್ದವು. ವಿದೇಶದಿಂದ ವಾಪಸ್ ಬಂದ ಸಂದರ್ಭದಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಆತನನ್ನ ಬಂಧಿಸಿದ್ದಾರೆ.
ನಕಲಿ ಔಷಧ ಪ್ರಕರಣದ ತನಿಖೆ ವೇಳೆ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿರುವುದು ಪತ್ತೆಯಾಗಿತ್ತು. ಸೆಪ್ಟೆಂಬರ್ 9ರಂದು ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದ ಎನ್ನಲಾಗಿದೆ.
ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ ನಕಲಿ ಔಷಧ ತಯಾರಿಕೆ ಮತ್ತು ಪೂರೈಕೆ ಜಾಲದ ತನಿಖೆ ಮತ್ತೊಂದು ಹಂತ ತಲುಪಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ತನಿಖಾ ಸಂಸ್ಥೆ ಶಂಕಿಸಿರುವ ಪ್ರಶಾಂತ್ ರಂಜನ್ ಬಾಬುನನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ.
ಅಜರ್‌ಬೈಜಾನ್‌ನಿಂದ ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಪ್ರಶಾಂತ್‌ನನ್ನು ಲುಕ್‌ಔಟ್ ನೋಟಿಸ್ ಆಧರಿಸಿ ವಿಮಾನ ನಿಲ್ದಾಣದ ಆಗಮನ ವಿಭಾಗದಲ್ಲೇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಂತರ ಆತನನ್ನು ಎಸಿಪಿ ಅಂಜನ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಭಾರತ ಮತ್ತು ಅಜರ್‌ಬೈಜಾನ್ ನಡುವೆ ಆರೋಪಿಯನ್ನು ನೇರವಾಗಿ ಹಸ್ತಾಂತರಿಸಿಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ, ಆತ ಭಾರತಕ್ಕೆ ಮರಳುವವರೆಗೆ ತನಿಖಾ ಸಂಸ್ಥೆಗಳು ಕಾಯಬೇಕಾಗಿತ್ತು. ಭಾರತಕ್ಕೆ ಬಂದ ತಕ್ಷಣ ಲುಕ್‌ಔಟ್ ನೋಟಿಸ್ ಆಧರಿಸಿ ಆತನನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್ ಜೈನ್ ಕೂಡ ತನಿಖಾ ಸಂಸ್ಥೆಯ ಗಮನದಲ್ಲಿದ್ದಾನೆ. ಆಸ್ಪತ್ರೆಗಳು ಮತ್ತು ಮೆಡಿಕಲ್‌ಗಳಿಗೆ ನಕಲಿ ಔಷಧಗಳನ್ನು ತಲುಪಿಸುವ ಜಾಲದಲ್ಲಿ ವೀರೇಶ್ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈ ಜಾಲದ ವಾರ್ಷಿಕ ವಹಿವಾಟು ಸುಮಾರು 15 ಕೋಟಿ ರೂ. ಇತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.